ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ (Dhanveerah) ಅವರಿಗೆ ವಿವಾದಗಳು ಬೆನ್ನುಬಿದ್ದಂತೆ ಕಾಣುತ್ತಿವೆ. ಇತ್ತೀಚೆಗೆ ಸಾಲು ಸಾಲು ವಿವಾದಗಳಲ್ಲಿ ಸಿಲುಕಿರುವ ನಟನಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಿಂದ ಅವರಿಗೆ ನೋಟಿಸ್ ಜಾರಿಯಾಗಿದೆ.
ಬಸವೇಶ್ವರ ನಗರ, ಆರ್ಆರ್ ನಗರ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ಧನ್ವೀರ್ ವಿರುದ್ಧ ಪ್ರತ್ಯೇಕ ದೂರುಗಳು ದಾಖಲಾಗಿವೆ. ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪಗಳು ನಟನ ಮೇಲಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ಪ್ರತ್ಯೇಕ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಮೂರೂ ಠಾಣೆಗಳ ಅಧಿಕಾರಿಗಳು ನಟನಿಗೆ ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಖುದ್ದಾಗಿ ಹಾಜರಾಗಿ ತಮ್ಮ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಇದರಿಂದ ನಟ ಧನ್ವೀರ್ಗೆ ದೊಡ್ಡ ಮಟ್ಟದ ತಲೆನೋವು ಶುರುವಾಗಿದೆ.
ಸತತ 3 ದಿನಗಳ ಕಾಲ ನಡೆಯಲಿದೆ ಪೊಲೀಸ್ ವಿಚಾರಣೆ
ಪೊಲೀಸರು ಜಾರಿ ಮಾಡಿರುವ ನೋಟಿಸ್ ಪ್ರಕಾರ ಧನ್ವೀರ್ ಗೌಡ ಅವರು ಸೋಮವಾರದಿಂದ ವಿಚಾರಣೆಗೆ ಹಾಜರಾಗಬೇಕಿದೆ. ಪ್ರಕರಣಗಳ ತನಿಖೆಗಾಗಿ ಪ್ರತಿದಿನ ಒಂದೊಂದು ಪೊಲೀಸ್ ಠಾಣೆಗೆ ತೆರಳಿ ವಿಚಾರಣೆ ಎದುರಿಸಲಿದ್ದಾರೆ.
ಹೀಗಾಗಿ ಸತತವಾಗಿ ಮೂರು ದಿನಗಳ ಕಾಲ ಅವರು ವಿವಿದ ಠಾಣೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರಿನಲ್ಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರು ಧನ್ವೀರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.
ಇದನ್ನು ಓದಿ: Darshan-Dhanveerah: ಧನ್ವೀರ್ ವಿರುದ್ಧ ಕೇಸ್ ಹಾಕಿದ ದರ್ಶನ್
Dhanveerah: ಮೂರು ಠಾಣೆಗಳ ನೋಟಿಸ್ನಿಂದ ಹೆಚ್ಚಿದ ಕುತೂಹಲ
ಈಗಾಗಲೇ ದರ್ಶನ್ ಕುಟುಂಬದ ಜೊತೆಗಿನ ಕಾನೂನು ಸಮರದ ವಿವಾದದಲ್ಲಿ ಧನ್ವೀರ್ ಗೌಡ ಸುದ್ದಿ ಕೇಂದ್ರದಲ್ಲಿದ್ದರು. ಅದರ ಬೆನ್ನಲ್ಲೇ ಈಗ ಮೂರು ಠಾಣೆಗಳಿಂದ ನೋಟಿಸ್ ಬಂದಿರುವುದು ಅವರಿಗೆ ಮತ್ತಷ್ಟು ಹಿನ್ನಡೆ ತಂದಿದೆ.
ವಿಚಾರಣೆ ವೇಳೆ ನಟ ಧನ್ವೀರ್ ಪೊಲೀಸರ ಮುಂದೆ ನೀಡುವ ಹೇಳಿಕೆ ಹಾಗೂ ಪೊಲೀಸರು ಕೈಗೊಳ್ಳುವ ಮುಂದಿನ ಕಾನೂನು ಕ್ರಮಗಳ ಬಗ್ಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಕುತೂಹಲ ಮೂಡಿದೆ. ನಟ ಧನ್ವೀರ್ ಈ ಸಂಕಷ್ಟದಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.




