Photo Credits: @patedar_vijay (Instagram)
ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಹಾಗೂ ನಾಯಕ ನಟ ಚಿಕ್ಕಣ್ಣ ಅವರ ಮದುವೆ ಅದ್ದೂರಿಯಾಗಿ ಜರುಗಿದೆ. ಮೈಸೂರಿನಲ್ಲಿ ಶ್ರೀರಂಗಪಟ್ಟಣದ ಪಾವನ ಕೆ.ಸಿ ಅವರನ್ನ ಚಿಕ್ಕಣ್ಣ ವರಿಸಿದ್ದಾರೆ.
ಗುರು-ಹಿರಿಯರು ನಿಶ್ಚಯಿಸಿದ ಪಕ್ಕಾ ಅರೇಂಜ್ಡ್ ಮ್ಯಾರೇಜ್ ಇದಾಗಿದ್ದು, ಇಂದು ಭಾನುವಾರ (ಆಗಸ್ಟ್ 30) ನವಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಡ್ಯ ಮೂಲದ ಇಂಜಿನಿಯರಿಂಗ್ ಪದವೀಧರೆ ಪಾವನ ಅವರ ಕೈಹಿಡಿದ ಚಿಕ್ಕಣ್ಣ ಅವರಿಗೆ ಸ್ಯಾಂಡಲ್ವುಡ್ ತಾರೆಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ತಾಳಿ ಕಟ್ಟುವ ವೇಳೆ ಭಾವುಕರಾದ ವಧು ಪಾವನ
ಮೈಸೂರಿನ ಪ್ರಸಿದ್ಧ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್ನಲ್ಲಿ ಈ ಅದ್ಧೂರಿ ಕಲ್ಯಾಣ ನೆರವೇರಿದೆ. ಶನಿವಾರ ರಾತ್ರಿ ವೈಭವದ ಆರತಕ್ಷತೆ ಜರುಗಿತ್ತು. ಇಂದು ಬೆಳಗಿನ ಶುಭ ಮುಹೂರ್ತದಲ್ಲಿ ಚಿಕ್ಕಣ್ಣ, ಪಾವನ ಕೊರಳಿಗೆ ತಾಳಿ ಕಟ್ಟಿದ್ದಾರೆ.
ಮಾಂಗಲ್ಯ ಧಾರಣೆ ವೇಳೆ ನವಜೋಡಿ ರೇಷ್ಮೆ ಉಡುಗೆಯಲ್ಲಿ ಅತ್ಯಂತ ಮುದ್ದಾಗಿ ಕಂಗೊಳಿಸುತ್ತಿದ್ದರು. ತಾಳಿ ಕಟ್ಟುವ ಸಂದರ್ಭದಲ್ಲಿ ನಗುತ್ತಿದ್ದ ಪಾವನ, ನಂತರದ ಶಾಸ್ತ್ರಗಳಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಸನ್ನಿವೇಶ ಕಂಡುಬಂತು.
ಬಡತನದಿಂದ ಬೆಳೆದು ನಾಯಕನಟನಾದ ಮೈಸೂರು ಹುಡುಗ
ಮೈಸೂರು ಜಿಲ್ಲೆಯ ಬಲ್ಲಹಳ್ಳಿ ಗ್ರಾಮದ ಚಿಕ್ಕಣ್ಣ ಬಡತನದಲ್ಲಿ ಹುಟ್ಟಿ ಬೆಳೆದವರು. ಗಾರೆ ಕೆಲಸ, ಕುರಿ ಮೇಯಿಸುವ ಕೆಲಸ ಮಾಡುತ್ತಲೇ ನಾಟಕಗಳಲ್ಲಿ ನಟಿಸುತ್ತಿದ್ದರು. ನಂತರ ಕಾಮಿಡಿ ಶೋಗಳ ಮೂಲಕ ಕಿರುತೆರೆ ಪ್ರವೇಶಿಸಿದರು.
ಯಶ್ ಅಭಿನಯದ ‘ಕಿರಾತಕ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಬಂದ ಚಿಕ್ಕಣ್ಣ ಅವರಿಗೆ ‘ರಾಜಾಹುಲಿ’ ಚಿತ್ರ ದೊಡ್ಡ ಬ್ರೇಕ್ ನೀಡಿತು. ಪ್ರಸ್ತುತ ‘ಉಪಾಧ್ಯಕ್ಷ’ ಹಾಗೂ ‘ಲಕ್ಷ್ಮೀಪುತ್ರ’ ಸಿನಿಮಾಗಳ ಮೂಲಕ ನಾಯಕ ನಟನಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಶ್ರೀರಂಗಪಟ್ಟಣದ ಇಂಜಿನಿಯರ್ ಹುಡುಗಿ ಪಾವನ
ವಧು ಪಾವನ ಕೆ.ಸಿ. ಗೌಡ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. ಇವರು ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದ್ದಾರೆ.
42 ವರ್ಷದ ಚಿಕ್ಕಣ್ಣ ಹಾಗೂ 35 ವರ್ಷದ ಪಾವನ ನಡುವೆ ಸುಮಾರು 7 ವರ್ಷಗಳ ವಯಸ್ಸಿನ ಅಂತರವಿದೆ. ಮದುವೆಗೆ ಬಂಧು-ಮಿತ್ರರು, ಕುಟುಂಬಸ್ಥರು ಹಾಗೂ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.




