ಯುಎಸ್: ಅಮೆರಿಕದ ರಾಜಕೀಯದಲ್ಲಿ ಈಗ ದೊಡ್ಡ ತಿರುವು ಕಾಣಿಸಿಕೊಂಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಅವರಿಗೆ ಸ್ವಪಕ್ಷದ ಭದ್ರಕೋಟೆಗಳಿಂದಲೇ ಆಘಾತ ಎದುರಾಗುವ ಸೂಚನೆಗಳು ಬಂದಿವೆ. ಓಹಿಯೋ, ಜಾರ್ಜಿಯಾ, ಉತ್ತರ ಕೆರೊಲಿನಾ ಸೇರಿದಂತೆ ಸದಾ ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸುತ್ತಿದ್ದ ಕ್ಷೇತ್ರಗಳಲ್ಲಿ ಡೆಮೋಕ್ರಾಟ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಈ ಮಧ್ಯಂತರ ಚುನಾವಣೆಯಲ್ಲಿ ಪ್ರತಿನಿಧಿಗಳ ಸಭೆಯ ಎಲ್ಲಾ 435 ಸ್ಥಾನಗಳಿಗೆ, ಸೆನೆಟ್‌ನ 100 ಸ್ಥಾನಗಳ ಪೈಕಿ 35 ಸ್ಥಾನಗಳಿಗೆ ಮತ್ತು 36 ರಾಜ್ಯಗಳ ಗವರ್ನರ್ ಹುದ್ದೆಗಳಿಗೆ ಮತದಾನ ನಡೆಯುತ್ತಿದೆ. ಸದ್ಯ ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷ 53 ಸ್ಥಾನಗಳನ್ನು ಹೊಂದಿದ್ದರೆ, ಡೆಮೋಕ್ರಾಟ್‌ಗಳು 47 ಸ್ಥಾನಗಳನ್ನು ಹೊಂದಿದ್ದಾರೆ. ಪ್ರತಿನಿಧಿಗಳ ಸಭೆಯಲ್ಲೂ ರಿಪಬ್ಲಿಕನ್ನರೇ ಬಹುಮತದಲ್ಲಿದ್ದಾರೆ. ಹೌಸ್‌ನಲ್ಲಿ ಬಹುಮತ ಪಡೆಯಲು ಡೆಮೋಕ್ರಾಟ್‌ಗಳಿಗೆ ಮೂರು ಸ್ಥಾನಗಳ ನಿವ್ವಳ ಲಾಭ ಸಾಕು. ಆದರೆ ಸೆನೆಟ್‌ನಲ್ಲಿ ಬಹುಮತಕ್ಕೆ ನಾಲ್ಕು ಸ್ಥಾನಗಳ ನಿವ್ವಳ ಲಾಭ ಬೇಕು.
ಸಾಂಪ್ರದಾಯಿಕ ರಿಪಬ್ಲಿಕನ್ ಭದ್ರಕೋಟೆಗಳಲ್ಲೂ ತೀವ್ರ ಪೈಪೋಟಿ..!
ಕಾನ್ಸಾಸ್, ಟೆಕ್ಸಾಸ್, ಅಯೋವಾ, ಓಹಿಯೋ ಮತ್ತು ಅಲಾಸ್ಕಾದಂತಹ ಸಾಂಪ್ರದಾಯಿಕ ರಿಪಬ್ಲಿಕನ್ ಭದ್ರಕೋಟೆಗಳಲ್ಲೂ ಈ ಬಾರಿ ತೀವ್ರ ಪೈಪೋಟಿ ಕಂಡುಬರುತ್ತಿದೆ. ಡೆಮೋಕ್ರಾಟ್ ಅಭ್ಯರ್ಥಿಗಳು ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಪ್ರಬಲ ಸವಾಲು ಒಡ್ಡುತ್ತಿದ್ದಾರೆ. ಮಿಚಿಗನ್‌ನಲ್ಲಿ ಡೆಮೋಕ್ರಾಟ್‌ಗಳ ಆಂತರಿಕ ಭಿನ್ನಾಭಿಪ್ರಾಯ ಕೂಡ ಲೆಕ್ಕಾಚಾರವನ್ನು ಬದಲಿಸಬಹುದು ಎಂಬ ಚರ್ಚೆ ಇದೆ. ಜೀವನ ವೆಚ್ಚದ ಏರಿಕೆ, ಇರಾನ್ ವಿರುದ್ಧದ ಯುದ್ಧದಿಂದ ಉಂಟಾದ ಆರ್ಥಿಕ ಒತ್ತಡ ಮತ್ತು ಟ್ರಂಪ್ ಸರ್ಕಾರದ ನಿರ್ಧಾರಗಳ ಬಗ್ಗೆ ಇರುವ ಅಸಮಾಧಾನ ಮತಗಳ ರೂಪದಲ್ಲಿ ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ. ಡೆಮೋಕ್ರಾಟ್‌ಗಳು ಪ್ರತಿನಿಧಿಗಳ ಸಭೆಯಲ್ಲಿ ಬಹುಮತ ಪಡೆದರೆ, ಟ್ರಂಪ್ ಸರ್ಕಾರದ ನಿರ್ಧಾರಗಳಿಗೆ ಸಂಸತ್ತಿನಲ್ಲೇ ತಡೆ ಬೀಳಬಹುದು. ಸರ್ಕಾರದ ನೀತಿಗಳು, ಆಡಳಿತಾತ್ಮಕ ನಿರ್ಧಾರಗಳು ಮತ್ತು ಯೋಜನೆಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಡೆಮೋಕ್ರಾಟ್‌ಗಳಿಗೆ ಸಿಗಲಿದೆ. ಟ್ರಂಪ್ ಮಂಡಿಸುವ ಹೊಸ ಕಾನೂನುಗಳಿಗೆ ಅನುಮೋದನೆ ಪಡೆಯುವುದು ಕಷ್ಟವಾಗಬಹುದು. ಸೆನೆಟ್‌ನಲ್ಲೂ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಪ್ರಮುಖ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಡೆಮೋಕ್ರಾಟ್‌ಗಳ ಪ್ರಭಾವ ಹೆಚ್ಚಾಗಲಿದೆ. 2020ರ ಚುನಾವಣೆಯಲ್ಲಿ ಸೋತ ನಂತರ ಟ್ರಂಪ್ ಮತ ವಂಚನೆಯ ಆರೋಪ ಮಾಡಿದ್ದರು, ಆದರೆ ಅದಕ್ಕೆ ಸೂಕ್ತ ಸಾಕ್ಷ್ಯ ಸಿಕ್ಕಿರಲಿಲ್ಲ. ಈ ಬಾರಿ ನ್ಯೂಯಾರ್ಕ್‌ನ ಕೆಲವು ಕ್ಷೇತ್ರಗಳಲ್ಲಿ ಮತಯಂತ್ರಗಳು ಸರಿಯಾಗಿ ಕೆಲಸ ಮಾಡದ ಘಟನೆ ವರದಿಯಾಗಿದ್ದು, ಕೆಲವು ಬಲಪಂಥೀಯ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತದಾನ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳೀಯ ಚುನಾವಣಾಧಿಕಾರಿಗಳು ಎಲ್ಲಾ ಮತಪತ್ರಗಳನ್ನು ಎಣಿಕೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಹೆದರಬೇಡಿ, ಚರ್ಚೆಗೆ ಬನ್ನಿ: ಪ್ರಧಾನಿ ಮೋದಿಗೆ ಗುಲಾಬಿ ಹಿಡಿದು ರಾಹುಲ್ ಗಾಂಧಿ ಸವಾಲು
ಈ ಫಲಿತಾಂಶ ಕೇವಲ ಕೆಲವು ಸ್ಥಾನಗಳ ಗೆಲುವು ಸೋಲಿನ ವಿಚಾರವಲ್ಲ, ಟ್ರಂಪ್ ಅವರ ಆಡಳಿತದ ಜನಪ್ರಿಯತೆಯ ಮೇಲೆ ನಡೆಯುತ್ತಿರುವ ಜನಾಭಿಪ್ರಾಯ ಸಂಗ್ರಹದಂತಿದೆ. ಅಮೆರಿಕದಲ್ಲಿ ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷಗಳಾಗಿದ್ದು, ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಮಧ್ಯಂತರ ಚುನಾವಣೆ ಆಡಳಿತದ ಬಗ್ಗೆ ಜನರ ಮನಸ್ಥಿತಿಯನ್ನು ಅಳೆಯುತ್ತದೆ. ಇರಾನ್ ಸಂಘರ್ಷ, ಆರ್ಥಿಕ ಒತ್ತಡ ಮತ್ತು ಸ್ವಪಕ್ಷದ ಕೋಟೆಗಳಲ್ಲೇ ಎದುರಾಗಿರುವ ಸವಾಲು ಟ್ರಂಪ್ ಅವರಿಗೆ ಏಕಕಾಲಕ್ಕೆ ಹಲವು ದಿಕ್ಕಿನಿಂದ ಒತ್ತಡ ತಂದಿದೆ. ಡೆಮೋಕ್ರಾಟ್‌ಗಳು ಸಂಸತ್ತಿನ ಮೇಲೆ ಹಿಡಿತ ಸಾಧಿಸಿದರೆ, ಟ್ರಂಪ್ ಅವರ ಉಳಿದ ಎರಡು ವರ್ಷಗಳ ಆಡಳಿತ ರಾಜಕೀಯ ಸಂಘರ್ಷದಿಂದ ಕೂಡಿರಲಿದೆ. ಪ್ರತಿ ಪ್ರಮುಖ ನಿರ್ಧಾರಕ್ಕೂ ವಿರೋಧ ಎದುರಾಗಬಹುದು. ಆದರೆ ಅಂತಿಮ ಫಲಿತಾಂಶ ಬರುವವರೆಗೂ ರಾಜಕೀಯ ಚಿತ್ರಣ ಸ್ಪಷ್ಟವಾಗುವುದಿಲ್ಲ. ಈ ಚುನಾವಣೆ ಅಮೆರಿಕದ ರಾಜಕೀಯ ಭವಿಷ್ಯಕ್ಕಷ್ಟೇ ಅಲ್ಲ, ಟ್ರಂಪ್ ಅವರ ಅಧಿಕಾರದ ಮುಂದಿನ ಹಾದಿಗೂ ನಿರ್ಣಾಯಕವಾಗಲಿದೆ.




