☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Interview: ‘ಕುಲವಧು’ ನಿಂದ ‘ಶಾರದೆ’ಯವರೆಗೆ; ನಟ ಸೂರಜ್ ಹೊಳಲು ನಟನಾ ಪಯಣ

Interview: Actor Suraj Holalu Journey From Kulavadhu To Sharade Serial
ಕಿರುತೆರೆ ನಟ ಸೂರಜ್ ಹೊಳಲು ತಮ್ಮ ನಟನಾ ಪಯಣ, 'ಶಾರದೆ' ಸೀರಿಯಲ್ ಅನುಭವ ಹಾಗೂ ತಮ್ಮ ವೈಯಕ್ತಿಕ ಜೀವನದ ಕುರಿತು ಹಂಚಿಕೊಂಡ ವಿಶೇಷ ಸಂದರ್ಶನ.

ಖ್ಯಾತ ಕಿರುತೆರೆ ನಟ ಸೂರಜ್ ಹೊಳಲು ಅವರು ತಮ್ಮ ನಟನಾ ಪಯಣದ ಹಾದಿಯಲ್ಲಿ ‘ಕುಲವಧು’ ಸೀರಿಯಲ್‌ನಿಂದ ಆರಂಭಿಸಿ, ವಿವಿಧ ಏಳು-ಬೀಳುಗಳನ್ನು ದಾಟಿ ಪ್ರಸ್ತುತ ‘ಶಾರದೆ’ ಧಾರಾವಾಹಿಯ ‘ಸಿದ್ಧಾರ್ಥ್’ ಪಾತ್ರದ ಮೂಲಕ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ತಮ್ಮ 1500ಕ್ಕೂ ಹೆಚ್ಚು ಎಪಿಸೋಡ್‌ಗಳ ಸುದೀರ್ಘ ಪಯಣದಲ್ಲಿ ಎದುರಾದ ಸವಾಲುಗಳು, ತೆಲುಗು ಕಿರುತೆರೆಯ ಅನುಭವ, ಅನಿರೀಕ್ಷಿತವಾಗಿ ಒಲಿದುಬಂದ ‘ಶಾರದೆ’ ಧಾರಾವಾಹಿಯ ಅವಕಾಶ ಹಾಗೂ ರಿಯಲ್ ಲೈಫ್‌ನ ಸ್ವಾರಸ್ಯಕರ ಸಂಗತಿಗಳನ್ನು ಅವರು ಮುಕ್ತವಾಗಿ (Interview) ಹಂಚಿಕೊಂಡಿದ್ದಾರೆ. ನಟನೆಯ ಜತೆಗೆ ತಮ್ಮ ಬಿಡುವಿನ ವೇಳೆಯಲ್ಲಿ ಸಕಲೇಶಪುರದ ತೋಟದಲ್ಲಿ ಕಾಲ ಕಳೆಯಲು ಇಷ್ಟಪಡುವ ಸೂರಜ್, ಇದುವರೆಗೆ ತಮ್ಮ ಪ್ರತಿಯೊಂದು ಪಾತ್ರವನ್ನೂ ಪ್ರೀತಿಸಿ ಬೆಂಬಲಿಸಿದ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

 

‘ಜಾನಕಿ ಸಂಸಾರ’, ‘ಕುಲವಧು’ ಸೀರಿಯಲ್ ಗಳಿಂದ ಹಿಡಿದು ಈಗಿನ ‘ಶಾರದೆ’ಯವರೆಗೆ ನಿಮ್ಮ ನಟನಾ ಪಯಣ ಹೇಗಿದೆ?

ಸೂರಜ್ ಹೊಳಲು: ನನ್ನ ಆಕ್ಟಿಂಗ್ ಕರಿಯರ್ ಶುರುವಾಗಿದ್ದೇ ‘ಕುಲವಧು’ ಧಾರಾವಾಹಿಯಿಂದ. ಅದು ಅತ್ಯಂತ ದೊಡ್ಡ ಮಟ್ಟದ ಸಕ್ಸೆಸ್ ತಂದುಕೊಟ್ಟಿತು. ಸುಮಾರು 1500 ಎಪಿಸೋಡ್‌ಗಳಿಗೂ ಹೆಚ್ಚು ಕಾಲ, ಅಂದರೆ ಐದು ವರ್ಷಗಳ ಕಾಲ ಆ ಪಯಣ ಸಾಗಿತ್ತು.

