ಗ್ಲಾಮರಸ್ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಈಗ ಸಾಹಸಮಯ ಪಾತ್ರಕ್ಕೆ ಹೆಜ್ಜೆ ಇಟ್ಟಿದ್ದಾರೆ. ರವೀಂದ್ರ ಪುಳ್ಳೆ (Rawindra Pulle) ನಿರ್ದೇಶನದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ‘ಮೈಸಾ’ ಟೀಸರ್ರಿ ಲೀಸ್ ಆಗಿದೆ. ಈ ಚಿತ್ರವನ್ನು ‘ಅನ್‌ಫಾರ್ಮುಲಾ ಫಿಲ್ಮ್ಸ್’ (Unformula Films)ಸಂಸ್ಥೆ ನಿರ್ಮಿಸಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ವೈವಿಧ್ಯಮಯ ಹಾಗೂ ಸವಾಲಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ನಿರ್ದೇಶಕ ರವೀಂದ್ರ ಪುಳ್ಳೆ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಬಿಡುಗಡೆಯಾಗಿರುವ ಟೀಸರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಗೋಂಡ್ ಬುಡಕಟ್ಟು ಮಹಿಳೆಯಾಗಿ ರಶ್ಮಿಕಾ ಮಿಂಚು
ಟೀಸರ್ ಮೈಸಾಳ (Mysaa Teaser) ಆಂತರಿಕ ತಲ್ಲಣ ಹಾಗೂ ಹೋರಾಟವನ್ನು ತೆರೆದಿಡುತ್ತದೆ. “ನಾನು ಸುಸ್ತಾಗಿದ್ದೇನೆ, ನಾನು ನಿಂತುಬಿಟ್ಟಿದ್ದೇನೆ, ನಾನು ಸೋತಿದ್ದೇನೆ” ಎಂಬ ಶಕ್ತಿಶಾಲಿ ಧ್ವನಿಯೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ರಶ್ಮಿಕಾ ಈ ಚಿತ್ರದಲ್ಲಿ ‘ಗೋಂಡ್’ ಬುಡಕಟ್ಟು ಸಮುದಾಯದ ಕೆಚ್ಚೆದೆಯ ಮಹಿಳೆಯಾಗಿ ಅಭಿನಯಿಸಿದ್ದಾರೆ.
ಇದನ್ನು ಓದಿ: Rashmika Mandanna:ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್; ರಶ್ಮಿಕಾ ಮಂದಣ್ಣ ಕಣ್ಣೀರು
ಸಮಾಜದ ಅಡೆತಡೆಗಳಿಗೆ ಅಂಜದೆ ಒಂಟಿಯಾಗಿ ಹೋರಾಡುವ ಪಾತ್ರ ಅವರದ್ದು. ಆಕೆ ಕೇವಲ ಯುದ್ಧ ಮಾಡುವವಳಲ್ಲ, ಬದಲಾಗಿ ಯುದ್ಧದ ದಿಕ್ಕನ್ನೇ ಬದಲಿಸುವ ಶಕ್ತಿಯಾಗಿದ್ದಾಳೆ ಎಂಬುದನ್ನು ಟೀಸರ್ ಸ್ಪಷ್ಟಪಡಿಸುತ್ತದೆ.
ಕಠಿಣ ಸಾಹಸ ದೃಶ್ಯಗಳು ಮತ್ತು ತರಬೇತಿ
ಈ ವಿಭಿನ್ನ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಕಠಿಣ ದೈಹಿಕ ತರಬೇತಿ ಪಡೆದಿದ್ದಾರೆ. ಹೈ-ವೋಲ್ಟೇಜ್ ಬೈಕ್ ರೈಡಿಂಗ್ ಹಾಗೂ ಅಂಡರ್‌ವಾಟರ್ ಆ್ಯಕ್ಷನ್ ಸೀಕ್ವೆನ್ಸ್‌ಗಳಲ್ಲಿ ಸ್ವತಃ ಪಾಲ್ಗೊಂಡಿದ್ದಾರೆ. ಟೀಸರ್‌ನಲ್ಲಿರುವ ಅವರ ತೀವ್ರ ಆಕ್ರೋಶ ಮತ್ತು ಸಾಹಸ ದೃಶ್ಯಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ.
ತಾರಾಗಣ ಮತ್ತು ತಾಂತ್ರಿಕ ಶ್ರೀಮಂತಿಕೆ
ಚಿತ್ರದಲ್ಲಿ ಅನುಭವಿ ಕಲಾವಿದರ ಬಳಗವೇ ಇದೆ. ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್, ರಾಹುಲ್ ರವೀಂದ್ರನ್ ಮತ್ತು ಸಮುದ್ರಕನಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಶ್ರೇಯಾಸ್ ಕೆ. ಕೃಷ್ಣ ಅವರ ಛಾಯಾಗ್ರಹಣ ಅದ್ಭುತವಾಗಿ ಮೂಡಿಬಂದಿದೆ.
ಜೇಕ್ಸ್ ಬಿಜಾಯ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅಂತರರಾಷ್ಟ್ರೀಯ ಆ್ಯಕ್ಷನ್ ಕೊರಿಯೋಗ್ರಾಫರ್ ಕೆಚಾ ವಿನ್ಯಾಸಗೊಳಿಸಿದ ಸಾಹಸ ದೃಶ್ಯಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿವೆ. ನಿರ್ದೇಶಕರ ಅದ್ದೂರಿ ಮೇಕಿಂಗ್ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ.
ನವೆಂಬರ್ 27ಕ್ಕೆ ವಿಶ್ವದ್ಯಂತ ಬಿಡುಗಡೆ
‘ಮೈಸಾ’ (Mysaa) ಸಿನಿಮಾ ದೊಡ್ಡ ಮಟ್ಟದ ಆಕ್ಷನ್ ಮತ್ತು ಭಾವನಾತ್ಮಕ ಕಥಾಹಂದರ ಹೊಂದಿದೆ. ಈ ಚಿತ್ರವು ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನವೆಂಬರ್ 27ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.




