ಬೆಂಗಳೂರು: ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಅಧಿಕಾರ ಯಾರ ತಂದೆಯ ಆಸ್ತಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಡಿಜಿಪಿ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣಾ ಆಯೋಗದ ನಿಯಮದಂತೆ ಫಾರ್ಮ್-7 ಸಲ್ಲಿಸಿದ ನಮ್ಮ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಮೂಲಕ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮತ್ತು ಸಚಿವರು ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಳಿಕವೇ ಪೊಲೀಸರ ಮೇಲೆ ಒತ್ತಡ ತಂದು ಈ ಎಫ್‌ಐಆರ್ ಹಾಕಿಸಲಾಗಿದೆ ಎಂದು ಆರೋಪಿಸಿದ ಅವರು, ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಎಫ್.ಐ.ಆರ್ ಜಟಾಪಟಿ !
ಫಾರ್ಮ್-7 ಎಂಬುದು ಚುನಾವಣಾ ಆಯೋಗ ನಾಗರಿಕರಿಗೆ ನೀಡಿರುವ ಕಾನೂನುಬದ್ಧ ಹಕ್ಕು. ಮತದಾರರ ಪಟ್ಟಿಯಲ್ಲಿ ಅನರ್ಹ ಅಥವಾ ಅಕ್ರಮ ಹೆಸರುಗಳು ಇದ್ದರೆ ಯಾವುದೇ ವ್ಯಕ್ತಿ ಆಕ್ಷೇಪಣೆ ಸಲ್ಲಿಸಬಹುದು. ಆ ಅರ್ಜಿಯನ್ನು ಪರಿಶೀಲಿಸಿ ಅರ್ಹತೆ ಇದ್ದರೆ ಆಯೋಗ ಕ್ರಮ ಜರುಗಿಸುತ್ತದೆ, ಇಲ್ಲದಿದ್ದರೆ ತಿರಸ್ಕರಿಸುತ್ತದೆ, ಇದು ಚುನಾವಣಾ ವ್ಯವಸ್ಥೆಯ ಸಹಜ ಪ್ರಕ್ರಿಯೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸರ್ಕಾರ ಪೊಲೀಸ್ ಇಲಾಖೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ನಮ್ಮ ಕಾರ್ಯಕರ್ತರ ರಕ್ಷಣೆ ನಮ್ಮ ಹೊಣೆ, ಸುಮ್ಮನಿರುವ ಪ್ರಶ್ನೆಯೇ ಇಲ್ಲ, ಪ್ರಕರಣ ಹಿಂಪಡೆಯದಿದ್ದರೆ ಠಾಣೆಗಳ ಎದುರು ಧರಣಿ ಸೇರಿದಂತೆ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಎಸ್‌ಐಟಿ ರಚನೆ ಕುರಿತು ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರದಲ್ಲಿದ್ದೇವೆ ಎಂದು ಪೊಲೀಸ್ ವ್ಯವಸ್ಥೆಯನ್ನು ಇಷ್ಟಬಂದಂತೆ ಬಳಸಲು ಆಗುವುದಿಲ್ಲ, ಮುಖ್ಯಮಂತ್ರಿಗಳು ಗೂಂಡಾಗಿರಿ, ದಾದಾಗಿರಿ ಮಾಡಲು ಹೊರಟಿದ್ದಾರೆ, ತಾವು ಕೊತ್ವಾಲ್ ಶಿಷ್ಯ ಎಂಬುದನ್ನು ಮತ್ತೆ ತೋರಿಸಲು ಹೊರಟಿದ್ದಾರೆ, ಆದರೆ ಅಧಿಕಾರ ಶಾಶ್ವತವಲ್ಲ, ದುರುಪಯೋಗ ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲೇ ಫಾರ್ಮ್-7 ಪ್ರಿಂಟ್: ತನ್ವೀರ್ ಸೇಠ್ ಶಾಕಿಂಗ್ ಆರೋಪ
