Rashmika Mandanna:ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್; ರಶ್ಮಿಕಾ ಮಂದಣ್ಣ ಕಣ್ಣೀರು

Rashmika Mandanna to play ms subbulakshmi in biopic kamal haasan shares advice

Photo Credits: @cinepopsouth (Instagram)

ಚೆನ್ನೈ: ಭಾರತೀಯ ಸಂಗೀತ ಲೋಕದ ದಂತಕಥೆ ಎಂ.ಎಸ್. ಸುಬ್ಬುಲಕ್ಷ್ಮಿ (M.S. Subbulakshmi) ಅವರ ಜೀವನ ಚರಿತ್ರೆ ಈಗ ಸಿನಿಮಾ ರೂಪ ಪಡೆಯುತ್ತಿದೆ. ಇತ್ತೀಚೆಗೆ ಅವರ 108ನೇ ಜನ್ಮದಿನದ ಶುಭ ಸಂದರ್ಭದಲ್ಲಿ ಈ ಮಹತ್ವಾಕಾಂಕ್ಷೆಯ ಚಿತ್ರ ಅಧಿಕೃತವಾಗಿ ಲಾಂಚ್ ಆಗಿದೆ.

ಈ ಪ್ರತಿಷ್ಠಿತ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಮುಹೂರ್ತದ ವೇಳೆ ವಿಶ್ವನಾಯಕ ಕಮಲ್ ಹಾಸನ್ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಸಮಾರಂಭದಲ್ಲಿ ತಮಿಳಿನಲ್ಲಿ ಮಾತನಾಡಿದ ರಶ್ಮಿಕಾ ಅತ್ಯಂತ ಭಾವುಕರಾಗಿದ್ದಾರೆ. “ಅಮ್ಮಾ, ನಿಮ್ಮ ಪಾತ್ರ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ನಾನು ಸದಾ ಕೃತಜ್ಞಳಾಗಿರುತ್ತೇನೆ. ನಮ್ಮ ಕೆಲಸ ಕಂಡು ನಿಮ್ಮ ಮುಖದಲ್ಲಿ ಒಂದು ಸಣ್ಣ ನಗು ಮೂಡಿದರೆ ಸಾಕು, ನನ್ನ ಜನ್ಮ ಧನ್ಯವಾಗುತ್ತದೆ” ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣಗೆ ಕಮಲ್ ಹಾಸನ್ ಆತ್ಮೀಯ ಸಲಹೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಮಲ್ ಹಾಸನ್, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್ ಮಾಡುವುದು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ. ಮೈಕಲ್ ಜಾಕ್ಸನ್ ಬಯೋಪಿಕ್ ಮಾಡುವ ನಟನಿಗೆ ಎಷ್ಟು ದೊಡ್ಡ ಜವಾಬ್ದಾರಿ ಇರುತ್ತದೆಯೋ, ಅಷ್ಟೇ ಒತ್ತಡ ರಶ್ಮಿಕಾ ಮೇಲೆಯೂ ಇದೆ ಎಂದಿದ್ದಾರೆ.

“ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಣ್ಣುಗಳಲ್ಲಿ ಅಪಾರ ಕರುಣೆ ಇತ್ತು. ರಶ್ಮಿಕಾ ತಮ್ಮ ಅಭಿನಯದ ಮೂಲಕ ಆ ಕರುಣೆಯನ್ನು ಕಣ್ಣುಗಳಲ್ಲಿ ತರಬೇಕು. ಹಾಗೆ ಮಾಡಿದರೆ ಅವರು ಅರ್ಧ ಯುದ್ಧ ಗೆದ್ದಂತೆ” ಎಂದು ಕಮಲ್ ಹಾಸನ್ ಅಮೂಲ್ಯ ಸಲಹೆ ನೀಡಿದ್ದಾರೆ.

ಮುಂದುವರಿದು ತಮಾಷೆ ಮಾಡಿದ ಕಮಲ್, “ನಾನು ಎಷ್ಟೇ ಅವತಾರ ತಾಳಿದರೂ, ಗಡ್ಡ ತೆಗೆದರೂ ಈ ಪಾತ್ರ ಮಾಡಲು ಸಾಧ್ಯವಿಲ್ಲ. ಇಂತಹ ಸವಾಲಿನ ಪಾತ್ರವನ್ನು ಒಪ್ಪಿಕೊಂಡ ರಶ್ಮಿಕಾ ಅವರ ಧೈರ್ಯ ಮೆಚ್ಚಲೇಬೇಕು” ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

‘ಎಂ.ಎಸ್. ಎ ಲೆಗಸಿ ಆನ್ ಸ್ಕ್ರೀನ್’ಯಲ್ಲಿ ರಶ್ಮಿಕಾ ಹೈಲೈಟ್

ಈ ಜೀವನಾಧಾರಿತ ಸಿನಿಮಾಗೆ ‘ಎಂ.ಎಸ್. ಎ ಲೆಗಸಿ ಆನ್ ಸ್ಕ್ರೀನ್’ ಎಂದು ಶೀರ್ಷಿಕೆ ಇಡಲಾಗಿದೆ. ‘ಜೆರ್ಸಿ’ ಚಿತ್ರದ ಖ್ಯಾತಿಯ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಭಾರತೀಯ ಚಿತ್ರರಂಗದ ದೈತ್ಯ ನಿರ್ಮಾಪಕರಾದ ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಲಿದೆ.

ಎಂ.ಎಸ್. ಸುಬ್ಬಲಕ್ಷ್ಮಿ ಅವರ ದೈವಿಕ ಗಾಯನ ಮತ್ತು ಸರಳ ಜೀವನವನ್ನು ಬೆಳ್ಳಿಪರದೆಯ ಮೇಲೆ ಕಣ್ಣಿಗೆ ಕಟ್ಟುವಂತೆ ತರಲು ಇಡೀ ಚಿತ್ರತಂಡ ಭರಪೂರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.