ಅದಾದ ಮೇಲೆ ಜೀ ಕನ್ನಡದಲ್ಲಿ ‘ಯಾರೇ ನೀ ಮೋಹಿನಿ’ ಸೀರಿಯಲ್ ಕೂಡ ತುಂಬಾ ಚೆನ್ನಾಗಿ ಮೂಡಿಬಂತು. ಅದೇ ಸಮಯದಲ್ಲಿ ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ‘ಚಿಟ್ಟಿತಲ್ಲಿ’ ಅನ್ನೋ ಧಾರಾವಾಹಿ ಮಾಡ್ತಿದ್ದೆ. ಆರಂಭದಲ್ಲಿ ಅದಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತಾದರೂ, ಕೋವಿಡ್ ಹಾಗೂ ಲಾಕ್‌ಡೌನ್ ಬಂದಿದ್ದರಿಂದ ಕ್ಯಾರಕ್ಟರ್‌ಗಳು ಚೇಂಜ್ ಆಗಿ, ಒಂದು ವರ್ಷಕ್ಕೆ ಆ ಸೀರಿಯಲ್ ಮುಕ್ತಾಯವಾಯ್ತು.

ಆನಂತರ ಕೆರಿಯರ್‌ನಲ್ಲಿ ಸ್ವಲ್ಪ ಡೌನ್‌ಫಾಲ್ ಎದುರಾಯ್ತು. ಪ್ರಾಜೆಕ್ಟ್‌ಗಳು ಬರ್ತಿದ್ದರೂ ಯಾಕೋ ಕೈ ಹಿಡಿತಿರಲಿಲ್ಲ. ‘ಗೃಹಪ್ರವೇಶ’ ಸೀರಿಯಲ್ ಮಾಡಿದಾಗ ಅದಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತಾದರೂ, ಮಧ್ಯಾಹ್ನದ ಸ್ಲಾಟ್‌ಗೆ ಹಾಕಿದ್ದರಿಂದ ವೀಕ್ಷಕರ ಸಂಖ್ಯೆ ಕಡಿಮೆಯಾಯ್ತು. ‘ಜಾನಕಿ ಸಂಸಾರ’ ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ, ಈಗ ‘ಶಾರದೆ’ ಧಾರಾವಾಹಿ ಮತ್ತೆ ನನ್ನ ಕೈ ಹಿಡಿದಿದೆ, ತುಂಬಾ ಚೆನ್ನಾಗಿ ರೆಸ್ಪಾನ್ಸ್ ಬರ್ತಿದೆ.

 

‘ಶಾರದೆ’ ಧಾರಾವಾಹಿಯಲ್ಲಿ ನಿಮ್ಮ ‘ಸಿದ್ಧಾರ್ಥ್’ ಪಾತ್ರ ನಿಮಗೆ ಸಿಕ್ಕಾಗ ಮೊದಲ ಖುಷಿ ಹೇಗಿತ್ತು?

ಸೂರಜ್ ಹೊಳಲು: ಖುಷಿ ಹೇಗಿತ್ತು ಅಂದ್ರೆ, ಆಕ್ಚುಲಿ ನಾನು ಕಾರಣಾಂತರದಿಂದ ‘ಈ ಪಾತ್ರವನ್ನು ನಾನು ಮಾಡಲ್ಲ’ ಅಂತ ಹೇಳಿದ್ದೆ. ಯಾಕಂದ್ರೆ ಆಕ್ಚುಲಿ ಶೂಟ್ ಸ್ಟಾರ್ಟ್ ಆಗಿಬಿಟ್ಟಿತ್ತು, ಆ ಪಾತ್ರಕ್ಕೆ ಬೇರೆ ಯಾರೋ ಇದ್ದರು. ಆಮೇಲೆ ಅವರಿಗೇನು ಸಮಸ್ಯೆಯಾಯ್ತೋ ಗೊತ್ತಿಲ್ಲ, ನಂತರ ಆ ಪಾತ್ರ ನನಗೆ ಬಂತು. ಆದರೆ ಆ ಸಂದರ್ಭದಲ್ಲಿ ನಾನು ಆ ಪಾತ್ರ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಅದಾದ್ಮೇಲೆ ಕೆಲವು ದಿನಗಳಾದ ಮೇಲೆ ಅವರು ಮತ್ತೆ ನನ್ನನ್ನು ಕೇಳಿದ್ರು, ಆಗ ಹೇಗೋ ಎಲ್ಲವೂ ಓಕೆ ಆಯ್ತು. ಒಂದು ವೇಳೆ ಇದನ್ನು ಮಾಡಿರಲಿಲ್ಲ ಅಂದ್ರೆ ಏನಾಗುತ್ತಿತ್ತು ಅಂತ ಸ್ವಲ್ಪ ರಿಗ್ರೆಟ್ ಕೂಡ ಮಾಡ್ತಿದ್ದೆ. ಆದರೆ ಈಗ ‘ಶಾರದೆ’ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ, ಆಕ್ಚುಲಿ ಇದು ತುಂಬಾ ಖುಷಿಕೊಟ್ಟಿದೆ.

