ಬೆಂಗಳೂರು: ತೆಲುಗಿನ ಸ್ಟಾರ್ ನಟ ನಾನಿಯ (Nani) ‘ದಿ ಪ್ಯಾರಡೈಸ್’ ಸಿನಿಮಾ ಇನ್ನೆರಡು ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಾಮಾನ್ಯವಾಗಿ ರೊಮ್ಯಾಂಟಿಕ್, ಕೌಟುಂಬಿಕ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಾನಿ ಮೊದಲ ಬಾರಿಗೆ ಔಟ್ ಆಂಡ್ ಔಟ್ ಆಕ್ಷನ್ ಸಿನಿಮಾನಲ್ಲಿ ನಟಿಸಿದ್ದಾರೆ. ಉದ್ದ ಜಡೆ ಬಿಟ್ಟುಕೊಂಡು ರಕ್ತ-ಸಿಕ್ತ ಮೈ ತೋರಿಸಿಕೊಂಡು ಬಲು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಬೆಂಗಳೂರು ನ್ಯಾಯಾಲಯ ‘ದಿ ಪ್ಯಾರಡೈಸ್’ (The Paradise) ಸಿನಿಮಾ ಕುರಿತಾಗಿ ಆದೇಶವೊಂದನ್ನು ಹೊರಡಿಸಿದೆ.
ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಸಿನಿಮಾ ಕುರಿತಾಗಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶಪೂರ್ವಕ ಋಣಾತ್ಮಕ ಕಂಟೆಂಟ್ ಅನ್ನು ಹಂಚಿಕೊಳ್ಳುವುದನ್ನು ನಿಷೇಧಿಸಿದೆ. ಸಿನಿಮಾ ಕುರಿತಾಗಿ ಟ್ರೋಲ್ ಮಾಡುವುದು, ಉದ್ದೇಶಪೂರ್ವಕವಾಗಿ ಸಿನಿಮಾಕ್ಕೆ ಹಿನ್ನಡೆ ಮಾಡುವ ಪ್ರಯತ್ನ ಮಾಡುವುದು, ಸಿನಿಮಾದ ಕಂಟೆಂಟ್ ಬಗ್ಗೆ ಹೀಗಳೆಯುವುದು, ಸಿನಿಮಾಕ್ಕೆ ಹಾನಿ ಆಗುವಂಥಹ ಪೋಸ್ಟ್ ಗಳನ್ನು ಹಾಕದಂತೆ ನ್ಯಾಯಾಲಯವು ನಿರ್ಬಂಧಿಸಿದೆ.

ಅರ್ಜಿ ಹಾಕಿದ್ದು ಯಾರು?
ಸಿನಿಮಾದ ನಿರ್ಮಾಣ ಸಂಸ್ಥೆಯಾದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಎಲ್ಎಲ್ಪಿ ಅವರಿಂದ ಸಲ್ಲಿಕೆಯಾಗಿದ್ದ ಅರ್ಜಿಯ ವಿಣಾರಣೆ ನಡೆಸಿರುವ ನ್ಯಾಯಾಲಯವು ಮೇಲ್ಕಂಡಂತೆ ಆದೇಶ ನೀಡಿದೆ. ‘ಉದ್ದೇಶಪೂರ್ವಕ ಆನ್ ಲೈನ್ ‘ದಾಳಿ’ ಯಿಂದ ಸಿನಿಮಾಕ್ಕೆ ನಷ್ಟವಾಗುತ್ತದೆ, ಹಾಗಾಗಿ ಆನ್ ಲೈನ್ ವಿಮರ್ಶೆಗಳನ್ನು ನಿಷೇಧಿಸಬೇಕೆಂದು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಅರ್ಜಿಯಲ್ಲಿ ಕೇಳಿಕೊಂಡಿತ್ತು.
ಇದನ್ನೂ ಓದಿ: Raaka Movie 2027: ಗಿನ್ನೆಸ್ ವಿಶ್ವ ದಾಖಲೆ ಬರೆದ ‘ರಾಕಾ’
ಉದ್ದೇಶಪೂರ್ವಕ ಋಣಾತ್ಮಕ ವಿಮರ್ಶೆಗಳನ್ನು ಬೆಂಗಳೂರು ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ನಿಷೇಧ ಮಾಡಿದೆಯಾದರೂ, ಪ್ರಾಮಾಣಿಕವಾದ ವಿಮರ್ಶೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ತಾವುದೇ ನಿರ್ಬಂಧ ಇಲ್ಲವೆಂದು ಸ್ಪಷ್ಟಪಡಿಸಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ. ಇತ್ತೀಚೆಗೆ ಹಲವು ಸಿನಿಮಾಗಳು ಈ ರೀತಿಯ ಇಂಜೆಕ್ಷನ್ ಆದೇಶಗಳನ್ನು ನ್ಯಾಯಾಲಯಗಳಿಂದ ಪಡೆಯುತ್ತಿವೆ. ಬುಕ್ ಮೈ ಶೋನಲ್ಲಿ ರೇಟಿಂಗ್ ನೀಡುವ ಅವಕಾಶವನ್ನು ಕಸಿದುಕೊಳ್ಳುತ್ತಿವೆ. ಜೊತೆಗೆ ಆನ್ ಲೈನ್ ವಿಮರ್ಶೆಗಳ ಮೇಲೆ ನಿಯಂತ್ರಣ ಹೇರುವ ಪ್ರಯತ್ನ ಮಾಡುತ್ತಿವೆ.
‘ದಿ ಪ್ಯಾರಡೈಸ್’ ಕುರಿತ ಮಾಹಿತಿ
‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಾನಿ ನಾಯಕನಾಗಿ ನಟಿಸಿದ್ದು, ಖಯಾದು ಲೋಹರ್ ನಾಯಕಿ. ಬಾಲಿವುಡ್ ನಟ ರಾಘವ್ ಜ್ಯುರೆಲ್ ವಿಲನ್ ಆಗಿ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ದ್ ರವಿಚಂದ್ರನ್ ಸಂಗೀತ ನೀಡಿದ್ದು, ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಸೆಪ್ಟೆಂಬರ್ 25 ಕ್ಕೆ ರಿಲೀಸ್ ಆಗಲಿದೆ.




