☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

DK SHIVAKUMAR: ರೈತರ ವಿಚಾರದಲ್ಲಿ ಬಿಜೆಪಿ ಕಪಟ ನಾಟಕ – ಸರ್ವಪಕ್ಷ ಸಭೆಗೆ ಗೈರಾದವರಿಗೆ ಸಿಎಂ ತರಾಟೆ

Image of DK Shivakumar

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ರಾಜ್ಯ ಎದುರಿಸುತ್ತಿರುವ ಬರಗಾಲದ ಪರಿಸ್ಥಿತಿ ಮತ್ತು ಕಸ್ತೂರಿರಂಗನ್ ವರದಿ ಜಾರಿ ಕುರಿತು ಗಂಭೀರ ಚರ್ಚೆಯ ಅಗತ್ಯ ಎಂದಿದ್ದಾರೆ. ಈ ಎರಡೂ ವಿಷಯಗಳು ರಾಜ್ಯದ ರೈತರ ಬದುಕಿಗೆ ನೇರ ಸಂಬಂಧ ಹೊಂದಿದ್ದು, ಇದಕ್ಕಾಗಿ ಸರ್ವಪಕ್ಷಗಳ ಸಭೆಯನ್ನು ನಡೆಸಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಅನಿವಾರ್ಯವಾಗಿರುವುದರಿಂದ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ

ವಿಪಕ್ಷಗಳು ಸರ್ವಪಕ್ಷ ಸಭೆಗೆ ಬರಲು ಹಿಂದೇಟು ಹಾಕುತ್ತಿರುವುದನ್ನು ಟೀಕಿಸಿದ ಅವರು, ಬರದಂತಹ ವಿಚಾರದಲ್ಲಿ ಚರ್ಚೆಗೆ ಬರದಿದ್ದರೆ ಅವರಿಗೆ ರೈತರ ಬಗ್ಗೆ ಬದ್ಧತೆ ಇಲ್ಲ ಎಂದರ್ಥ ಎಂದು ಹೇಳಿದ್ದಾರೆ. ಕೇಂದ್ರವನ್ನು ಎದುರಿಸುವ ಧೈರ್ಯ ವಿಪಕ್ಷಗಳಿಗೆ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದೂ ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ರೈತರ ಪರವಾಗಿ ಕಪಟ ನಾಟಕ ಮಾಡುತ್ತಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ : ಸಿಎಂ ಸ್ವಕ್ಷೇತ್ರ ಕನಕಪುರದಿಂದಲೇ ಜೆಡಿಎಸ್ ರೈತ ಸ್ವಾಭಿಮಾನಿ ಯಾತ್ರೆಗೆ ಚಾಲನೆ

ಈ ಸಂಬಂಧಿಸಿದ ಅಧ್ಯಯನ ಸಮಿತಿ ಮೂರು ದಿನಗಳಲ್ಲಿ ರಾಜ್ಯಕ್ಕೆ ಬರಲಿದ್ದು, ಅದಕ್ಕೆ ಕಾನೂನು ರೀತಿಯಲ್ಲಿ ಎಲ್ಲ ಸಹಕಾರ ನೀಡಲಾಗುವುದು ಎಂದಿದ್ದಾರೆ. ವಿಪಕ್ಷಗಳು ಬಾರದಿದ್ದರೂ ಸರ್ಕಾರ ರೈತರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತದೆ, ಕಸ್ತೂರಿರಂಗನ್ ವರದಿ ಬಗ್ಗೆ ಕೇಂದ್ರ ನಾಯಕರು ಮತ್ತು ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ನಾಳೆ ಪಕ್ಷದ ಸಭೆಯಲ್ಲಿ ಶಿಕ್ಷಣ ಮತ್ತು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜಕೀಯಕ್ಕಿಂದ ರೈತರ ಹಿತ ಮುಖ್ಯ !

ಬರಗಾಲ ಮತ್ತು ಕಸ್ತೂರಿರಂಗನ್ ವರದಿ ಎರಡೂ ಕರ್ನಾಟಕದ ಪಾಲಿಗೆ ಸೂಕ್ಷ್ಮ ಮತ್ತು ದೀರ್ಘಕಾಲೀನ ಪರಿಣಾಮ ಬೀರುವ ವಿಷಯಗಳು. ಪ್ರತಿ ವರ್ಷ ಬರದಿಂದ ಬೆಳೆ ನಷ್ಟ, ಕುಡಿಯುವ ನೀರಿನ ಅಭಾವ ಅನುಭವಿಸುತ್ತಿರುವ ರೈತರಿಗೆ ಸರ್ಕಾರದ ಪರಿಹಾರ ತುರ್ತು ಅಗತ್ಯ. ಇನ್ನೊಂದೆಡೆ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಜಾರಿಯಾದರೆ ಕೃಷಿ, ವಾಸ ಮತ್ತು ಜೀವನೋಪಾಯಕ್ಕೆ ಅಡ್ಡಿಯಾಗುತ್ತದೆ ಎಂಬ ಆತಂಕ ಮಲೆನಾಡು ಮತ್ತು ಕರಾವಳಿ ರೈತರಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಸರ್ವಪಕ್ಷ ಸಭೆ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಮ್ಮತದ ನಿರ್ಧಾರಕ್ಕೆ ವೇದಿಕೆಯಾಗಬೇಕು. ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿದರೆ ರೈತರಿಗೆ ನ್ಯಾಯ ಸಿಗುವುದಿಲ್ಲ. ಕೇಂದ್ರ ಮತ್ತು ರಾಜ್ಯದ ನಡುವೆ ಸಮನ್ವಯ ಸಾಧಿಸಿ, ವೈಜ್ಞಾನಿಕ ವರದಿ ಮತ್ತು ನೆಲದ ವಾಸ್ತವದ ನಡುವೆ ಸಮತೋಲನ ಕಾಯುವ ಕೆಲಸ ಆಗಬೇಕಿದೆ.