 

‘ಕುಲವಧು’ ಮತ್ತು ‘ಯಾರೇ ನೀ ಮೋಹಿನಿ’ ಅನುಭವ ಈಗಿನ ಶೂಟಿಂಗ್‌ಗೆ ಹೇಗೆ ಸಹಾಯವಾಗುತ್ತಿದೆ?

ಸೂರಜ್ ಹೊಳಲು: ಕುಲವಧು’ ನನ್ನ ನಟನಾ ಪಯಣಕ್ಕೆ ನಿಜವಾದ ಬೇಸ್ (Base) ಆಕ್ಚುಲಿ. ನನಗೆ ಆಗ ನಟನೆ ಅಂದ್ರೆ ಏನು ಅಂತವೇ ಗೊತ್ತಿರಲಿಲ್ಲ, ಯಾವುದೇ ಅನುಭವವಿರಲಿಲ್ಲ. ಕೊನೆಗೆ ಒಂದು ಅಕ್ಷರವೂ ಗೊತ್ತಿರಲಿಲ್ಲ, ಡೈಲಾಗ್ಸ್ ತಗೊಳ್ಳೋಕೂ ಬರ್ತಾ ಇರಲಿಲ್ಲ. ಆದರೆ ಸಮ್ ಹೌ ಗಾಡ್ಸ್ ಗ್ರೇಸ್ ನಾನು ಆ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದೆ.

ಆದ್ಮೇಲೆ ನಮ್ಮ ನಿರ್ದೇಶಕ ಸತೀಶ್ ಸರ್ ತುಂಬಾ ಪೇಷನ್ಸ್ ಇಂದ ನನ್ನ ಹತ್ತಿರ ಆಕ್ಟ್ ಮಾಡ್ಸುತ್ತಾ ಇದ್ರು ಸ್ಟಾರ್ಟಿಂಗ್‌ನಲ್ಲಿ. ಆ ಅನುಭವದಿಂದಲೇ ಇವತ್ತು ನಾನು ಏನು ಆಕ್ಟ್ ಮಾಡ್ತಾ ಇದ್ದೀನಿ ಅದಕ್ಕೆಲ್ಲಾ ಕಾರಣ ಅದೇನೆ. ಅದಾದಮೇಲೆ ಅನುಭವ ಆಗ್ತಾ ಆಗ್ತಾ ಕಾನ್ಫಿಡೆನ್ಸ್ ಜಾಸ್ತಿ ಆಗುತ್ತೆ. ಅಭ್ಯಾಸ ಜಾಸ್ತಿ ಆದಂಗೆಲ್ಲಾ ನಮಗೆ ಅನ್ಸುತ್ತೆ ನಾವು ಚೆನ್ನಾಗಿ ಮಾಡ್ತಾ ಇದ್ದೀವಿ ಅಂತ.

ಇವಾಗ ಮೋರ್ ರಿಯಲಿಸ್ಟಿಕ್ ಆಗಿ ಮಾಡೋದು ಕಲ್ತಿದ್ದೀನಿ ಅಂತ ಅನ್ಕೊಂಡಿದ್ದೀನಿ. ಮುಂಚೆ ಅಷ್ಟು ಫೀಲ್ ಮಾಡೋಕೆ ಬರ್ತಿರಲಿಲ್ಲ, ಸುಮ್ನೆ ಡೈಲಾಗ್ ಹೇಳ್ತಾ ಇದ್ದೆ. ಇವಾಗ ಪಾತ್ರವನ್ನು ಚೆನ್ನಾಗಿ ಫೀಲ್ ಮಾಡ್ಕೊಂಡು ಮಾಡ್ತೀನಿ.

