Photo Credits: @pavithra.gowda.__(Instagram)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡಗೆ ಹೊಸ ಕಿರಿಕಿರಿ ಶುರುವಾಗಿದೆ. ಜೈಲಿನ ಸಾಮಾನ್ಯ ಮಹಿಳಾ ಖೈದಿಗಳ ಸೆಲ್ನಲ್ಲಿ ಇರಲಾಗದೆ ಪವಿತ್ರಾ ಗೌಡ ತೀವ್ರ ಪರದಾಟ ಅನುಭವಿಸುತ್ತಿದ್ದಾರೆ.
ಸಾಮಾನ್ಯ ಖೈದಿಗಳ ಒಟ್ಟಿಗೆ ಇರಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ತಮ್ಮ ಬ್ಯಾರಕ್ ಬದಲಾಯಿಸುವಂತೆ ಪವಿತ್ರಾ ಗೌಡ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೈಲಿನಲ್ಲಿ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಅರ್ಜಿಯಲ್ಲಿ ಸಂಪೂರ್ಣ ವಿವರ ನೀಡಿದ್ದಾರೆ.
20 ಕೈದಿಗಳಿರುವ ಜಾಗದಲ್ಲಿ 30ಕ್ಕೂ ಹೆಚ್ಚು ಕೈದಿಗಳನ್ನು ಇರಿಸಲಾಗಿದೆ. ಇದರಿಂದಾಗಿ ತೀವ್ರ ಜಾಗದ ಅಭಾವ ಉಂಟಾಗಿದ್ದು, ಸರಿಯಾದ ನಿದ್ದೆಯಿಲ್ಲದೆ ಅತೀವ ತಲೆನೋವು ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಸಮಸ್ಯೆ ಹಾಗೂ ನೈಜೀರಿಯನ್ ಖೈದಿಗಳ ಕಿರಿಕಿರಿ
ಬ್ಯಾರಕ್ನಲ್ಲಿ ಒಂದೇ ಟಾಯ್ಲೆಟ್ ಇರುವುದರಿಂದ ತಮಗೆ ಅಲರ್ಜಿ ಹಾಗೂ ಮೂತ್ರಕೋಶ ಸಂಬಂಧಿತ ಇನ್ಫೆಕ್ಷನ್ ಉಂಟಾಗಿದೆ ಎಂದು ಪವಿತ್ರಾ ಗೌಡ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸೂಕ್ತ ನೈರ್ಮಲ್ಯದ ಕೊರತೆಯಿಂದ ಅನಾರೋಗ್ಯಕ್ಕೆ ಈಡಾಗುತ್ತಿರುವುದಾಗಿ ತಿಳಿಸಿದ್ದಾರೆ.
ಇದರ ಜೊತೆಗೆ ಪವಿತ್ರಾ ಅವರ ಒಪ್ಪಿಗೆಯಿಲ್ಲದೆ ಅವರ ಬಟ್ಟೆ ಹಾಗೂ ದಿನನಿತ್ಯದ ಬಳಕೆ ವಸ್ತುಗಳನ್ನು ಕೆಲ ಖೈದಿಗಳು ಬಲವಂತವಾಗಿ ಬಳಸುತ್ತಿದ್ದಾರೆ. ಜೈಲಿನಲ್ಲಿರುವ ನೈಜೀರಿಯನ್ ಮೂಲದ ಮಹಿಳೆಯರು ರಾತ್ರಿಯೆಲ್ಲಾ ನಿದ್ದೆ ಮಾಡದೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ರಾತ್ರಿ ವೇಳೆ ಸರಿಯಾದ ನಿದ್ದೆಯಿಲ್ಲದೆ ತೀವ್ರ ಮಾನಸಿಕ ಉದ್ವೇಗ ಹಾಗೂ ಆತಂಕಕ್ಕೆ ಒಳಗಾಗುತ್ತಿರುವುದಾಗಿ ತಿಳಿಸಿರುವ ಅವರು, ಸೂಕ್ತ ರೀತಿಯಲ್ಲಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮಾನವೀಯ ನೆಲೆಗಟ್ಟಿನಲ್ಲಿ ಸೌಲಭ್ಯ ನೀಡಲು ಕೋರ್ಟ್ಗೆ ಮನವಿ
ಜೈಲಿನಲ್ಲಿ ಅನುಭವಿಸುತ್ತಿರುವ ನಾನಾ ರೀತಿಯ ಶಾರೀರಿಕ ಹಾಗೂ ಮಾನಸಿಕ ಕಿರುಕುಳಗಳಿಂದಾಗಿ ತಮ್ಮ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಪವಿತ್ರಾ ಗೌಡ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಹೀಗಾಗಿ ಅವರಿಗೆ ತಕ್ಷಣವೇ ಜೈಲಿನಲ್ಲಿ ಸೂಕ್ತವಾದ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಬೇಕು ಹಾಗೂ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಮಾನವೀಯ ನೆಲೆಗಟ್ಟಿನಲ್ಲಿ ಪವಿತ್ರಾ ಗೌಡ ಅವರಿಗೆ ಜೈಲಿನಲ್ಲಿ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.




