☔ Weather
Bengaluru: ☁️ 21°C | AQI 59
Mysore: ☁️ 21°C | AQI 63
Mangalore: ☁️ 26°C | AQI 69
Bengaluru: ☁️ 21°C | AQI 59

HD KUMARASWAMY: 1.5 ಕೋಟಿ ಲಂಚದ ರಹಸ್ಯ ಬಯಲು ಮಾಡ್ತೀನಿ : ನೈಸ್ ಅಕ್ರಮದ ವಿರುದ್ಧ ಹೆಚ್‌ಡಿಕೆ ಸಮರ

ಬೆಂಗಳೂರು: ಹಣಕ್ಕಾಗಿ ವಿಧಾನಸೌಧವನ್ನೂ ಮಾರಾಟ ಮಾಡಲು ಹಿಂಜರಿಯದ ಸರ್ಕಾರ ಇದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನೈಸ್ ಸಂತ್ರಸ್ತ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಂಗಳೂರು-ಮೈಸೂರು ಕಾರಿಡಾರ್ ಹೆಸರಿನಲ್ಲಿ 11 ಸಾವಿರ ಎಕರೆ ಭೂಮಿಯಲ್ಲಿ ಬೃಹತ್ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು. ರೈತರಿಂದ ಐದು ಲಕ್ಷಕ್ಕೆ ಪಡೆದ ಎಕರೆ ಜಮೀನನ್ನು ನೂರು ಕೋಟಿಗೆ ಮಾರುವ ಸಂಚು ನಡೆದಿದೆ, ಇದು ಜನವಿರೋಧಿ ಸರ್ಕಾರ ಎಂದು ಟೀಕಿಸಿದರು. ತಾವು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿಲ್ಲ, ಜನರ ಬದುಕು ಸುಧಾರಣೆಯೇ ಮುಖ್ಯ ಉದ್ದೇಶ ಎಂದು ಸ್ಪಷ್ಟಪಡಿಸಿದರು. ಮಹೇಶ್ ರೆಡ್ಡಿ ಜೊತೆ ಭೂಮಿ ಖರೀದಿ ಕುತಂತ್ರ ನಡೆಯುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ರೈತರ ಭೂಮಿ ವಾಪಸ್ ನೀಡಿ – ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ

ಮೂವತ್ತು ವರ್ಷದಿಂದ ನೈಸ್ ಯೋಜನೆ ರಾಜ್ಯಕ್ಕೆ ವಂಚನೆ ಮಾಡುತ್ತಿದೆ, ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾಗಿದೆ, ಈಗ ಸರ್ಕಾರವೇ ಮೂಲ ದಾಖಲೆಗಳು ನಾಪತ್ತೆ ಎಂದು ಹೇಳುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಕೆಐಎಡಿಬಿ ಹೆಸರಿನಲ್ಲಿ ಗಾಂಧಿನಗರದಲ್ಲಿ ಮತ್ತೊಂದು ಕಚೇರಿ ತೆರೆದು ಅಕ್ರಮ ನಡೆದಿದೆ, ಪೋಸ್ಟಿಂಗ್ ಗೆ ಒಂದೂವರೆ ಕೋಟಿ ವಸೂಲಿ ಮಾಡಿದ ಸಚಿವರ ಹೆಸರನ್ನು ನಾಳೆ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು. ಎಲ್ಲರನ್ನೂ ಹಣದಿಂದ ಕೊಳ್ಳಲು ಸಾಧ್ಯವಿಲ್ಲ ಎಂದ ಅವರು ಮಹೇಶ್ ರೆಡ್ಡಿ ಯಾರು ಎಂದು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಪ್ರಶ್ನಿಸಿದರು.

ಸಿಂಗಾಪುರದಲ್ಲಿ ಖೇಣಿ ಆಮಿಷ !

ಇನ್ನು ಸಿಂಗಾಪುರದಲ್ಲಿ ಖೇಣಿ ತಮ್ಮ ಬಳಿ ಸಂಧಾನಕ್ಕೆ ಬಂದು ಹಣದ ಆಮಿಷ ಒಡ್ಡಿದ್ದರು, ತಾವು ತಿರಸ್ಕರಿಸಿದ್ದಾಗಿ ಹೇಳಿದರು. ತಂದೆ ದೇವೇಗೌಡರು ಭ್ರಷ್ಟ ಹೊಂದಾಣಿಕೆಗಾಗಿ ತಮ್ಮನ್ನು ರಾಜಕೀಯಕ್ಕೆ ತರಲಿಲ್ಲ ಎಂದು ಹೇಳಿದರು. ಜಿ.ಎಚ್. ಪಟೇಲ್ ಅವಧಿಯಲ್ಲಿ ಕಡತಕ್ಕೆ ಮೊದಲು ಸಹಿ ಹಾಕಿದ್ದು ಸಿದ್ದರಾಮಯ್ಯ, ದೇವೇಗೌಡರು ಭೂಮಿಗೆ ಸಹಿ ಹಾಕಿರಲಿಲ್ಲ, ಆದರೂ ನೈಸ್ ಅವರ ವಿರುದ್ಧ ತಡೆಯಾಜ್ಞೆ ತಂದು ಎರಡು ಕೋಟಿ ದಂಡ ಹಾಕಿಸಿತ್ತು, ನ್ಯಾಯಾಲಯವೇ ದೊಡ್ಡ ಹಗರಣ ಎಂದ ಮೇಲೆ ಹೋರಾಟಕ್ಕಿಳಿದಿದ್ದೇನೆ, ದೇವೇಗೌಡರಿಗೆ ವಯಸ್ಸಾಗಿರುವುದರಿಂದ ಅವರ ಪರವಾಗಿ ನಿಂತಿದ್ದೇನೆ ಎಂದರು.

ನೈಸ್ ಯೋಜನೆ ಮೂಲತಃ ಮೂಲಸೌಕರ್ಯ ಅಭಿವೃದ್ಧಿ ಉದ್ದೇಶದಿಂದ ಆರಂಭವಾದರೂ ಭೂ ಸ್ವಾಧೀನದ ಹೆಸರಿನಲ್ಲಿ ವಿವಾದದ ಕೇಂದ್ರವಾಗಿದೆ. ಮೂವತ್ತು ವರ್ಷವಾದರೂ ಪೂರ್ಣಗೊಳ್ಳದ ಯೋಜನೆ ಉದ್ದೇಶದ ಬಗ್ಗೆಯೇ ಅನುಮಾನ ಮೂಡಿಸುತ್ತದೆ. ರೈತರಿಂದ ಕಡಿಮೆ ಬೆಲೆಗೆ ಪಡೆದು ನೂರಾರು ಪಟ್ಟು ಹೆಚ್ಚಿನ ಬೆಲೆಗೆ ಮಾರುವ ಆರೋಪ ಅತ್ಯಂತ ಗಂಭೀರ ವಿಚಾರವಾಗಿದೆ. ಕೆಐಎಡಿಬಿ ಅಕ್ರಮ, ದಾಖಲೆ ನಾಪತ್ತೆ, ವರ್ಗಾವಣೆ ದಂಧೆಯ ಆರೋಪಗಳು ಆಡಳಿತದ ಪಾರದರ್ಶಕತೆಗೆ ಗಂಭೀರ ಸವಾಲು ಎಂದೆನ್ನಬಹುದು. ಕುಮಾರಸ್ವಾಮಿ ಅವರ ಸಿಂಗಾಪುರ ಪ್ರಸಂಗ ಮತ್ತು ಒಂದೂವರೆ ಕೋಟಿ ಲಂಚದ ಆರೋಪ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿ ಇಮೇಜ್ ಗೆ ಹೊಡೆತ ನೀಡುವ ಅಸ್ತ್ರವಾಗುವ ಸಾಧ್ಯತೆ ಇದೆ.