☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Insulin resistance: ಕತ್ತಿನ ಮೇಲೆ ಗುಳ್ಳೆಗಳಾಗಿವೆಯೇ? ಹಾಗಿದ್ದರೆ ಜಾಗೃತೆ

Insulin resistance

ಕತ್ತು ಅಥವಾ ಕೊರಳಿನ ಮೇಲೆ ನೋವಿಲ್ಲದ ಗುಳ್ಳೆಗಳು (ನರುಲಿ ಮಾದರಿಯ ಗುಳ್ಳೆಗಳು) ಉಂಟಾಗಿವೆಯೇ? ಇದೇ ರೀತಿಯ ನೋವು ರಹಿತ ಗುಳ್ಳೆಗಳು ಎದೆ ಅಥವಾ ಬೆನ್ನಿನ ಮೇಲೆಯೂ ಇವೆಯೇ? ಕತ್ತಿನ ಭಾಗ ಹಾಗೂ ಹಣೆಯ ಮೇಲೆ ಚರ್ಮದ ಬಣ್ಣ ಕಪ್ಪಾಗುತ್ತಿದೆಯೇ? ಹಾಗಿದ್ದರೆ ಇದು ಸಾಮಾನ್ಯ ಗುಳ್ಳೆಗಳು ಅಥವಾ ದೇಹದ ನೈಸರ್ಗಿಕ ಬದಲಾವಣೆ ಅಲ್ಲ ಬದಲಿಗೆ ನಿಮ್ಮ ದೇಹ ಅಪಾಯದಲ್ಲಿರುವುದರ ಮುನ್ಸೂಚನೆ. ಈಗಲೇ ಈ ಬಗ್ಗೆ ತಿಳಿದುಕೊಳ್ಳಿ, ಮುಂದಾಗಬಹುದಾದ ಅನಾಹುತದಿಂದ ನಿಮ್ಮನ್ನು ಕಾಪಾಡಿಕೊಳ್ಳಿ…

ಕತ್ತಿನ ಭಾಗದಲ್ಲಿ ನೋವು ರಹಿತ ಗುಳ್ಳೆಗಳು ಮೂಡುವುದಕ್ಕೆ ಮುಖ್ಯ ಕಾರಣ ಇನ್ಸುಲಿನ್ ಪ್ರತಿರೋಧ (Insulin resistance) ಅಥವಾ ಇನ್ಸುಲಿನ್ ರೆಸಿಸ್ಟೆನ್ಸ್. ದೇಹದ ಹಲವು ಕಾಯಿಲೆಗಳಿಗೆ ಕಾರಣ ಆಗಬಲ್ಲದು ಈ ಇನ್ಸುಲಿನ್ ರೆಸಿಸ್ಟೆನ್ಸ್ ಸ್ಥಿತಿ. ನಾವು ತಿನ್ನುವ ಆಹಾರ ಗ್ಲೂಕೋಸ್ ಆಗಿ ಬದಲಾಗುತ್ತದೆ. ಈ ಗ್ಲೂಕೋಸ್ ಅನ್ನು ಜೀವಕೋಶಗಳಿಗೆ ತಲುಪಿಸಿ, ದೇಹಕ್ಕೆ ಶಕ್ತಿ ನೀಡುವ ಕಾರ್ಯ ಮಾಡುತ್ತದೆ ಇನ್ಸುಲಿನ್. ಆದರೆ ಜೀವಕೋಶಗಳು ಇನ್ಸುಲಿನ್ ಅನ್ನು ವಿರೋಧಿಸಿದಾಗ ಆ ಗ್ಲೂಕೋಸ್ ಅಂಶ ರಕ್ತದಲ್ಲಿಯೇ ಉಳಿಯುತ್ತದೆ. ಈ ಸ್ಥಿತಿಯನ್ನು ಇನ್ಸುಲಿನ್ ರೆಸಿಸ್ಟೆನ್ಸ್ ಎನ್ನಲಾಗುತ್ತದೆ.

ಇನ್ಸುಲಿನ್ ರೆಸಿಸ್ಟೆನ್ಸ್​​ಗೆ (Insulin resistance) ಕಾರಣಗಳೇನು?

