☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

WEST BENGAL : ಬಂಗಾಳದಲ್ಲಿ ಮೌಸಮ್ ಬದಲಾಗಿದೆ, ತಿಲಕ-ಧೋತಿ ಗೌರವಿಸುವ ಆಡಳಿತ : ಸುವೇಂದು

Image of West Bengal Suvendu adhikari

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ನಮ್ಮ ಸರ್ಕಾರ ಗೋರಕ್ಷಣೆಗೆ ಬದ್ಧವಾಗಿದೆ, ಸಾಧು ಸಂತರನ್ನು ಅವಮಾನಿಸಿದವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಬಂಗೂರ್ ಜಾಗರಣ ಮಂಚ್ ಆಯೋಜಿಸಿದ್ದ ಬೃಹತ್ ಭಗವದ್ಗೀತಾ ಪಾರಾಯಣ ಸಮಾರಂಭದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು ಹನ್ನೊಂದು ಸಾವಿರ ಮಂದಿ ಒಟ್ಟಾಗಿ ಸೇರಿ ಗೀತೆಯನ್ನು ಪಠಿಸಿದ್ದರು. ರಾಜ್ಯದ ವಾತಾವರಣವೇ ಬದಲಾಗಿದೆ, ಇನ್ನು ಮುಂದೆ ಧಾರ್ಮಿಕ ಆಚರಣೆ ಮತ್ತು ಪ್ರಚಾರಕ್ಕೆ ಯಾರೂ ಅಂಜುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದರು.

ಅದೇ ವೇದಿಕೆಯಿಂದ ಜನರಿಗೆ ಬಹಿರಂಗ ಕರೆ ನೀಡಿದ ಅಧಿಕಾರಿ, ಯಾವುದೇ ಹಿಂಜರಿಕೆ ಇಲ್ಲದೆ ಭಗವದ್ಗೀತೆ ಓದಿ, ಇತರರಿಗೂ ಹಂಚಿ, ಹನುಮಾನ್ ಚಾಲೀಸಾ ವಿತರಿಸಿ, ಹರೇ ಕೃಷ್ಣ ಮಂತ್ರ ಪಠಿಸಿ ಮತ್ತು ಶಂಖನಾದ ಮಾಡಬೇಕು ಎಂದು ಹೇಳಿದರು. ಬಂಗಾಳದಲ್ಲಿ ಈಗ ಹವಾ ಬದಲ್ ಗಯಾ ಹೈ ಎಂದು ಹೇಳಿದ ಅವರು, ತಿಲಕ, ಶಿಖೆ, ಧೋತಿ ಮತ್ತು ತುಳಸಿಯನ್ನು ಗೌರವಿಸುವ ಆಡಳಿತ ಅಧಿಕಾರಕ್ಕೆ ಬಂದಿದೆ, ಇದು ಗೋಮಾತೆಯನ್ನು ಕಾಪಾಡುವ ಸರ್ಕಾರ ಎಂದು ಬಣ್ಣಿಸಿದರು. ಸನ್ಯಾಸಿಗಳು ಮತ್ತು ಸಾಧು ಸಂತರಿಗೆ ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಜೈಲಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ದೇಶ ಮತ್ತು ರಾಜ್ಯವನ್ನು ಒಡೆಯಲು ಯತ್ನಿಸುವ ಶಕ್ತಿಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದರು. ಕಾಶ್ಮೀರಕ್ಕೆ ಆಜಾದಿ ಬೇಕು ಎಂಬಂತಹ ದೇಶವಿರೋಧಿ ಘೋಷಣೆ ಕೂಗುವ ತುಕ್ಡೆ ತುಕ್ಡೆ ಗ್ಯಾಂಗ್ ವಿರುದ್ಧ ಎಲ್ಲರೂ ಒಂದಾಗಿ ನಿಲ್ಲಬೇಕು ಮತ್ತು ಅವರ ಸಂಚುಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಸ್ವಂತ ಮನೆಯೂ ಇಲ್ಲ..ಕಾರು ಇಲ್ಲ – ಪ್ರಧಾನಿ ಮೋದಿ ಒಟ್ಟು ಆಸ್ತಿ ಎಷ್ಟು..?

ದಶಕಗಳ ಕಾಲ ಎಡಪಂಥೀಯ ಮತ್ತು ನಂತರ ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಜಾತ್ಯತೀತ ಮತ್ತು ಬಂಗಾಳಿ ಅಸ್ಮಿತೆಯ ರಾಜಕಾರಣಕ್ಕೆ ಹೆಸರಾಗಿದ್ದ ರಾಜ್ಯದಲ್ಲಿ ಹಿಂದೂತ್ವದ ಪ್ರಬಲ ಪ್ರತಿಪಾದನೆ ಮುನ್ನೆಲೆಗೆ ಬರುತ್ತಿದೆ. ಗೋರಕ್ಷಣೆ ಮತ್ತು ಸಾಧು ಸಂತರ ರಕ್ಷಣೆ ಎಂಬುದು ಧಾರ್ಮಿಕ ಭಾವನೆ ಮಾತ್ರವಲ್ಲ, ರಾಜಕೀಯವಾಗಿ ಹಿಂದೂ ಮತಗಳನ್ನು ಕ್ರೋಢೀಕರಿಸುವ ಪ್ರಬಲ ಅಸ್ತ್ರವೂ ಹೌದು. ತಿಲಕ, ಶಿಖೆ, ಧೋತಿ, ತುಳಸಿ ಸಂಸ್ಕೃತಿಯನ್ನು ಗೌರವಿಸುವ ಸರ್ಕಾರ ಎಂಬ ಹೇಳಿಕೆ ಬಂಗಾಳದ ಸಾಂಸ್ಕೃತಿಕ ಬಹುತ್ವದೊಳಗೆ ಒಂದು ನಿರ್ದಿಷ್ಟ ಧಾರ್ಮಿಕ ಗುರುತನ್ನು ಅಧಿಕೃತಗೊಳಿಸುವ ಪ್ರಯತ್ನದಂತೆ ಕಾಣುತ್ತದೆ. ಜೈಲು ಶಿಕ್ಷೆಯ ಎಚ್ಚರಿಕೆ ಕಾನೂನು ಸುವ್ಯವಸ್ಥೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ಬಂಗಾಳದಲ್ಲಿ ಧರ್ಮ ರಾಜಕೀಯ !

ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವವರ ವಿರುದ್ಧ ಕ್ರಮಕ್ಕೆ ಅವಕಾಶವಿದೆ, ಆದರೆ ಅದನ್ನು ಆಡಳಿತದ ಪ್ರಮುಖ ಘೋಷಣೆಯಾಗಿ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನಿನ ದುರ್ಬಳಕೆ ಬಗ್ಗೆ ಚರ್ಚೆಗೆ ಕಾರಣವಾಗಬಹುದು. ಜೊತೆಗೆ ತುಕ್ಡೆ ತುಕ್ಡೆ ಗ್ಯಾಂಗ್ ಮತ್ತು ದೇಶವಿರೋಧಿ ಶಕ್ತಿಗಳ ಉಲ್ಲೇಖ ರಾಷ್ಟ್ರೀಯತೆಯ ನಿರೂಪಣೆಯನ್ನು ಸ್ಥಳೀಯ ರಾಜಕಾರಣಕ್ಕೆ ತರುವ ತಂತ್ರವಾಗಿದೆ. ಬಂಗಾಳ ದುರ್ಗಾ ಪೂಜೆ, ಕಾಳಿ ಪೂಜೆಯಂತಹ ಹಬ್ಬಗಳಲ್ಲಿ ಸರ್ವರನ್ನು ಒಳಗೊಳ್ಳುವ ಪರಂಪರೆ ಹೊಂದಿದೆ. ಅಂತಹ ನೆಲದಲ್ಲಿ ಧಾರ್ಮಿಕ ಆಚರಣೆಗೆ ಹೆದರಬೇಕಿಲ್ಲ ಎಂಬ ಭರವಸೆ ಯಾರಿಗೆ ಮತ್ತು ಯಾರ ವಿರುದ್ಧ ಎಂಬುದು ಸ್ಪಷ್ಟವಾಗಬೇಕಿದೆ. ಈ ಹಿನ್ನೆಲೆಯಲ್ಲಿ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಗೀತಾ ಪಾರಾಯಣದಂತಹ ಬೃಹತ್ ಧಾರ್ಮಿಕ ಸಮಾವೇಶಗಳು ಕೇವಲ ಆಧ್ಯಾತ್ಮಿಕ ಕಾರ್ಯಕ್ರಮಗಳಾಗಿ ಉಳಿಯದೆ ಮತ ಕ್ರೋಢೀಕರಣದ ವೇದಿಕೆಗಳಾಗುವ ಅಪಾಯವೂ ಇದೆ.