BASAVARAJ RAYAREDDY : ಇಸ್ಲಾಂ ಬೆಂಬಲಿತ ಹೇಳಿಕೆಗೆ ಮತ್ತೊಂದು ಸಮರ್ಥನೆ – ಸಾವಿಗೂ ಹೆದರಲ್ಲ ಎಂದ ರಾಯರೆಡ್ಡಿ

ಇಸ್ಲಾಂ ಧರ್ಮದ ಪರ ಹೇಳಿಕೆಯಿಂದ ತೀವ್ರ ವಿರೋಧ ಮತ್ತು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಚಿವ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ತಾಲೂಕಿನ ಕಲ್ಲೂರು ಕಾರ್ಯಕ್ರಮದಲ್ಲಿ ವೇದಿಕೆಯಿಂದಲೇ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಅಮರಯ್ಯ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ಸಾವು ಸಹಜವಾದ ಪ್ರಕ್ರಿಯೆ, ಅದು ಇಂದು ಬಂದರೂ ಬರಬಹುದು ನಾಳೆ ಬಂದರೂ ಬರಬಹುದು, ಒಂದಲ್ಲ ಒಂದು ದಿನ ಎಲ್ಲರಿಗೂ ಖಚಿತ, ಆದರೆ ತಾವು ಯಾವುದೇ ಕಾರಣಕ್ಕೂ ಸಾವಿಗೆ ಹೆದರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ತಮ್ಮ ಹೇಳಿಕೆ ಪ್ರಚಾರಕ್ಕಾಗಿ ನೀಡಲಾಗಿದೆ ಎಂದು ಕೆಲವರು ಭಾವಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡು ದಿನಗಳ ಕಾಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕಿದ್ದಕ್ಕೆ ಮಾಧ್ಯಮಗಳು ಮತ್ತು ಜನರಿಗೆ ಧನ್ಯವಾದ ಸಲ್ಲಿಸುವುದಾಗಿ ವ್ಯಂಗ್ಯ ಮತ್ತು ಹಾಸ್ಯದ ಧಾಟಿಯಲ್ಲಿ ಹೇಳಿದರು. ಇಲ್ಲದಿದ್ದರೆ ಬಸವರಾಜ ರಾಯರೆಡ್ಡಿ ಎಂಬ ಹೆಸರೇ ಯಾರಿಗೂ ತಿಳಿಯುತ್ತಿರಲಿಲ್ಲ, ಈಗ ಸೌದಿ ಅರೇಬಿಯಾ, ಇರಾನ್ ವರೆಗೂ ತಮ್ಮ ಹೆಸರು ತಲುಪಿದೆ ಎಂದು ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ, ಅಲ್ ಜಝೀರಾ ವಾಹಿನಿಯಲ್ಲೂ ಪ್ರಸಾರವಾಗಿದೆ, ಬಿಹಾರದ ಸಂಸದ ದಾನಿಶ್ ಅಲಿ ಮತ್ತು ಡಿ.ಕೆ. ಶಿವಕುಮಾರ್ ಅವರು ನಿನ್ನೆಯಷ್ಟೇ ಕರೆ ಮಾಡಿ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು.

ದೇವಸ್ಥಾನ ಭೇಟಿ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ರಾಯರೆಡ್ಡಿ ಅವರು, ತಾವು ವೈಯಕ್ತಿಕ ಲಾಭಕ್ಕಾಗಿ ದೇವಸ್ಥಾನಗಳಿಗೆ ಹೋಗುವುದಿಲ್ಲ, ಮಂತ್ರಿ ಸ್ಥಾನಕ್ಕಾಗಿ ಪ್ರಾರ್ಥಿಸಲು ಅಥವಾ ಸ್ವಾಮೀಜಿಗಳ ಪಾದಕ್ಕೆ ಬೀಳಲು ಹೋಗುವುದಿಲ್ಲ, ದೇವರು ಎಲ್ಲರ ಮನಸ್ಸಿನಲ್ಲಿದ್ದಾನೆ, ಇಂದು ದೇವಸ್ಥಾನಕ್ಕೆ ಹೋಗಿದ್ದು ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂಬ ಆಶಯದಿಂದ ಮಾತ್ರ, ಜನರೇ ತಮಗೆ ದೇವರು ಎಂದು ಹೇಳಿದರು. ತಮ್ಮ ಧಾರ್ಮಿಕ ಅಧ್ಯಯನದ ಹಾದಿಯನ್ನು ವಿವರಿಸಿದ ಅವರು, ಮಾನಸ ಸರೋವರದಲ್ಲಿ ಸ್ನಾನ ಮಾಡಿದ್ದೇನೆ, ಕಾಮಾಖ್ಯ ಸೇರಿದಂತೆ ನಾಲ್ಕೈದು ಶಕ್ತಿ ಪೀಠಗಳಿಗೆ ತೆರಳಿ ಅಧ್ಯಯನ ಮಾಡಿದ್ದೇನೆ, ಸವದಿ ಮತ್ತು ಆರ್. ಅಶೋಕ್ ಅವರೊಂದಿಗೆ ವೈಷ್ಣೋದೇವಿ ದರ್ಶನಕ್ಕೆ ಹೋಗಿದ್ದಾಗಲೇ ದೆಹಲಿ ಬಿಜೆಪಿ ನಾಯಕರು ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುತ್ತಾರೆ ಎಂದು ಫೋಟೋ ತೋರಿಸಿ ಹೇಳಿದ್ದೆ, ಆ ಸುದ್ದಿಯನ್ನು ಶಕ್ತಿ ಪೀಠದಲ್ಲೇ ಅವರಿಗೆ ನೀಡಿ ಅಲ್ಲೇ ಶುಭ ಕೋರಿದ್ದೆ ಎಂಬ ಹಳೆಯ ವಿಚಾರವನ್ನು ಬಹಿರಂಗಪಡಿಸಿದರು. ಜುದಾಯಿಸಂ, ಜೈನಿಸಂ, ಸಾರನಾಥ್, ಬುದ್ಧ ತಪಸ್ಸು ಮಾಡಿದ ಮರದ ಕೆಳಗೆ ಕುಳಿತು ಅಧ್ಯಯನ, ಉಪನಿಷತ್ತು, ವೇದಗಳ ಓದು, ಏಸು ಕ್ರಿಸ್ತರ ಗೋರಿ ಭೇಟಿ ಮಾಡಿರುವುದಾಗಿ ಹೇಳಿದರು. ಮುಸ್ಲಿಂ ಸಮುದಾಯದ ಸಭೆಯಲ್ಲಿ ಎಲ್ಲ ಧರ್ಮಗಳು ಶ್ರೇಷ್ಠ ಎಂದಿದ್ದೇನೆ, ಯಾರನ್ನೂ ನಿಂದಿಸಿಲ್ಲ, ಹಜ್ ಅಥವಾ ಉಮ್ರಾಗೆ ಹೋಗುವುದಕ್ಕೆ ತಾವು ಮುಸ್ಲಿಂ ಅಲ್ಲ, ಬೇರೆ ಯಾವುದೇ ಧರ್ಮಕ್ಕೆ ಮತಾಂತರವಾಗುವುದಿಲ್ಲ, ತಾವು ಶರಣ ತತ್ವದ ಅನುಯಾಯಿ, ಎಸ್ ಸಿ, ಎಸ್ ಟಿ ಸೇರಿದಂತೆ ಎಲ್ಲ ಸಮುದಾಯಗಳು ತಮಗೆ ಒಂದೇ, ಎಲ್ಲ ಧರ್ಮಗಳ ಸಾರ ಒಂದೇ ಎಂದು ಪುನರುಚ್ಚರಿಸಿದರು. ಪತ್ನಿ ಮತ್ತು ಮಗಳು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದಿದ್ದಾರೆ, ಕರೆದರೆ ಹೋಗಬೇಕು, ಅದೇ ರೀತಿ ಈಗ ಸುತ್ತೂರು ಮಠಕ್ಕೂ ಹೋಗುತ್ತಿರುವುದಾಗಿ ಹೇಳಿ ಮಾತು ಮುಗಿಸಿದರು.

