KICCHA SUDEEP: ಈ ಬಾರಿಯ ಬಿಗ್ ಬಾಸ್ ಯಾಕೆ ಸ್ಪೆಷಲ್? ಸುದೀಪ್ ನೀಡಿದ ಉತ್ತರ ಇಲ್ಲಿದೆ

ಈ ಬಾರಿಯ ಬಿಗ್ ಬಾಸ್ ಯಾಕೆ ಸ್ಪೆಷಲ್?

Photo Credits: @ColorsKannada (Youtube)

ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್ ಹಲವು ಕಾರಣಗಳಿಂದ ತಮಗೆ ಬಹಳ ವಿಶೇಷ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.

ಸೆಪ್ಟೆಂಬರ್ 6 ರಿಂದ ಬಿಗ್ ಬಾಸ್ ಶುರುವಾಗಲಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ತಮ್ಮ ಸಿನಿಮಾ ಚಿತ್ರೀಕರಣ ಹಾಗೂ ಬಿಗ್ ಬಾಸ್ ಶೋ ನಡುವಿನ ಸಮಯ ಹೊಂದಾಣಿಕೆಯ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಶೂಟಿಂಗ್ ಸೆಟ್ ಮತ್ತು ಬಿಗ್ ಬಾಸ್ ವೇದಿಕೆಯ ಸೀಕ್ರೆಟ್

ಹಿಂದಿನ ಸೀಸನ್‌ಗಳಲ್ಲಿ ವೀಕೆಂಡ್ ಶೂಟಿಂಗ್ ಮ್ಯಾನೇಜ್ ಮಾಡುವುದು ತಮಗೆ ದೊಡ್ಡ ಸವಾಲಾಗಿತ್ತು ಎಂದು ಸುದೀಪ್ ನೆನಪಿಸಿಕೊಂಡಿದ್ದಾರೆ.

“ಒಮ್ಮೆ ಮಹಾಬಲಿಪುರಂನಲ್ಲಿ ಶೂಟಿಂಗ್‌ನಲ್ಲಿದ್ದಾಗ ವೀಕೆಂಡ್‌ನಲ್ಲಿ ಬೆಂಗಳೂರಿಗೆ ಬಂದು, ಜೆ.ಪಿ. ನಗರ ತಲುಪಿ ಬಿಗ್ ಬಾಸ್ ಸೆಟ್‌ಗೆ ಹೋಗಬೇಕಿತ್ತು. ಆದರೆ ಈ ಬಾರಿ ಆ ತಲೆನೋವಿಲ್ಲ” ಎಂದಿದ್ದಾರೆ.

ತಮ್ಮ ಬಹುನಿರೀಕ್ಷಿತ ‘ಬಿಲ್ಲ ರಂಗ ಭಾಷಾ’ ಚಿತ್ರದ ಸೆಟ್ ಬಿಗ್ ಬಾಸ್ ಸೆಟ್‌ನ ಸಮೀಪದಲ್ಲೇ ಇದೆ. ಹೀಗಾಗಿ ಕೇವಲ 15 ನಿಮಿಷದಲ್ಲೇ ಶೂಟಿಂಗ್ ಮುಗಿಸಿ ಬಿಗ್ ಬಾಸ್ ವೇದಿಕೆಗೆ ಬರಬಹುದು ಎಂದು ಖುಷಿ ಹಂಚಿಕೊಂಡಿದ್ದಾರೆ.

‘ಅಗ್ನಿಪರೀಕ್ಷೆ’ ಹಾಗೂ ಜಡ್ಜ್‌ಗಳ ಕಟು ವರ್ತನೆಗೆ ಸುದೀಪ್ ಪ್ರತಿಕ್ರಿಯೆ

ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿರುವ ‘ಅಗ್ನಿಪರೀಕ್ಷೆ’  ಹಾಗೂ ಜಡ್ಜ್‌ಗಳ ಕಟು ವರ್ತನೆ ಕುರಿತು ಸುದೀಪ್ ಮುಕ್ತವಾಗಿ ಮಾತನಾಡಿದ್ದಾರೆ.

“ಕೆಲವು ಅಗ್ನಿಪರೀಕ್ಷೆಗಳು ಮುಗಿದ ಮೇಲೆಯೇ ನಿಜವಾದ ಯಶಸ್ಸು ಸಿಗುವುದು. ಶಾಲೆಯಲ್ಲಿ ಶಿಕ್ಷಕರು ‘ಗೆಟ್ ಔಟ್’ ಎಂದಾಗ ಕಹಿಯೆನಿಸಿದರೂ ಅದು ಒಳ್ಳೆಯದಕ್ಕೇ ಆಗಿರುತ್ತದೆ” ಎಂದು ವಿವರಿಸಿದ್ದಾರೆ.

ಜಡ್ಜ್‌ಗಳ ನಡವಳಿಕೆ ಸರಿ-ತಪ್ಪು ಎನ್ನುವುದಕ್ಕಿಂತ, ಅಲ್ಲಿ ರಿಜೆಕ್ಟ್ ಆದವರಿಗೂ ಅದು ದೊಡ್ಡ ಜನಪ್ರಿಯತೆ ತಂದುಕೊಟ್ಟಿರಬಹುದು. ಅವಮಾನಗಳನ್ನು ಮೆಟ್ಟಿ ನಿಂತು ಬಂದವರಿಗೆ ಉತ್ತಮ ಮನರಂಜನೆ ನೀಡೋಣ ಎಂದು ಸ್ಪರ್ಧಿಗಳಿಗೆ ಧೈರ್ಯ ತುಂಬಿದ್ದಾರೆ.

ಮುಂದಿನ ಸಿನಿಮಾಗಳ ಬಗ್ಗೆ ಕಿಚ್ಚನ ಮಾರ್ಮಿಕ ಮಾತು

ಒಮ್ಮೆ ತಿರಸ್ಕೃತರಾದ ಮಾತ್ರಕ್ಕೆ ಬದುಕಿನ ಬಾಗಿಲುಗಳು ಮುಚ್ಚುವುದಿಲ್ಲ ಎಂದು ಸುದೀಪ್ ಪ್ರೇರಣಾದಾಯಿ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

“ಮುಂದಿನ ಬೇಟೆಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ, ಸರಿಯಾದ ಸಮಯ ಬಂದಾಗ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ” ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕಾಯ್ದುಕೊಂಡಿದ್ದಾರೆ.