B NAGENDRA : ಕಣ್ಣೀರು ಹಾಕುತ್ತಾ ರೆಡ್ಡಿ – ರಾಮುಲು ವಿರುದ್ಧ ತೊಡೆ ತಟ್ಟಿದ ಬಿ.ನಾಗೇಂದ್ರ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಈ ನಿರ್ಧಾರ ಪ್ರಕಟಿಸಿದ ಅವರು, ತಮ್ಮ ರಾಜೀನಾಮೆಯು ಯಾವುದೇ ಒತ್ತಡದಿಂದಲ್ಲ, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ಸ್ವಇಚ್ಛೆಯಿಂದ ತೆಗೆದುಕೊಂಡ ನಿರ್ಧಾರ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯ ವೇಳೆ ಭಾವುಕರಾದ ನಾಗೇಂದ್ರ ಕಣ್ಣೀರು ಹಾಕಿದರು. ಸಚಿವ ಸ್ಥಾನ ಮಾತ್ರವಲ್ಲ, ಅಗತ್ಯಬಿದ್ದರೆ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಜನರ ಮುಂದೆ ಹೋಗಲು ಸಿದ್ಧನಿದ್ದೇನೆ. ಜನತಾ ನ್ಯಾಯಾಲಯದಲ್ಲಿ ಎಲ್ಲವನ್ನೂ ಎದುರಿಸುತ್ತೇನೆ ಎಂದು ಬಿಜೆಪಿ ನಾಯಕರಿಗೆ ಬಹಿರಂಗ ಸವಾಲು ಎಸೆದರು.

ವಿರೋಧ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಇದು ಸಂಪೂರ್ಣ ಕುತಂತ್ರದ ರಾಜಕಾರಣ. ಸದನದಲ್ಲಿ ಹಲವು ಬಾರಿ ಮನವಿ ಮಾಡಿದೆವು, ನೋಟಿಸ್ ಕೊಡಿ, ಚರ್ಚೆಗೆ ಬನ್ನಿ ಎಂದು ಕೇಳಿಕೊಂಡೆವು, ಆದರೆ ಅವರು ಚರ್ಚೆಗೆ ಬರಲಿಲ್ಲ. ಈಗ ಯಾವುದೇ ವಿಷಯವಿಲ್ಲದಿದ್ದರೂ ಅದನ್ನೇ ದೊಡ್ಡ ವಿಷಯ ಮಾಡಿಕೊಂಡು ಪಾದಯಾತ್ರೆ ಹೊರಟಿದ್ದಾರೆ ಎಂದು ಟೀಕಿಸಿದರು. ಬಿಜೆಪಿಯವರು ಮನುಸ್ಮೃತಿಯ ಸಿದ್ಧಾಂತವನ್ನು ನಂಬುವವರು, ಆದರೆ ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ, ಅದು ನಮಗೆ ರಕ್ಷಣೆ ನೀಡುತ್ತದೆ. ದಲಿತರು, ಬಡವರು ಮತ್ತು ಆದಿವಾಸಿಗಳು ಬದುಕಬಾರದು ಎಂಬ ಮನಸ್ಥಿತಿ ಬಿಜೆಪಿಯವರದ್ದು ಎಂದು ಆರೋಪಿಸಿದರು.

2024ರಲ್ಲಿಯೂ ಇದೇ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ವಿನಾಕಾರಣ ನನ್ನನ್ನು ಬಂಧಿಸಿ ಮೂರು ತಿಂಗಳು ಜೈಲಿನಲ್ಲಿ ಇರಿಸಲಾಯಿತು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದೇನೆ. ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ, ನಾನು ಸಂವಿಧಾನಕ್ಕೆ ತಲೆಬಾಗುತ್ತೇನೆ ಎಂದು ಹೇಳಿದರು.

ಇದೇ ವೇಳೆ ಬಳ್ಳಾರಿ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ ನಾಗೇಂದ್ರ, ಸೋ ಕಾಲ್ಡ್ ಲೀಡರ್ ಗಳಿದ್ದೀರಲ್ಲ, ಬನ್ನಿ ಅಖಾಡಕ್ಕೆ, ಜನತಾ ನ್ಯಾಯಾಲಯಕ್ಕೆ ಹೋಗೋಣ. ತಾಕತ್ತಿದ್ದರೆ ಇಡಿ, ಸಿಬಿಐ ಬಿಟ್ಟು ನೇರವಾಗಿ ಎದುರಿಸಿ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್ ಗಳು, ಚಲಾವಣೆಯಿಲ್ಲದ ನಾಣ್ಯಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.