ರಾಯರೆಡ್ಡಿ ಅವರ ಈ ಹೇಳಿಕೆಯನ್ನು ಕೇವಲ ಆಕಸ್ಮಿಕ ಮಾತು ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಸ್ಲಾಂ ಪರ ಹೇಳಿಕೆಯಿಂದ ಉಂಟಾದ ರಾಜಕೀಯ ಬಿರುಗಾಳಿಯ ಮಧ್ಯೆ ಸಾವಿನ ಕುರಿತು ಮಾತನಾಡುವುದು ಒಂದು ರೀತಿಯ ರಾಜಕೀಯ ಸಂದೇಶವಾಗಿದೆ. ತಮ್ಮನ್ನು ಮುಗಿಸಲು ಯತ್ನಿಸುತ್ತಿರುವ ವಿರೋಧಿಗಳಿಗೆ ತಾವು ಹೆದರುವುದಿಲ್ಲ, ರಾಜಕೀಯವಾಗಿ ಅಥವಾ ವೈಯಕ್ತಿಕವಾಗಿ ಯಾವುದೇ ಪರಿಣಾಮಕ್ಕೆ ಅಂಜುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಎರಡನೆಯದಾಗಿ ತಮ್ಮನ್ನು ಶರಣ ತತ್ವದ ಅನುಯಾಯಿ ಎಂದು ಬಿಂಬಿಸಿಕೊಳ್ಳುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ. ಎಲ್ಲ ಧರ್ಮಗಳ ಅಧ್ಯಯನ ಮಾಡಿದ್ದೇನೆ, ಮಾನಸ ಸರೋವರದಿಂದ ಹಿಡಿದು ಏಸು ಕ್ರಿಸ್ತರ ಗೋರಿಯವರೆಗೂ ಹೋಗಿದ್ದೇನೆ ಎಂದು ಹೇಳುವ ಮೂಲಕ ತಾವು ಯಾವುದೇ ಒಂದು ಧರ್ಮದ ಪರವಾಗಿ ನಿಲ್ಲುವ ವ್ಯಕ್ತಿಯಲ್ಲ, ಸರ್ವಧರ್ಮ ಸಮನ್ವಯದಲ್ಲಿ ನಂಬಿಕೆ ಇಟ್ಟವರು ಎಂಬ ಚಿತ್ರಣವನ್ನು ಕಟ್ಟಲು ಹೊರಟಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವಿಗೆ ಹೊಂದಿಕೆಯಾಗುವಂತದ್ದು, ಆದರೆ ರಾಜ್ಯದಲ್ಲಿನ ಲಿಂಗಾಯತ ಮತಬ್ಯಾಂಕ್ ಮತ್ತು ಶರಣ ಪರಂಪರೆಯೊಂದಿಗೆ ತಮ್ಮನ್ನು ಜೋಡಿಸುವ ಲೆಕ್ಕಾಚಾರವೂ ಇದರಲ್ಲಿದೆ. ಆದ್ರೆ ಇದೆಲ್ಲವೂ ಕೇವಲ ಡ್ಯಾಮೇಜ್ ಕಂಟ್ರೋಲ್ ನಂತೆ ಭಾಸವಾಗುತ್ತಿದೆ.