 

ಶಾರದೆಗೆ ಆಕಸ್ಮಿಕವಾಗಿ ತಾಳಿ ಕಟ್ಟುವ ಸನ್ನಿವೇಶದಲ್ಲಿ ನಟಿಸುವಾಗ ನಿಮಗೆ ಹೇಗನಿಸಿತು?

ಸೂರಜ್ ಹೊಳಲು: ಆ ಸಂದರ್ಭದಲ್ಲಿ ಡೆಫಿನೆಟ್ಲಿ ತಾಳಿಕಟ್ಟಲೇಬೇಕಾದ ಪರಿಸ್ಥಿತಿ ಇತ್ತು, ಇಲ್ಲ ಅಂದಿದ್ರೆ ದೀಪು ಪ್ರಾಣಕ್ಕೆ ತೊಂದರೆ ಆಗಿಬಿಡುತ್ತಿತ್ತು. ಆ ಮಗುವಿನ ಪ್ರಾಣದ ಬಗ್ಗೆಯೇ ಮುಖ್ಯವಾಗಿ ಕಾಳಜಿ ಇದ್ದಿದ್ದರಿಂದ, ಮಗುವಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಆ ಥಾಟ್ ಬಂದು ಆ ಸನ್ನಿವೇಶದಲ್ಲಿ ತಾಳಿಕಟ್ಟಬೇಕಾಯಿತು.

 

ರಿಯಲ್ ಲೈಫ್‌ನಲ್ಲಿ ನೀವು ಸಿದ್ಧಾರ್ಥ್ ತರಾನೇ ಗಂಭೀರವೋ ಅಥವಾ ತುಂಬಾನೇ ಖುಷಿಯಾಗಿರ್ತೀರಾ?

ಸೂರಜ್ ಹೊಳಲು: ನಾನು ರಿಯಲ್ ಲೈಫ್‌ನಲ್ಲಿ ತುಂಬಾ ಗಂಭೀರವಾಗಿರೋದಿಲ್ಲ, ಸ್ನೇಹಿತರ ಜೊತೆ ಮಾತ್ರ ತುಂಬಾ ಫ್ರೀಯಾಗಿ ಹಾಗೂ ಖುಷಿಯಾಗಿರ್ತೀನಿ. ಆದರೆ ಅಷ್ಟು ಪರಿಚಯವಿಲ್ಲದವರ ಜೊತೆ ಅಷ್ಟು ಹೆಚ್ಚಾಗಿ ಮಾತನಾಡಲ್ಲ, ಸ್ವಲ್ಪ ಕಡಿಮೆನೇ ಮಾತಾಡೋದು. ಒಟ್ಟಿನಲ್ಲಿ ಆ ಎಲ್ಲಾ ವಿಷಯಗಳನ್ನ ಸ್ನೇಹಿತರ ಜೊತೆ ಮಾತ್ರ ಹೆಚ್ಚು ಹಂಚಿಕೊಳ್ಳುತ್ತೇನೆ.

 

ಶೂಟಿಂಗ್ ಸೆಟ್‌ನಲ್ಲಿ ನಡೆದ ಮರೆಯಲಾಗದ ತಮಾಷೆಯ ಕ್ಷಣ ಯಾವುದು?

ಸೂರಜ್ ಹೊಳಲು: ಅಂತ ವಿಶೇಷವಾಗಿ ನೆನಪಿಟ್ಟುಕೊಳ್ಳುವ ದೊಡ್ಡದ ಏನೂ ಆಗಿಲ್ಲ, ಬಟ್ ಶಾರದೆ ಸೆಟ್‌ನಲ್ಲಿ ಪ್ರತಿದಿನವೂ ಏನಾದರೊಂದು ಫನ್ ಆಗ್ತಾನೇ ಇರುತ್ತೆ. ಆಕ್ಚುಲಿ ಶಾಟ್ಸ್‌ಗಿಂತ ಮುಂಚೆ ನಾನು ಎಲ್ಲರನ್ನೂ ನಗಿಸಿಬಿಡುತ್ತೇನೆ, ಆದರೆ ‘ಆಕ್ಷನ್’ ಎಂದ ಕೂಡಲೇ ನಾನು ತುಂಬಾ ಸೈಲೆಂಟ್ ಆಗಿಬಿಡುತ್ತೇನೆ. ಆದರೆ ನಾನು ಎಲ್ಲರನ್ನು ನಗಿಸಿಬಿಟ್ಟು ಸುಮ್ಮನಾದಮೇಲೆ ನನಗೆ ಬೈಯುತ್ತಾರೆ.

