ಚೆನ್ನೈ: ಗಣೇಶ ಚತುರ್ಥಿ ಬಂತು ಅಂದರೆ ಸಿನಿಮಾ ಪ್ರೇಮಿಗಳ ಅಭಿಮಾನಿಗಳು ವಿಧ ವಿಧವಾದ ಮೂರ್ತಿಗಳನ್ನು ಸಿದ್ಧ ಪಡಿಸುತ್ತಾರೆ. ಈ ಬಾರಿ ಗಣೇಶ ಹಬ್ಬ ಕೂಡ ದೇಶಾದ್ಯಂತ ಗಮನ ಸೆಳೆದಿದೆ. ದೇಶದ ಮೂಲೆ ಮೂಲೆಯಲ್ಲಿ ಗಣೇಶ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಇದೇ ವೇಳೆ ಚೆನ್ನೈನಲ್ಲಿ ದಳಪತಿ ವಿಜಯ್ ಅವರನ್ನು ಹೋಲುವ ಗಣೇಶನ ಮೂರ್ತಿಗಳು ಗಮನ ಸೆಳೆದಿವೆ.
ಈ ಬಾರಿ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ದಳಪತಿ ವಿಜಯ್ ದೇಶಾದ್ಯಂತ ಹಲ್‌ಚಲ್ ಎಬ್ಬಿಸಿದ್ದರು. ಸದ್ಯ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸದ್ದು ಮಾಡುತ್ತಿರುವ ವಿಜಯ್ ಇತ್ತೀಚೆಗೆ ಸಹ ಅಜಿತ್ ಕುಮಾರ್ ಜೊತೆ ಕಾರ್ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಕಗಳ ಪ್ರಕಾರ ಅಜಿತ್ ನಟಿಸುತ್ತಿರುವ ಡಾಕ್ಯೂಮೆಂಟರಿಯಲ್ಲಿ ವಿಜಯ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.
ವಿಜಯ್ ಅವತಾರವೆತ್ತಿದ ಗಣೇಶ
ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನು ವಿಜಯ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ‘ದಳಪತಿ’ ವಿಜಯ್ ಅಭಿಮಾನಿಗಳು ಅವರ ಸಿನಿಮಾದ ವಿವಿಧ ಶೈಲಿಯನ್ನು ಆಧರಿಸಿದ ಗಣೇಶ ಮೂರ್ತಿಗಳನ್ನು ನಿರ್ಮಾಣ ಮಾಡಿದ್ದಾರೆ. ಇದು ತಮಿಳು ಮಂದಿಯ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಅಜಿತ್ ಕಾರ್ ರೇಸಿಂಗ್ ಎಂಜಾಯ್ ಮಾಡಿದ ವಿಜಯ್-ತ್ರಿಶಾ; ವೈರಲ್ ಆಯ್ತು ಸಿಲ್ವರ್ಸ್ಟೋನ್ ಫೋಟೋಸ್
ಪ್ರತಿ ವರ್ಷ ದೇಶಾದ್ಯಂತ ಗಣೇಶೋತ್ಸವದ ಸಮಯದಲ್ಲಿ ಸಾಮಾಜಿಕ, ಕ್ರೀಡೆ, ರಾಜಕೀಯ ಹಾಗೂ ಸಿನಿಮಾ ಸೆಲೆಬ್ರೆಟಿಗಳ ಥೀಮ್ ಆಧರಿಸಿ ