☔ Weather
Bengaluru: ☁️ 21°C | AQI 53
Mysore: ☁️ 21°C | AQI 55
Mangalore: ☁️ 25°C | AQI 87
Bengaluru: ☁️ 21°C | AQI 53

CEC : ಎಸ್ .ಐ.ಆರ್ ಅಕ್ರಮ ಆರೋಪ – ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Image of Protest against CEC in Delhi

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಮತದಾರರ ಪಟ್ಟಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಮತ್ತು ಹಲವು ರಾಜಕೀಯ ಪಕ್ಷಗಳು ಜಂಟಿಯಾಗಿ ಜಂತರ್ ಮಂತರ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದವು. ಆದರೆ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿ ನಗರದಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಜಂತರ್ ಮಂತರ್ ತಲುಪುವ ಎಲ್ಲಾ ಮಾರ್ಗಗಳಲ್ಲಿ ತಡೆಬೇಲಿ ಹಾಕಿ ಬಂದೋಬಸ್ತ್ ಮಾಡಲಾಗಿತ್ತು. ದೆಹಲಿ ಮತ್ತು ಸುತ್ತಮುತ್ತ ಬಿಎನ್ಎಸ್ಎಸ್ ಕಾಯ್ದೆಯ 163ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ : ಗಣಪತಿ ಆಯ್ತು..ಸಿಇಸಿ ಜ್ಞಾನೇಶ್ ಕುಮಾರ್ ವಿಸರ್ಜನೆ ಬಾಕಿ ಇದೆ : ನಟ ಪ್ರಕಾಶ್ ರಾಜ್

ಈ ಪ್ರತಿಭಟನಾ ಸ್ಥಳವನ್ನು ಪೊಲೀಸರು ಸಂಪೂರ್ಣ ತಮ್ಮ ವಶಕ್ಕೆ ಪಡೆದಿದ್ದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಬೇರೆ ಬೇರೆ ರಸ್ತೆಗಳಲ್ಲಿ ಮತ್ತು ಮೆಟ್ರೋ ನಿಲ್ದಾಣಗಳ ಬಳಿ ಸಣ್ಣ ಗುಂಪುಗಳಲ್ಲಿ ಚದುರಿ ಹೋಗಿ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ದೊಡ್ಡ ಪ್ರಮಾಣದಲ್ಲಿ ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದರು. ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕಿ ಆತಿಶಿ, ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ, ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಸೇರಿದಂತೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ನಾಯಕರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದು ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಲಾಯಿತು. ಪರಿಸ್ಥಿತಿ ನಿಯಂತ್ರಿಸಲು ಮಧ್ಯ ದೆಹಲಿಯ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಜನಪಥ್, ಪಟೇಲ್ ಚೌಕ್ ಸೇರಿದಂತೆ 12 ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇದರಿಂದ ಕಚೇರಿ ಮತ್ತು ಇತರ ಕೆಲಸಗಳಿಗೆ ಹೋಗುತ್ತಿದ್ದ ಸಾರ್ವಜನಿಕರು ಪರದಾಡುವಂತಾಯಿತು. ರಾತ್ರಿ 8.20ರ ಸುಮಾರಿಗೆ ಮೆಟ್ರೋ ಸೇವೆ ಸಹಜ ಸ್ಥಿತಿಗೆ ಮರಳಿತು. ಸದ್ಯ ಗಡಿ ಭಾಗಗಳಲ್ಲಿ ಬಿಗಿ ಭದ್ರತೆ ಮುಂದುವರಿದಿದೆ.

ದೆಹಲಿಯಲ್ಲಿ ಮತ್ತೆ ಮತ್ತೆ ಪ್ರತಿಭಟನೆ !

ಈ ಬೆಳವಣಿಗೆ ಚುನಾವಣಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಸಂಬಂಧಿಸಿದ ಗಂಭೀರ ವಿಚಾರವನ್ನು ಮುನ್ನೆಲೆಗೆ ತಂದಿದೆ. ಮುಖ್ಯ ಚುನಾವಣಾ ಆಯುಕ್ತರಂತಹ ಸಾಂವಿಧಾನಿಕ ಹುದ್ದೆಯ ವಿರುದ್ಧ ರಾಜೀನಾಮೆ ಕೂಗು ಕೇಳಿ ಬರುವುದು ಸಾಮಾನ್ಯವಲ್ಲ. ವಿದ್ಯಾರ್ಥಿ ಸಂಘಟನೆಗಳು ಮುಂಚೂಣಿಗೆ ಬಂದಿರುವುದು ಈ ವಿಷಯ ಯುವ ಸಮುದಾಯದಲ್ಲೂ ಚರ್ಚೆಗೆ ಕಾರಣವಾಗಿದೆ ಎಂಬುದನ್ನು ತೋರಿಸುತ್ತದೆ. ಮತ್ತೊಂದೆಡೆ ಅನುಮತಿ ಇಲ್ಲದ ಪ್ರತಿಭಟನೆಯನ್ನು ತಡೆಯಲು ಬಿಎನ್ಎಸ್ಎಸ್ 163, ಇಂಟರ್ನೆಟ್ ಕಡಿತ ಮತ್ತು ಮೆಟ್ರೋ ಬಂದ್ ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವುದು ಆಡಳಿತದ ಆತಂಕವನ್ನು ಸೂಚಿಸುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯವಿದ್ದರೂ, ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ವಿರೋಧ ಪಕ್ಷದ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯುವ ವಿಧಾನ ಪ್ರಜಾಪ್ರಭುತ್ವದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ.