ಬೆಂಗಳೂರು : ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಬೇಕು ಮತ್ತು ಸ್ವಾಮಿನಾಥನ್ ವರದಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ರೈತ (farmers) ಮುಖಂಡ ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಲಕ್ಷಾಂತರ ರೈತರು ಬೆಳಗ್ಗೆಯಿಂದಲೇ ಬೃಹತ್ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಹತ್ತರಗಿ ಟೋಲ್ ಗೇಟ್ ಸೇರಿದಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪೂರ್ಣವಾಗಿ ತಡೆದು ಕರ್ನಾಟಕ ಬಂದ್ ಮತ್ತು ಜೈಲ್ ಭರೋ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಈ ಬಂದ್ ಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಬೆಂಬಲ ವ್ಯಕ್ತವಾಗಿದ್ದು, ರೈತ ಸಂಘಟನೆಗಳು ಒಗ್ಗೂಡಿ ಹೋರಾಟವನ್ನು ಯಶಸ್ವಿಗೊಳಿಸಲು ತಯಾರಿ ನಡೆಸಿವೆ.
ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ..!
ಕಬ್ಬಿಗೆ ಬೆಂಬಲ ಬೆಲೆ ಸಿಗುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಸ್ಪಷ್ಟವಾಗಿ ಘೋಷಿಸಿದ್ದಾರೆ. ನಮ್ಮ ಹೊಟ್ಟೆ ಮೇಲೆ ಹೊಡೆಯುವುದನ್ನು ನಿಲ್ಲಿಸಿ, ಟನ್ ಗೆ 4500 ರೂಪಾಯಿ ನೀಡುವವರೆಗೆ ಈ ಹೋರಾಟದ ಕಿಚ್ಚು ಆರುವುದಿಲ್ಲ ಎಂದು ಚೂನಪ್ಪ ಪೂಜಾರಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬು ಬೆಳೆದು ಕೈಗೆ ಬಂದ ಬೆಲೆ ಸಿಗದೆ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ನೀಡುವ ಬೆಲೆ ಉತ್ಪಾದನಾ ವೆಚ್ಚಕ್ಕೂ ಸಾಕಾಗುತ್ತಿಲ್ಲ ಎಂಬುದು ರೈತರ ಪ್ರಮುಖ ಆರೋಪವಾಗಿದೆ. ಆದ್ದರಿಂದಲೇ ಈ ಬಾರಿ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ.
ಇದನ್ನೂ ಓದಿ : ತುಘಲಕ್ ಕೈಯಲ್ಲಿ ಪೊಲೀಸರು – ಮಂಗನ ಕೈಯಲ್ಲಿ ಗೃಹ ಇಲಾಖೆ : ಕುಮಾರಸ್ವಾಮಿ
ಈ ಹೋರಾಟ ಕೇವಲ ಬೆಲೆ ಏರಿಕೆಯ ಬೇಡಿಕೆಗೆ ಸೀಮಿತವಾಗಿಲ್ಲ. ಇದು ಕಬ್ಬು ಬೆಳೆಗಾರರ ದೀರ್ಘಕಾಲದ ಸಂಕಷ್ಟ, ಉತ್ಪಾದನಾ ವೆಚ್ಚದ ಏರಿಕೆ ಮತ್ತು ಸರ್ಕಾರದ ನಿರ್ಲಕ್ಷ್ಯದ ವಿರುದ್ಧದ ಸಿಟ್ಟಿನ ಪ್ರತಿಬಿಂಬವಾಗಿದೆ. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸುವ ಮೂಲಕ ರೈತರು ತಮ್ಮ ಭವಿಷ್ಯಕ್ಕೆ ಶಾಶ್ವತ ಪರಿಹಾರ ಬಯಸುತ್ತಿದ್ದಾರೆ. ಹೆದ್ದಾರಿ ತಡೆ ಮತ್ತು ಜೈಲ್ ಭರೋದಂತಹ ತೀವ್ರ ಸ್ವರೂಪದ ಹೋರಾಟದಿಂದ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದ್ದರೂ, ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಸರ್ಕಾರಕ್ಕೆ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ದೊಡ್ಡ ಹಿನ್ನಡೆಯಾಗಲಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರೈತರ ಅಸಮಾಧಾನವನ್ನು ಕಡೆಗಣಿಸುವುದು ಆಡಳಿತ ಪಕ್ಷಕ್ಕೆ ದುಬಾರಿಯಾಗಬಹುದು. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.




