RAHUL GANDHI : ಹೆಣ್ಣು ಯಾರ ಸ್ವತ್ತಲ್ಲ – ಮನುಸ್ಮೃತಿಯ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಪುಣೆಯಲ್ಲಿ ನಡೆದ ಮಹಿಳಾ ವಿಶೇಷ ಛಾತ್ರೋನ್ ಕಿ ಗೂಂಜ್ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ದೇಶದ 70 ಕೋಟಿ ಮಹಿಳೆಯರೇ ಭಾರತದ ನಿಜವಾದ ಶಕ್ತಿ, ಅವರ ಪ್ರತಿಯೊಬ್ಬರ ಪಯಣ, ಕಲ್ಪನೆ ಮತ್ತು ಕನಸುಗಳು ವಿಭಿನ್ನವಾಗಿವೆ ಎಂದು ಬಣ್ಣಿಸಿದರು. ಸಹಜವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸೂಕ್ಷ್ಮ, ಸೌಮ್ಯ, ಸಹಾನುಭೂತಿಯುಳ್ಳ ಮತ್ತು ದೂರದೃಷ್ಟಿಯುಳ್ಳವರು ಎಂದು ಹೇಳಿದರು. ಮನುಸ್ಮೃತಿಯಲ್ಲಿ ಹೆಣ್ಣು ತಂದೆ, ಗಂಡ, ಮಗನಿಗೆ ಸೇರಿದವಳು ಎಂದಿರುವುದನ್ನು ಟೀಕಿಸಿದ ಅವರು, ಮಹಿಳೆ ಸ್ವತಂತ್ರಳು, ಆಕೆ ತಂದೆಗಾಗಲಿ, ಗಂಡನಿಗಾಗಲಿ, ಮಗನಿಗಾಗಲಿ ಸೇರಿದವಳಲ್ಲ ಎಂದು ಪ್ರತಿಪಾದಿಸಿದರು. ಭಾರತದ ಮಹಿಳೆಯರು ಹಿಂಸೆ, ಅಗೌರವ, ನಿಯಂತ್ರಣ ಮತ್ತು ಸಮಯದ ಕೊರತೆಯಿಂದ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದೇ ವೇದಿಕೆಯಲ್ಲಿ ಯುವಜನರ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿದರು. ಪ್ರತಿ ಸಾವಿರ ಯುವಕರಲ್ಲಿ ಕೇವಲ 12 ಜನರಿಗೆ ಮಾತ್ರ ಖಾಯಂ ಉದ್ಯೋಗ ಸಿಗುತ್ತಿದೆ ಎಂಬ ಅಂಕಿ ನೀಡಿದರು. ಯುವಜನರ ಡೇಟಾವನ್ನು ಜಿಯೋ, ಅದಾನಿ, ಫೇಸ್ ಬುಕ್, ಗೂಗಲ್ ನಂತಹ ದೊಡ್ಡ ಕಂಪನಿಗಳಿಗೆ ನೀಡಲಾಗುತ್ತಿದೆ, ರೀಲ್ಸ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಗಳ ಚಟಕ್ಕೆ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದರು. ನಂತರ ಬ್ಲಿಂಕಿಟ್, ಉಬರ್ ನಲ್ಲಿ ಕೆಲಸ ಮಾಡಿ ಅಥವಾ ಕೂಲಿ ಮಾಡಿ ಎಂದು ಹೇಳಲಾಗುತ್ತಿದೆ, ಇದು 21ನೇ ಶತಮಾನದ ವ್ಯಸನ ಎಂದು ಕಿಡಿಕಾರಿದರು. ದೇಶದಲ್ಲಿ 40 ಕೋಟಿ ಚೈತನ್ಯಶೀಲ ಯುವಕರಿದ್ದಾರೆ, ಅದೇ ರಾಷ್ಟ್ರದ ಬಲ, ಪ್ರತಿಯೊಬ್ಬ ಭಾರತೀಯ ದಿನಕ್ಕೆ ಒಂದು ಜಿಬಿ ಡೇಟಾ ಬಳಸುತ್ತಾನೆ, ಯುವಶಕ್ತಿ ಪ್ಲಸ್ ಡೇಟಾ ಸೇರಿದರೆ ಅದೇ 21ನೇ ಶತಮಾನದ ಆರ್ಥಿಕತೆ ಎಂದು ಹೇಳಿದರು. ಇದಕ್ಕೂ ಮುನ್ನ ಪ್ರಯಾಗರಾಜ್ ನ ಛಾತ್ರೋನ್ ಕಿ ಗೂಂಜ್ ನಲ್ಲಿ ದ್ವೇಷ, ಹಿಂಸೆಯಿಂದಲ್ಲ, ಪ್ರೀತಿಯಿಂದ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದಿದ್ದರು. ದೆಹಲಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಬಗ್ಗೆ ಪಾಟ್ನಾ ವಿದ್ಯಾರ್ಥಿಗಳು ಪ್ರಸ್ತಾಪಿಸಿದಾಗಲೂ ಅದೇ ನಿಲುವನ್ನು ಪುನರುಚ್ಚರಿಸಿದರು.

ಈ ಹೇಳಿಕೆ ಎರಡು ಆಯಾಮಗಳನ್ನು ಹೊಂದಿದೆ. ಒಂದು ಮನುಸ್ಮೃತಿ ಟೀಕೆಯ ಮೂಲಕ ಸಾಂಪ್ರದಾಯಿಕ ಪಿತೃಪ್ರಧಾನ ಚಿಂತನೆಯ ವಿರುದ್ಧ ನೇರ ಸವಾಲು ಹಾಕಿ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ, ಇದು ಕಾಂಗ್ರೆಸ್ ನ ಸಾಮಾಜಿಕ ನ್ಯಾಯದ ವಾದವನ್ನು ಮುನ್ನಲೆಗೆ ತರುತ್ತದೆ ಮತ್ತು ಹಿಂದತ್ವ ವಿರೋಧಿ ನಡೆಯ ಮೂಲಕ ತನ್ನ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ನಡೆ ಎಂಬ ಆಯಾಮದ ಚರ್ಚೆಗಳು ಕೇಳಿಬರುತ್ತಿವೆ.