ಮೈಸೂರು : ಚುನಾವಣಾ ಆಯುಕ್ತರ ಮುಂದೆ ಕಾನೂನು ಉಲ್ಲಂಘಿಸಿಲ್ಲ, ತಪ್ಪು ಮಾಡಿದ್ದರೆ ನನ್ನ ಮೇಲೆ ಕೇಸ್ ಹಾಕಲಿ ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಎಸ್ಐಆರ್ ಗೆ ಸಂಬಂಧಿಸಿದ ಫಾರ್ಮ್-7 ವಿವಾದದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿಚಾರವಾಗಿ ಬಿಜೆಪಿ ನಾಯಕರು ಟೀಕಿಸಿದ್ದ ಬೆನ್ನಲ್ಲೇ ಮೈಸೂರಿನಲ್ಲಿ ಮಾತನಾಡಿದ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.
ಯಾವುದೇ ಪ್ರತ್ಯೇಕ ತನಿಖೆ ನಡೆಸಲ್ಲ !
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಫಾರ್ಮ್-7 ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸದ್ಯಕ್ಕೆ ಪ್ರತ್ಯೇಕ ತನಿಖೆ ನಡೆಸುತ್ತಿಲ್ಲ, ಚುನಾವಣಾ ಆಯೋಗವೇ ತನಿಖೆ ಕೈಗೊಂಡಿದೆ ಎಂದರು. ಫಾರ್ಮ್ ಗಳು ಎಲ್ಲಿಂದ ಮುದ್ರಣವಾದವು, ಹೇಗೆ ಬಿಜೆಪಿ ಬಳಿಗೆ ಹೋದವು ಎಂಬ ಸತ್ಯ ಕೇಂದ್ರ ಚುನಾವಣಾ ಆಯೋಗಕ್ಕೆ ತಿಳಿದಿದೆ, ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನೋಡಿ ನಂತರ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದರು. ತಾವು ಆಯುಕ್ತರ ಎದುರು ಧರಣಿ ನಡೆಸಿಲ್ಲ, ಯಾವುದೇ ಕಾನೂನು ಮೀರಿಲ್ಲ, ಎದುರಾಗಿರುವ ಸಮಸ್ಯೆಯನ್ನು ಕಾನೂನುಬದ್ಧವಾಗಿ ಗಮನಕ್ಕೆ ತಂದಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಚುನಾವಣಾ ಆಯುಕ್ತರು ಚರ್ಚೆಗೆ ಸಮಯ ಕೇಳಿದಾಗ ಅದಕ್ಕೆ ಏಕೆ ಸಮಯ ಬೇಕು ಎಂದು ಅಲ್ಲೇ ಕುಳಿತುಕೊಂಡೆವು, ಕೊನೆಗೆ ಪರಿಹಾರ ಸಿಕ್ಕಿತು, ಇದನ್ನು ಧರಣಿ ಎಂದು ಹೇಗೆ ಕರೆಯಲು ಸಾಧ್ಯ, ಜನಪ್ರತಿನಿಧಿಯಾಗಿ ಸಮಸ್ಯೆ ಹೇಳಿದ್ದೇನೆ ಎಂದರು. ಶಾಂತಿಗೆ ಭಂಗ ಬಂದಿದ್ದರೆ, ಕಾನೂನು ಉಲ್ಲಂಘನೆಯಾಗಿದ್ದರೆ ತಮ್ಮ ಮೇಲೂ ಪ್ರಕರಣ ಹಾಕಲಿ, ಕಾನೂನು ಎಲ್ಲರಿಗೂ ಒಂದೇ, ಬಿಜೆಪಿಯವರು ಮೇಲಿನವರ ಒತ್ತಡಕ್ಕೆ ಹೇಳಿಕೆ ನೀಡುತ್ತಿದ್ದಾರೆ, ರಾಜಕೀಯಕ್ಕಾಗಿ ಮಾತನಾಡುವುದು ಅವರಿಗೆ ಅನಿವಾರ್ಯ ಎಂದು ಹೇಳಿದರು. ನೈಸ್ ಯೋಜನೆಯ ಅಕ್ರಮದ ಆರೋಪದ ಬಗ್ಗೆ ಕೇಳಿದಾಗ, ಯಾರು ಏನೇ ಹೇಳಿದರೂ ಈ ದೇಶದಲ್ಲಿ ಕಾನೂನು ಇದೆ, ತಪ್ಪು ಸರಿ ಎಂದು ಕಾನೂನು ನಿರ್ಧರಿಸುತ್ತದೆ, ಎಲ್ಲದಕ್ಕೂ ಪ್ರತಿಕ್ರಿಯಿಸಿ ವಿಷಯವನ್ನು ಬೇರೆಡೆಗೆ ತಿರುಗಿಸುವುದಿಲ್ಲ, ಕಾನೂನೇ ಉತ್ತರ ನೀಡುತ್ತದೆ, ಈಗ ಆ ಚರ್ಚೆ ಬೇಡ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಕ್ಕೆ ನಿರ್ಲಕ್ಷ್ಯ ತೋರಿದರು.
ಇದನ್ನೂ ಓದಿ: 1.5 ಕೋಟಿ ಲಂಚದ ರಹಸ್ಯ ಬಯಲು ಮಾಡ್ತೀನಿ : ನೈಸ್ ಅಕ್ರಮದ ವಿರುದ್ಧ ಹೆಚ್‌ಡಿಕೆ ಸಮರ
ಫಾರ್ಮ್-7 ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಬಳಸುವ ಅತ್ಯಂತ ಸೂಕ್ಷ್ಮ ಅರ್ಜಿಯಾಗಿದ್ದು, ಇದರ ಸಾಮೂಹಿಕ ಮುದ್ರಣ ಮತ್ತು ಒಂದು ಪಕ್ಷದ ಕೈಗೆ ಸಿಕ್ಕಿದೆ ಎಂಬ ಆರೋಪ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೇ ದೊಡ್ಡ ಹೊಡೆತ. ಸಾವಿರಾರು ಅರ್ಜಿಗಳು ಯಾರ ಅನುಮತಿ ಇಲ್ಲದೆ ಮುದ್ರಣವಾದವು, ಯಾರು ವಿತರಿಸಿದರು, ಯಾವ ಉದ್ದೇಶಕ್ಕೆ ಬಳಸಲಾಯಿತು ಎಂಬುದು ತನಿಖೆಯಿಂದ ಮಾತ್ರ ಹೊರಬರಬೇಕು. ರಾಜ್ಯ ಸರ್ಕಾರ ತಾನೇ ತನಿಖೆ ನಡೆಸದೆ ಚುನಾವಣಾ ಆಯೋಗದ ತನಿಖೆಗೆ ಬಿಟ್ಟಿರುವುದು ಸಾಂವಿಧಾನಿಕ ಸಂಸ್ಥೆಯ ಘನತೆಗೆ ಗೌರವ ಕೊಟ್ಟಂತಿದೆ, ಆದರೆ ಕೇಂದ್ರ ಚುನಾವಣಾ ಆಯೋಗದ ಕ್ರಮ ಎಷ್ಟು ಕಠಿಣ ಮತ್ತು ಪಾರದರ್ಶಕವಾಗಿರುತ್ತದೆ ಎಂಬುದು ಮುಂದಿನ ಕುತೂಹಲ.




