Photo Credits: @kichchasudeepa (Instagram)
‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಸೆಪ್ಟೆಂಬರ್ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ನಾಲ್ಕು ಪುಟಗಳ ಭಾವುಕ ಪತ್ರ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 30 ವರ್ಷಗಳನ್ನು ಪೂರೈಸಿರುವ ಸುದೀಪ್, ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಕೆಲವು ಬಲವಾದ ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಆ ದಿನದಂದು ಮನೆಯ ಬಳಿ ಯಾರಿಗೂ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅಭಿಮಾನಿಗಳು ತಮ್ಮ ಊರುಗಳಲ್ಲಿ ಮಾಡುವ ಸಮಾಜಮುಖಿ ಕಾರ್ಯಗಳೇ ತಮಗೆ ನಿಜವಾದ ಆಶೀರ್ವಾದ ಎಂದಿದ್ದಾರೆ.
“ಸಂಭ್ರಮಗಳನ್ನು ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವಲ್ಲ”
ತಮ್ಮ ಪತ್ರದಲ್ಲಿ ಬರೆದುಕೊಂಡಿರುವ ಸುದೀಪ್, “ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೇ ಅಲ್ಲ ನನಗೆ. ಮನೆಯ ಬಳಿ ಸತ್ಕಾರಗಳು, ಗದ್ದಲವಾಗಬಾರದು ಎಂಬುದನ್ನು ನಿಮ್ಮಲ್ಲಿ ಪದೇ ಪದೇ ವಿನಂತಿ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.
ನಿಮ್ಮ ಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ ಎಂದು ಕೇಳಿಕೊಂಡಿರುವ ಕಿಚ್ಚ, ತಮ್ಮ ಮತ್ತು ಅಭಿಮಾನಿಗಳ ನಡುವಿನ ಈ ಬಂಧ ಶಾಶ್ವತವಾದದ್ದು ಎಂದು ಹೇಳಿದ್ದಾರೆ.
“ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ… ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ”

Photo Credits: @kichchasudeepa (Instagram)
“ಕನ್ನಡ ನನ್ನ ಸತ್ವ.. ಕನ್ನಡದಿಂದ ನಾನು ನಿತ್ಯ”
30 ವರ್ಷಗಳ ಸಿನಿಮಾ ಜರ್ನಿ ನೆನಪಿಸಿಕೊಂಡು, “ಕನ್ನಡ ನನ್ನ ಸತ್ವ.. ಕನ್ನಡದಿಂದ ನಾನು ನಿತ್ಯ. ನಿಮ್ಮನ್ನು ರಂಜಿಸುವ ವಿಷಯದಲ್ಲಿ ಯಾವತ್ತಿಗೂ ರಾಜಿಯಾಗದವನಲ್ಲ ನಾನು, ಮುಂದೆ ಕೂಡ ರಾಜಿ ಆಗುವುದಿಲ್ಲ” ಎಂದು ಫ್ಯಾನ್ಸ್‌ಗೆ ಭರವಸೆ ನೀಡಿದ್ದಾರೆ.
ತಮ್ಮ ಸಿನಿಮಾದ ಖಡಕ್ ಡೈಲಾಗ್ ನೆನಪಿಸಿಕೊಳ್ಳುತ್ತಾ, ಮುಂದಿನ ಬಿಗ್ ಪ್ರಾಜೆಕ್ಟ್‌ಗಳಿಗೆ ಭರ್ಜರಿಯಾಗಿ ಸಜ್ಜಾಗುತ್ತಿರುವ ಸ್ಪಷ್ಟ ಸುಳಿವನ್ನು ನೀಡಿದ್ದಾರೆ.




