Photo Credits: Photo Credits: @viji.darshan (Instagram)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ದರ್ಶನ್ ಅವರನ್ನು ಅಪ್ಪಿಕೊಂಡಿರುವ ಭಾವಚಿತ್ರವನ್ನು ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮನದ ದುಃಖ ಮತ್ತು ನೋವನ್ನು ಹೊರಹಾಕಿದ್ದಾರೆ. ಕಠಿಣ ಪರಿಸ್ಥಿತಿಯ ನಡುವೆಯೂ ಗಂಡನ ಬೆನ್ನಿಗೆ ನಿಂತಿರುವ ವಿಜಯಲಕ್ಷ್ಮಿ ಅವರ ಈ ಭಾವುಕ ಸಾಲುಗಳು ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿವೆ.
ವಿಜಯಲಕ್ಷ್ಮಿ ಬರೆದುಕೊಂಡ ಭಾವುಕ ಸಾಲುಗಳು…
ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿರುವ ವಿಜಯಲಕ್ಷ್ಮಿ, “ಒಂದು ವರ್ಷವಾಯಿತು, ಆದರೆ ನನ್ನ ಮನಸ್ಸಿನ ಗಾಯಗಳು ಇನ್ನು ವಾಸಿಯಾಗಿಲ್ಲ, ನೋವನ್ನು ಭರಿಸಲು ಸಾಧ್ಯವಾಗುತ್ತಿಲ್ಲ” ಎಂದು ಇಂಗ್ಲಿಷ್ನಲ್ಲಿ ಬರೆದುಕೊಂಡಿದ್ದಾರೆ.
“ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಈ ಪ್ರಪಂಚವು ನಮ್ಮನ್ನು ಏನೇನೋ ಜಡ್ಜ್ ಮಾಡಬಹುದು. ಆದರೆ ನಾನು ಯಾರಿಗೂ ಯಾವುದೇ ಸ್ಪಷ್ಟನೆ ಅಥವಾ ವಿವರಣೆ ನೀಡುವುದನ್ನು ಈಗ ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಈಗ ನಾನು ಕೇವಲ ಮುಗುಳ್ನಗುತ್ತೇನೆ, ಉಳಿದದ್ದನ್ನು ಕಾಲ ಮತ್ತು ದೇವರು ನಿರ್ಧರಿಸಲಿ” ಎಂದು ತಮ್ಮ ಮನದ ನೋವನ್ನು ತೋಡಿಕೊಂಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೊಳಗಾದ ದಿನದಿಂದಲೂ ವಿಜಯಲಕ್ಷ್ಮಿ ಅವರು ತೀವ್ರ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಪ್ರತಿಯೊಂದು ಕಷ್ಟದ ಹಂತದಲ್ಲೂ ಇಡೀ ಕುಟುಂಬವನ್ನು ರಕ್ಷಿಸಿಕೊಂಡು, ಧೈರ್ಯದಿಂದ ಗಂಡನ ಪರವಾಗಿ ನಿಂತಿದ್ದಾರೆ.
ವಕೀಲರ ಜೊತೆ ನಿರಂತರ ಮಾತುಕತೆ ನಡೆಸುವುದು ಹಾಗೂ ನ್ಯಾಯಾಲಯದ ಅಲೆದಾಟವನ್ನು ಅವರೊಬ್ಬರೇ ನಿಭಾಯಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ನೆಗೆಟಿವ್ ಕಮೆಂಟ್ಗಳು ಹಾಗೂ ಟ್ರೋಲ್ಗಳ ಮಧ್ಯೆಯೂ ಅವರು ಧೃತಿಗೆಡದೆ ಮುನ್ನಡೆಯುತ್ತಿದ್ದಾರೆ.
ಗಂಡನ ಮೇಲಿನ ಅಪಾರ ಪ್ರೀತಿ ಹಾಗೂ ನಂಬಿಕೆಯನ್ನು ಅವರು ಹಲವು ಬಾರಿ ತಮ್ಮ ಪೋಸ್ಟ್ಗಳ ಮೂಲಕ ಸಾರಿದ್ದಾರೆ. ಈ ಕಷ್ಟದ ಸಮಯದಲ್ಲಿ ಇಡೀ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಅವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಒಂದು ವರ್ಷದ ನೆನಪನ್ನು ಹಂಚಿಕೊಂಡು ಅವರು ಬರೆದಿರುವ ಮಾತುಗಳು ಅಭಿಮಾನಿಗಳ ಹೃದಯ ಸ್ಪರ್ಶಿಸಿವೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ಅವರ ಈ ಇನ್ಸ್ಟಾಗ್ರಾಮ್ ಸ್ಟೋರಿ ಭಾರಿ ಸಂಚಲನ ಮೂಡಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.




