P. Susheela Biopic: ಭಾರತೀಯ ಸಂಗೀತ ಲೋಕದ ದಂತಕಥೆ, ಗಾನಕೋಗಿಲೆ ಎಂದೇ ಖ್ಯಾತರಾದ ಹಿರಿಯ ಗಾಯಕಿ ಪಿ. ಸುಶೀಲಾ ಅವರ ಜೀವನಕಥೆ ಬೆಳ್ಳಿತೆರೆಗೆ ಬರಲಿದೆ. ಈ ಬಹುನಿರೀಕ್ಷಿತ ಬಯೋಪಿಕ್ನಲ್ಲಿ ಕನ್ನಡದ ಜನಪ್ರಿಯ ನಟಿ ರುಕ್ಮಿಣಿ ವಸಂತ್ (Rukmini Vasanth) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಸುಶೀಲಮ್ಮನ ಅದ್ಭುತ ಸಂಗೀತ ಪಯಣದ ಸಿನಿಮಾ
ದಕ್ಷಿಣ ಭಾರತದ ಸಿನಿರಂಗದಲ್ಲಿ ದಶಕಗಳ ಕಾಲ ತಮ್ಮ ಮಧುರ ಕಂಠದಿಂದ ಪ್ರೇಕ್ಷಕರ ಮನಗೆದ್ದಿರುವ ಪಿ. ಸುಶೀಲಾ ಅವರು ಭಾರತೀಯ ಚಿತ್ರರಂಗದ ಗೌರವಾನ್ವಿತ ಗಾಯಕರಲ್ಲಿ ಒಬ್ಬರು. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಹಾಡಿರುವ ಗೀತೆಗಳು ಇಂದಿಗೂ ಅಮರ. ಅವರ ವೃತ್ತಿಜೀವನದ ಏಳುಬೀಳು ಹಾಗೂ ಸಂಗೀತ ಕ್ಷೇತ್ರದ ಸಾಧನೆಯ ಕಥೆಗಳು ಈ ಬಯೋಪಿಕ್ನ ಕಥಾಹಂದರವಾಗಲಿವೆ.
ನಿರ್ಮಾಣದ ಹೊಣೆ ಎ.ಆರ್. ರೆಹಮಾನ್ (AR Rahman) ಹೆಗಲಿಗೆ?
ಈ ಪ್ರಾಜೆಕ್ಟ್ಗೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲಕಾರಿ ಸುದ್ದಿ ಹರಿದಾಡುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಪಿ. ಸುಶೀಲಾ ಅವರ ಬಯೋಪಿಕ್ ನಿರ್ಮಾಣಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಸುಶೀಲಾ ಅವರ ಸಂಗೀತ ಸಾಧನೆಯನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ಪರಿಚಯಿಸಲು ರೆಹಮಾನ್ ಕೈಜೋಡಿಸಲಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿಲ್ಲ.
P. Susheela Biopic: ‘ಸುಶೀಲಮ್ಮ’ ನ ಪಾತ್ರಕ್ಕೆ ನಟಿ ರುಕ್ಮಿಣಿ ವಸಂತ್ ಆಯ್ಕೆ?
ಈ ಬಯೋಪಿಕ್ನಲ್ಲಿ ಪಿ. ಸುಶೀಲಾ ಅವರ ಪಾತ್ರಕ್ಕಾಗಿ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಗಮನ ಸೆಳೆದಿರುವ ರುಕ್ಮಿಣಿ, ತಮ್ಮ ಸಹಜ ಅಭಿನಯದಿಂದ ವಿಶೇಷ ಅಭಿಮಾನಿ ಬಳಗ ಹೊಂದಿದ್ದಾರೆ. ಸುಶೀಲಮ್ಮ ಅವರ ಸರಳ ವ್ಯಕ್ತಿತ್ವಕ್ಕೆ ರುಕ್ಮಿಣಿ ಸೂಕ್ತ ಆಯ್ಕೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.