 

ನಟನೆ ಬಿಟ್ಟರೆ ನಿಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡಲು ಹೆಚ್ಚು ಇಷ್ಟಪಡುತ್ತೀರಿ?

ಸೂರಜ್ ಹೊಳಲು: ಫ್ರೀ ಟೈಮ್ ಸಿಕ್ಕರೆ ನಾನು ನಮ್ಮ ಊರಿಗೆ ಹೋಗಿಬಿಡ್ತೀನಿ, ಸಕೇಸ್ಪುರದಲ್ಲಿ ನಮ್ಮ ತೋಟ ಇದೆ. ಅಲ್ಲಿ ತೋಟದಲ್ಲೇ ಇರ್ತೀನಿ, ತೋಟ ಎಲ್ಲ ನೋಡಿಕೊಳ್ಳುತ್ತೇನೆ. ಮುಂಚೆ ತುಂಬಾ ಜಿಮ್ನಾಸ್ಟಿಕ್ಸ್, ಸ್ಟಂಟ್ಸ್, ಡ್ಯಾನ್ಸ್ ಎಲ್ಲಾ ಮಾಡ್ತಿದ್ದೆ, ಫ್ರೀ ಟೈಮ್‌ನಲ್ಲಿ ಅವೆಲ್ಲಾ ಇರ್ತಿತ್ತು. ಆದರೆ ಇತ್ತೀಚೆಗೆ ನಾನು ಅದೆಲ್ಲಾ ಮಾಡೋದಿಲ್ಲ. ಈಗ ನಂಗೆ ನನ್ನ ನೇಟಿವ್‌ಗೆ (Native) ಹೋಗೋದೇ ಇಷ್ಟ, ಅಲ್ಲಿ ತೋಟದಲ್ಲಿ ತುಂಬಾ ಪೀಸ್ ಆಗಿರುತ್ತೆ.

 

Interview: ಹಿಂದಿನಿಂದಲೂ ನಿಮ್ಮ ಎಲ್ಲಾ ಪಾತ್ರಗಳನ್ನು ಪ್ರೀತಿಸುತ್ತಿರುವ ವೀಕ್ಷಕರಿಗೆ ನೀವೇನು ಹೇಳಲು ಬಯಸುತ್ತೀರಿ?

ಸೂರಜ್ ಹೊಳಲು: ಹಿಂದಿನಿಂದಲೂ ನನ್ನ ಎಲ್ಲಾ ಪಾತ್ರಗಳಿಗೂ ಪ್ರೀತಿಯನ್ನು ತೋರಿಸುತ್ತಾ ಬಂದಿದ್ದಾರೆ. ನಾನು ವೀಕ್ಷಕರನ್ನು ಎಂಟರ್‌ಟೈನ್‌ಮೆಂಟ್ ಮಾಡ್ತಾ ಬಂದಿದ್ದೀನಿ ಅಂತ ಅಂದುಕೊಂಡಿದ್ದೀನಿ. ಕೆಲವೊಂದರಲ್ಲಿ ಅಷ್ಟು ಯಶಸ್ಸು ಸಿಗದಿದ್ದರೂ, ಆದಷ್ಟು ಎಂಟರ್‌ಟೈನ್‌ಮೆಂಟ್ ಮಾಡೋದಕ್ಕೆ ಟ್ರೈ ಮಾಡ್ತೀನಿ. ನನ್ನ ಈ ಪ್ರಯತ್ನಕ್ಕೆ ಎಲ್ಲರ ಪ್ರೀತಿ ಹೀಗೆಯೇ ಇರಲಿ ಎಂದು ಕೇಳಿಕೊಳ್ಳುತ್ತೇನೆ.