ಇನ್ಸುಲಿನ್ ರೆಸಿಸ್ಟೆನ್ಸ್​​ಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ವ್ಯಾಯಾಮ ರಹಿತ ಜೀವನ ಶೈಲಿ. ಯಾವುದೇ ದೈಹಿಕ ವ್ಯಾಯಾಮ ಮಾಡದೇ ಇರುವುದು ಮುಖ್ಯವಾದ ಕಾರಣಗಳಲ್ಲಿ ಒಂದು. ಕೆಟ್ಟ ಡಯಟ್, ಅಂದರೆ ಜಂಕ್ ಫುಡ್ ಹೆಚ್ಚಾಗಿ ಸೇವಿಸುವುದು. ಅತಿಯಾದ ಕಾರ್ಬೋಹೈಡ್ರೇಟ್ ಯುಕ್ತ ಹಾಗೂ ಅತಿಯಾದ ಕೊಬ್ಬಿನ ಅಂಶಗಳುಳ್ಳ ಆಹಾರವನ್ನು ಸೇವಿಸುವುದು. ಕಡಿಮೆ ನಿದ್ದೆ, ಒತ್ತಡದ ಜೀವನಶೈಲಿ, ಅತಿಯಾದ ದೇಹದ ತೂಕ ಇದಕ್ಕೆ ಪ್ರಮುಖ ಕಾರಣ. ಕೆಲವರಿಗೆ ವಂಶಪಾರಂಪರ್ಯವಾಗೂ ಇನ್ಸುಲಿನ್ ರೆಸಿಸ್ಟೆನ್ಸ್ ಬರುವ ಸಾಧ್ಯತೆ ಇರುತ್ತದೆ.

ಇನ್ಸುಲಿನ್ ರೆಸಿಸ್ಟೆನ್ಸ್ ಲಕ್ಷಣಗಳು

  • ಕೊರಳಿನ ಸುತ್ತ ಗುಳ್ಳೆಗಳು
  • ಕೊರಳಿನ ಮೇಲೆ, ಹಣೆ, ಕೆನ್ನೆ ಮೇಲೆ ಕಪ್ಪು ಬಣ್ಣ
  • ದೇಹದ ತೂಕ ಹೆಚ್ಚಾಗುವುದು
  • ಸದಾ ಸುಸ್ತಾಗುವುದು, ಬಳಲಿಕೆ
  • ಸಕ್ಕರೆ ಅಥವಾ ಸಿಹಿ ತಿನ್ನುವ ಬಯಕೆ ಹೆಚ್ಚಾಗುವುದು

ಇನ್ಸುಲಿನ್ ರೆಸಿಸ್ಟೆನ್ಸ್​​ನಿಂದ ಆಗುವ ಅಪಾಯಗಳು

ಇನ್ಸುಲಿನ್ ರೆಸಿಸ್ಟೆನ್ಸಿನಿಂದ ಆಗುವ ಅತಿ ಮುಖ್ಯ ಸಮಸ್ಯೆ ಸಕ್ಕರೆ ಕಾಯಿಲೆ. ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಸಕ್ಕರೆ ಕಾಯಿಲೆಗೆ ನೇರ ಸಂಬಂಧ ಇದೆ. ಇದರ ಹೊರತಾಗಿ ಲಿವರ್​​ಗೆ ಸಂಬಂಧಿದ ಗಂಭೀರ ಸಮಸ್ಯೆಗೂ ಇನ್ಸುಲಿನ್ ರೆಸಿಸ್ಟೆನ್ಸ್​​ ಕಾರಣ ಆಗುತ್ತದೆ. ಜೊತೆಗೆ ಚರ್ಮದ ಸುಕ್ಕುಗಟ್ಟುವಿಕೆ, ಫ್ಯಾಟಿ ಲಿವರ್, ಹೃದಯ ಸಂಬಂಧಿ ಸಮಸ್ಯೆ, ಹೃದಯಾಘಾತಕ್ಕೆ ಕಾರಣ, ದೀರ್ಘಾವಧಿಯಲ್ಲಿ ಕಣ್ಣಿನ ಸಮಸ್ಯೆ ಇನ್ನಿತರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇನ್ಸುಲಿನ್ ರೆಸಿಸ್ಟೆನ್ಸ್ ಸಮಸ್ಯೆಗೆ ಪರಿಹಾರ?

ಇನ್ಸುಲಿನ್ ರೆಸಿಸ್ಟೆನ್ಸ್ ಉತ್ತಮ ಪಡಿಸಿಕೊಳ್ಳಲು ಹಲವು ಸರಳವಾದ ಜೊತೆಗೆ ಪರಿಣಾಮಕಾರಿಯಾದ ದಾರಿಗಳು ಇವೆ. ಅವುಗಳಲ್ಲಿ ಅತ್ಯಂತ ಮುಖ್ಯವಾದುದು ದೈಹಿಕ ವ್ಯಾಯಾಮ ಮತ್ತು ಡಯಟ್. ಈ ಎರಡೂ ಅತ್ಯಂತ ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿ ದಿನ ಅಥವಾ ವಾರಕ್ಕೆ ಐದು ದಿನ ಕನಿಷ್ಟ ಒಂದು ಗಂಟೆ ರೆಸಿಸ್ಟೆನ್ಸ್ ಎಕ್ಸರ್ಸೈಸ್ ಮಾಡಲೇ ಬೇಕು. ಅಂದರೆ ದೇಹದ ಮಾಂಸಖಂಡಗಳು ಬಲಗೊಳ್ಳುವಂಥಹಾ ವ್ಯಾಯಾಮ ಕಡ್ಡಾಯ. ಜೊತೆಗೆ ಪ್ರತಿ ಊಟದ ಬಳಿಕವೂ 10 ನಿಮಿಷ ವಾಕಿಂಗ್ ಕಡ್ಡಾಯ.

ಇನ್ನು ಡಯಟ್ ಸಹ ಬಲು ಶಿಸ್ತಿನಿಂದ ಇರಬೇಕಾಗುತ್ತದೆ. ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಜೊತೆಗೆ ಕಾರ್ಬ್ಸ್ ಹೆಚ್ಚಾಗಿರುವ ಅಕ್ಕಿ, ಮೈದಾ, ಗೋಧಿಗಳನ್ನು ಸಹ ಕಡಿಮೆ ಮಾಡಬೇಕು. ಸೇವಿಸುವ ಆಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಅಂಶವೇ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಮತ್ತು ಕರಿದ ಪದಾರ್ಥ ಅಥವಾ ಅತಿಯಾಗಿ ಎಣ್ಣೆ ಬೆರೆಸಿದ ಪದಾರ್ಥದಿಂದ ದೂರ ಉಳಿಯಬೇಕು. ಏನೇ ತಿಂದರು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು. ಪೋರ್ಷನ್ ಕಂಟ್ರೋಲ್ ಬಹಳ ಮುಖ್ಯ.

ತಿಳಿದುಕೊಳ್ಳುವುದು ಹೇಗೆ?

ಇನ್ಸುಲಿನ್ ರೆಸಿಸ್ಟೆನ್ಸ್ ಇರುವುದೇ ಎಂದು ತಿಳಿದುಕೊಳ್ಳುವುದು ಸುಲಭ. ಎಚ್​​ಬಿಎ1ಸಿ (HbA1c), ಎಚ್​​​ಓಎಂಎ-ಐಆರ್ (HOMA-IR), ಲಿಪಿಡ್ ಪ್ರೊಫೈಲ್​​ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಬಹುದು. ಅದಾದ ಬಳಿಕ ಪರೀಕ್ಷಾ ವರದಿಗಳನ್ನು ವೈದ್ಯರಿಗೆ ನೀಡಿ ಅಗತ್ಯ ಸಲಹೆ ಪಡೆದು ಚಿಕಿತ್ಸೆಗೆ ಒಳಗಾಗಬೇಕು. ಸ್ವಯಂ ಚಿಕಿತ್ಸೆ ಒಳ್ಳೆಯದಲ್ಲ.