ಫಾರ್ಮ್-7 ಎಂಬುದು ಭಾರತ ಚುನಾವಣಾ ಆಯೋಗ ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಪ್ರಜಾಸತ್ತಾತ್ಮಕ ಅಸ್ತ್ರ. ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರು, ಒಂದೇ ವ್ಯಕ್ತಿಯ ಎರಡು ಕಡೆ ನೋಂದಣಿ, ಮೃತಪಟ್ಟವರ ಹೆಸರು ಮುಂದುವರಿಕೆ, ಅಕ್ರಮ ವಲಸಿಗರ ಸೇರ್ಪಡೆಯಂತಹ ಗಂಭೀರ ಲೋಪಗಳಿದ್ದರೆ ಅದನ್ನು ಪ್ರಶ್ನಿಸುವುದು ಪ್ರತಿಯೊಬ್ಬರ ಕರ್ತವ್ಯ. ಆಯೋಗ ವಿಚಾರಣೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ. ಆದರೆ ಆಕ್ಷೇಪಣೆ ಸಲ್ಲಿಸಿದ ಮಾತ್ರಕ್ಕೆ ಬಿಎನ್ಎಸ್ ನಂತಹ ಹೊಸ ಕ್ರಿಮಿನಲ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವುದು ಚುನಾವಣಾ ಆಯೋಗದ ಅಧಿಕಾರವನ್ನು ಪೊಲೀಸ್ ಠಾಣೆಗೆ ವರ್ಗಾಯಿಸಿದಂತೆ ಆಗುತ್ತದೆ. ಇದರಿಂದ ಮುಂದೆ ಯಾವ ನಾಗರಿಕನೂ ಧೈರ್ಯವಾಗಿ ಮತದಾರರ ಪಟ್ಟಿಯ ತಪ್ಪುಗಳನ್ನು ಎತ್ತಿ ತೋರಿಸಲು ಮುಂದೆ ಬರುವುದಿಲ್ಲ.
ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ವಿಷಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ವಿರೋಧ ಪಕ್ಷದ ಮೇಲೆ ಮತ ಕಳ್ಳತನದ ಆರೋಪ ಮಾಡಿದರೆ, ವಿರೋಧ ಪಕ್ಷ ಅಕ್ರಮ ಮತ ಸೇರ್ಪಡೆ ಆರೋಪ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪೊಲೀಸರನ್ನು ಮಧ್ಯಕ್ಕೆ ತಂದು ಪ್ರಕರಣ ದಾಖಲಿಸುವುದು ಪೊಲೀಸ್ ಇಲಾಖೆಯ ತಟಸ್ಥತೆಗೆ ಧಕ್ಕೆ ತರುತ್ತದೆ. ಸರ್ಕಾರದ ಒತ್ತಡಕ್ಕೆ ಮಣಿದು ಎಫ್‌ಐಆರ್ ಹಾಕಿದರೆ ಪೊಲೀಸರ ಮೇಲಿನ ಜನರ ನಂಬಿಕೆ ಕಡಿಮೆಯಾಗುತ್ತದೆ. ಎಸ್‌ಐಟಿ ರಚನೆ ಹೇಳಿಕೆಗಳು ಕೂಡ ರಾಜಕೀಯ ಸೇಡು ತೀರಿಸುವ ಸೂಚನೆ ನೀಡುತ್ತಿವೆ. ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಲು ಫಾರ್ಮ್-6, ಫಾರ್ಮ್-7, ಫಾರ್ಮ್-8 ರಂತಹ ಅವಕಾಶಗಳನ್ನು ಆಯೋಗ ನೀಡಿದೆ. ದುರ್ಬಳಕೆಯಾದರೆ ಆಯೋಗವೇ ದಂಡ ವಿಧಿಸುವ ಅಧಿಕಾರ ಹೊಂದಿದೆ. ಅದನ್ನು ಬಿಟ್ಟು ಕ್ರಿಮಿನಲ್ ಪ್ರಕರಣ ದಾಖಲಿಸುವುದು ಅತಿರೇಕ. ಬಿಜೆಪಿ ನೀಡಿರುವ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ ರಾಜಕೀಯವಾಗಿ ಸಹಜವಾದರೂ, ಇದು ಕೇವಲ ಪಕ್ಷದ ಹೋರಾಟವಾಗಿ ಉಳಿಯದೆ ನಾಗರಿಕ ಹಕ್ಕು ರಕ್ಷಣೆ ಎಂಬ ಅರ್ಥದಲ್ಲಿ ಬಿಜೆಪಿ ಬಿಂಬಿಸುತ್ತಿದೆ.




