ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈ ಕೇಸ್‌ನಲ್ಲಿ ನಟ ದರ್ಶನ್ (Darshan) ಅಂಡ್ ಗ್ಯಾಂಗ್ ಜೈಲು ಪಾಲಾಗಿದೆ. ಈಗ ಪ್ರಕರಣದ ಪ್ರಮುಖ ಆರೋಪಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ.
ಈ ಬೆಳವಣಿಗೆಯಿಂದ ದರ್ಶನ್‌ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಕೋರ್ಟ್‌ನಲ್ಲಿ ಮಾಫಿ ಸಾಕ್ಷಿಯ ವಿಚಾರಣೆ ನಡೆಸಲಾಯಿತು. ಈ ವೇಳೆ ನ್ಯಾಯಾಧೀಶರು ಆರೋಪಿ ಪ್ರದೋಷ್‌ಗೆ ನೇರವಾಗಿ ಒಂದು ಪ್ರಮುಖ ಪ್ರಶ್ನೆ ಕೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಪ್ರದೋಷ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ವಿಚಾರಣೆ ವೇಳೆ ಜಡ್ಜ್ ಕೇಳಿದ ಪ್ರಶ್ನೆಗೆ ಪ್ರದೋಷ್ ನೀಡಿದ ಉತ್ತರ ಈಗ ಚರ್ಚೆಗೆ ಗ್ರಾಸವಾಗಿದೆ.
ಜಡ್ಜ್ ಕೇಳಿದ ಪ್ರಶ್ನೆ ಏನು? ಪ್ರದೋಷ್ ಕೊಟ್ಟ ಉತ್ತರವೇನು?
ವಿಚಾರಣೆ ವೇಳೆ ನ್ಯಾಯಾಧೀಶರು ಪ್ರದೋಷ್‌ಗೆ ನೇರ ಪ್ರಶ್ನೆ ಮಾಡಿದರು. “ಮಾಫಿ ಸಾಕ್ಷಿ ಆದೇಶದ ಪ್ರತಿ ತಲುಪಿದೆಯೇ? ಎಲ್ಲಾ ಷರತ್ತುಗಳಿಗೆ ನಿಮ್ಮ ಒಪ್ಪಿಗೆ ಇದೆಯಾ?” ಎಂದು ಜಡ್ಜ್ ಕೇಳಿದರು. ಇದಕ್ಕೆ ತಕ್ಷಣ ಉತ್ತರಿಸಿದ ಪ್ರದೋಷ್, “ಆದೇಶದ ಪ್ರತಿ ನನಗೆ ತಲುಪಿದೆ. ಕೋರ್ಟ್ ವಿಧಿಸಿರುವ ಎಲ್ಲಾ ಷರತ್ತುಗಳಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: DARSHAN: ದರ್ಶನ್ ಬೆನ್ನಲ್ಲೇ ಪವಿತ್ರಾ ಗೌಡಗೂ ಸಂಕಷ್ಟ; ಜಾಮೀನು ಸಿಗುತ್ತಾ?
ದರ್ಶನ್ ಪರ ವಕೀಲರ ಮನವಿ ಏನು?
ಇನ್ನೊಂದೆಡೆ, ಸೆಪ್ಟೆಂಬರ್ 23 ರಂದು ಪ್ರದೋಷ್‌ಗೆ ಸಮನ್ಸ್ ನೀಡಲು ಎಸ್‌ಪಿಪಿ (SPP) ಕೋರ್ಟ್‌ಗೆ ಮನವಿ ಮಾಡಿದರು. ಆದರೆ ದರ್ಶನ್ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮಾಫಿ ಸಾಕ್ಷಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬೇಕಾಗಿದೆ ಎಂದು ಹೇಳಿದರು. ಹೀಗಾಗಿ ಸಮನ್ಸ್ ನೀಡುವ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿದರು. 59ನೇ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿದ್ದು, ನಾಳೆ ಸಮನ್ಸ್ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದೆ.
ಸತ್ಯ ಮರೆಮಾಚಿದರೆ ಕಠಿಣ ಶಿಕ್ಷೆಯ ಎಚ್ಚರಿಕೆ
ಕಾನೂನಿನ ಪ್ರಕಾರ ಮಾಫಿ ಸಾಕ್ಷಿಯಾದ ವ್ಯಕ್ತಿ ಸಂಪೂರ್ಣ ಸತ್ಯ ಹೇಳಬೇಕು. ಒಂದು ವೇಳೆ ನ್ಯಾಯಾಲಯದ ಮುಂದೆ ಸುಳ್ಳು ಹೇಳಿದರೆ ಅಪಾಯ ತಪ್ಪಿದ್ದಲ್ಲ. ಪ್ರಮುಖ ಸತ್ಯವನ್ನು ಮರೆಮಾಚಿದರೆ ಆತನಿಗೆ ನೀಡಿದ ಕ್ಷಮಾದಾನ ರದ್ದಾಗುತ್ತದೆ. ಮೂಲ ಅಪರಾಧ ಮತ್ತು ಸುಳ್ಳು ಸಾಕ್ಷಿ ನೀಡಿದ್ದಕ್ಕಾಗಿ ಕಠಿಣ ಶಿಕ್ಷೆಯಾಗುತ್ತದೆ.
ಮಾಫಿ ಸಾಕ್ಷಿಯಾದವರು ಪಾಲಿಸಬೇಕಾದ ನಿಯಮಗಳು
- ತನಗೆ ತಿಳಿದಿರುವ ಕೊಲೆ ಪ್ರಕರಣದ ಸಂಪೂರ್ಣ ಸತ್ಯವನ್ನು ಸ್ವಇಚ್ಛೆಯಿಂದ ಒಪ್ಪಿಕೊಳ್ಳಬೇಕು.
- ಪ್ರಕರಣದಲ್ಲಿ ಭಾಗಿಯಾದ ಮುಖ್ಯ ಸೂತ್ರಧಾರಿಗಳು ಮತ್ತು ಸಹಚರರ ಪಾತ್ರದ ಬಗ್ಗೆ ನಿಖರ ಮಾಹಿತಿ ನೀಡಬೇಕು.
- ನ್ಯಾಯಾಲಯ ಮತ್ತು ತನಿಖಾಧಿಕಾರಿಗಳ ಎದುರು ಒಂದೇ ರೀತಿಯ ಸತ್ಯ ಹೇಳಿಕೆ ನೀಡಬೇಕು.




