☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Drishyam 3 Hindi Review: “ಅಕ್ಟೋಬರ್ 2… ಏನಾಯ್ತು?” 3ನೇ ದೃಶ್ಯಕ್ಕೆ ಯಾರು ಹೊಣೆ?

Ajay Devgn, Jaideep Ahlawat, Prakash Raj movie Drishyam 3 Hindi Review in Kannada

Drishyam 3 Hindi Review: ‘ದೃಶ್ಯಂ 3’ ಭಾರತೀಯ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಾಕಿದ ಸಿನಿಮಾ. ಮೋಹನ್‌ಲಾಲ್ ಹಾಗೂ ನಿರ್ದೇಶಕ ಜೀತು ಜೋಸೆಫ್ ಜೋಡಿ ಸಿನಿಮಾ ಪ್ರಿಯರಿಗೆ ಥಿಯೇಟರ್‌ಗಳಲ್ಲಿ ಥ್ರಿಲ್ ಕೊಟ್ಟಿದ್ದರು. ಮೊದಲ ಎರಡು ಪಾರ್ಟ್‌ಗಳು ಕನ್ನಡವೂ ಸೇರಿದಂತೆ ಬೇರೆ ಭಾಷೆಗಳಲ್ಲಿ ರಿಮೇಕ್ ಆಗಿತ್ತು. ಆದರೆ, ‘ದೃಶ್ಯಂ 3’ ಕೊಂಚ ವ್ಯತಿರಿಕ್ತವಾದ ಫಲಿತಾಂಶ ಕೊಟ್ಟಿದೆ.

‘ದೃಶ್ಯಂ 3’ (Drishyam 3) ಮಲಯಾಳಂನಲ್ಲಿ ತೆರೆಕಂಡಾಗ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೀಗ ಇದೇ ಸಿನಿಮಾ ಹಿಂದಿಗೆ ರಿಮೇಕ್ ಆಗಿ ರಿಲೀಸ್ ಆಗಿದೆ. ಮೋಹನ್‌ಲಾಲ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. ಮೂಲ ಕಥೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ನಿರ್ಮಾಣ ಮಾಡಲಾಗಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಇಂಟರ್‌ನೆಟ್‌ನಲ್ಲಿ ಮೋಹನ್‌ಲಾಲ್‌ಗಿಂತ ಅಜಯ್ ದೇವಗನ್ ಇಷ್ಟ ಆಗುತ್ತಾರೆಂಬ ಕಮೆಂಟ್‌ಗಳು ಬರುತ್ತಿವೆ. ಹಾಗಿದ್ದರೆ, ‘ದೃಶ್ಯಂ 3’ ಹಿಂದಿ ಅವತರಣಿಕೆ ಹೇಗಿದೆ?

ಅದೇ ಎಳೆ..ಸಿಗೋ ಥ್ರಿಲ್ ಬೇರೆ!

‘ದೃಶ್ಯಂ 3’ ನೋಡಿದ್ಮೇಲೆ ಪ್ರೇಕ್ಷಕರಿಗೆ ಒಂದು ವಿಷಯ ಅಂತೂ ಖಚಿತ ಆಗುತ್ತೆ. ಇದು ಕೇವಲ ಕ್ರೈಂ-ಥ್ರಿಲ್ಲರ್ ಅಷ್ಟೇ ಅಲ್ಲ, ಸ್ಕ್ರೀನ್ ಪ್ಲೇ ಹೇಗೆ ಪ್ರೇಕ್ಷಕರನ್ನೇ ಕಥೆಯೊಳಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡ್ಬಹುದು ಅನ್ನೋದಕ್ಕೆ ಉತ್ತಮ ಉದಾಹರಣೆ. ವಿಜಯ್ ಸಾಲ್ಗಾಂವ್ಕರ್ (ಅಜಯ್ ದೇವಗನ್) ಒಬ್ಬ ಸಾಮಾನ್ಯ ವ್ಯಕ್ತಿ. ವಿದ್ಯಾಭ್ಯಾಸನೂ ಇಲ್ಲ, ದೊಡ್ಡ ಹುದ್ದೆನೂ ಅಲ್ಲ. ತನ್ನ ಕುಟುಂಬದ ಮೇಲೆ ಅಪಾರ ಪ್ರೀತಿ ಇಟ್ಕೊಂಡಿರೋ ವಿಜಯ್ ಬದುಕನ್ನು ಒಂದು ಅನಿರೀಕ್ಷಿತ ಘಟನೆ ಬದಲಾಯಿಸುತ್ತದೆ. ಅಲ್ಲಿಂದ ಶುರುವಾದ ಆಟ ಇನ್ನೂ ಮುಂದುವರೆಯುತ್ತಿದೆ.

ವಿಜಯ್ ತನ್ನ ಕುಟುಂಬವನ್ನು ಕಾಪಾಡಲು ಕಥೆ ಹೆಣೆಯುತ್ತಾನೆ. ಇದೂವರೆಗೂ ಬಂದಿರೋ ಮೂರೂ ಅವತರಣಿಕೆಯಲೂ ಇದೇ ಎಳೆಯ ಮುಂದುವರೆದ ಭಾಗವಿದೆ. ಆದರೆ, ಪೊಲೀಸರ ನಡೆಯನ್ನು ವಿಜಯ್ ಪ್ರತಿಬಾರಿ ಹೇಗೆ ವಿಫಲಗೊಳಿಸುತ್ತಾನೆ ಅನ್ನೋದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

‘ದೃಶ್ಯಂ 3’ನಲ್ಲೂ ಪ್ರೇಕ್ಷಕರಿಗೆ ಗೊತ್ತಿರುವ ಸತ್ಯವನ್ನೇ ಪೊಲೀಸರು ಹುಡುಕುತ್ತಾ ಹೋಗುತ್ತಾರೆ. ಆದರೆ ವಿಜಯ್ ಅದೇ ಸತ್ಯವನ್ನು ಮುಚ್ಚಿಡಲು ಸೃಷ್ಟಿಸಿರುವ ಸನ್ನಿವೇಶಗಳು ಅವರ ಮುಂದೆ ಗೋಡೆಯಾಗಿ ನಿಲ್ಲುತ್ತವೆ. ‘ದೃಶ್ಯಂ 3’ನ ರಿಯಲ್ ಥ್ರಿಲ್ ಶುರುವಾಗೋದು ಪೊಲೀಸ್ ಅಧಿಕಾರಿ ಟಬು ಪಾತ್ರ ವಿಜಯ್‌ಗೆ ಕೌಂಟರ್ ಕೊಡೋಕೆ ಶುರು ಮಾಡಿದಾಗ. ಒಂದು ಕಡೆ ಕಾನೂನು ತನ್ನ ಕೆಲಸ ಮಾಡಬೇಕು. ಮತ್ತೊಂದು ಕಡೆ ಒಬ್ಬ ತಂದೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಬೇಕು. ಈ ಎರಡು ವಿಷಯಗಳ ನಡುವಿನ ಸಂಘರ್ಷವೇ ಸಿನಿಮಾದ ಬೆನ್ನೆಲುಬು.

ಮೋಹನ್‌ಲಾಲ್-ಅಜಯ್ ದೇವಗನ್ ಯಾರು ಉತ್ತಮ?

‘ದೃಶ್ಯಂ’ ಎರಡೂ ಅವರಣಿಕೆಯಲ್ಲೂ ಮೋಹನ್‌ಲಾಲ್‌ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆಗಲೂ ಮೋಹನ್‌ಲಾಲ್ ಹಾಗೂ ಅಜಯ್ ದೇವಗನ್ ಸಿನಿಮಾಗಳಿಗೆ ಹೋಲಿಕೆ ಮಾಡುತ್ತಿದ್ದರು. ಆದರೆ, ಈ ಬಾರಿ ‘ದೃಶ್ಯಂ 3’ ಮಲಯಾಳಂ ಅವತರಣಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಅಜಯ್ ದೇವನ್‌ಗೆ ಬಹುಪರಾಕ್ ಹೇಳುತ್ತಿದ್ದಾರೆ. ವಿಜಯ್ ಪಾತ್ರದಲ್ಲಿ ಅಜಯ್ ದೇವಗನ ಗೆದ್ದಿದ್ದಾರೆ. ಅವರ ಮೌನ, ಭಾವನೆ ಹಾಗೂ ಗೊಂದಲಗಳನ್ನು ವ್ಯಕ್ತಪಡಿಸುವ ಸನ್ನಿವೇಶಗಳು ಮನಸ್ಸಿಗೆ ತಟ್ಟುತ್ತವೆ. ಹಾಗೇ ಈ ಬಾರಿ ಇನ್ನಿಬ್ಬರು ನಟರು ಬಹಳಷ್ಟು ಇಷ್ಟ ಆಗುತ್ತಾರೆ. ‘ಪಾತಾಳ್ ಲೋಕ್’ ಖ್ಯಾತಿಯ ಜೈದೀಪ್ ಅಹ್ಲಾವತ್ ಹಾಗೂ ಪ್ರಕಾಶ್ ರಾಜ್ ತನ್ನ ಅಭಿನಯದ ಮೂಲಕ ಚಿಂದಿ ಉಡಾಯಿಸಿದ್ದಾರೆ.

ಆದರೆ ಚಿತ್ರದ ಕ್ಲೈಮ್ಯಾಕ್ಸ್?

ಕೊನೆಯ ಹಂತದಲ್ಲಿ ವಿಜಯ್ ಮಾಡಿದ ಮಾಸ್ಟರ್ ಪ್ಲಾನ್ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ಕೊಡುತ್ತದೆ. ಪೊಲೀಸರು ಎಲ್ಲವನ್ನೂ ಕಂಡು ಹಿಡಿದೇ ಬಿಟ್ವಿ ಅಂದುಕೊಳ್ಳುವಾಗಲೇ ವಿಜಯ್ ಈಗಾಗಲೇ ಅವರಿಗಿಂತ ಹಲವು ಹೆಜ್ಜೆ ಮುಂದಿರೋದು ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಹೀಗಾಗಿ ಕ್ಲೈಮ್ಯಾಕ್ಸ್ ಅದ್ಭುತ ಎನಿಸುತ್ತೆ.

ಕೊನೆಯಲ್ಲೊಂದು ಪ್ರಶ್ನೆ?

ಈ ಸಿನಿಮಾ ಕೊನೆಯಲ್ಲಿ “ಕಾನೂನು ಮುಖ್ಯವೇ? ಅಥವಾ ತನ್ನ ಕುಟುಂಬವನ್ನು ಉಳಿಸುವುದು ಮುಖ್ಯವೇ?” ಅನ್ನೋ ಪ್ರಶ್ನೆ ಹಾಕುತ್ತೆ. ಇದಕ್ಕೆ ಚಿತ್ರತಂಡ ನೇರ ಉತ್ತರ ಈ ಬಾರಿನೂ ಕೊಟ್ಟಿಲ್ಲ. ಅದೇ ‘ದೃಶ್ಯಂ 3’ನ ವಿಶೇಷತೆ. ಇನ್ನು ಸಿನಿಮಾವನ್ನು ಬೇರೆ ಬೇರೆ ವಿಭಾಗಗಳಿಗೆ ಸ್ಟಾರ್‌ಗಳನ್ನು ಕೊಟ್ಟು ವಿವರಿಸೋದಾರೇ.. ಹೀಗಿದೆ ಸ್ಟಾರ್‌ಗಳು.

ಕಥೆ: ⭐⭐⭐⭐
ಚಿತ್ರಕಥೆ: ⭐⭐⭐⭐
ನಿರ್ದೇಶನ: ⭐⭐⭐⭐½
ನಟನೆ: ⭐⭐⭐⭐
ಕ್ಲೈಮ್ಯಾಕ್ಸ್: ⭐⭐⭐⭐⭐
ಭಾವನೆಗಳು: ⭐⭐⭐⭐

ಕೊನೆಯಲ್ಲಿ ‘ದೃಶ್ಯಂ 3’ ಒಂದು ಸಿನಿಮಾ ಅಲ್ಲ… ನಮ್ಮ ಮುಂದೆ ನಡೆದ ಒಂದು ಕ್ಲಾಸ್ ಥ್ರಿಲ್ಲರ್ ಎನಿಸದೆ ಇರದು. ಇದು ಮಲಯಾಳಂ ವರ್ಷನ್‌ಗಿಂತ ಥ್ರಿಲ್ಲಿಂಗ್ ಅಂತ ಅನಿಸದೆ ಇರಲ್ಲ. ಸಿನಿಮಾ ಮುಗಿದ ಮೇಲೂ ಮನಸ್ಸಿನಲ್ಲಿ ಮೂಡೋದು ಒಂದೇ ಒಂದು ಪ್ರಶ್ನೆ. “October 2… ಏನಾಯ್ತು?”. ಅದನ್ನು ತಿಳಿದ ಮೇಲೂ ‘ದೃಶ್ಯಂ 3’ ಅನ್ನು ಮತ್ತೆ ನೋಡ್ಬೇಕು ಅನಿಸೋದೇ ಈ ಸಿನಿಮಾದ ಗೆಲುವು.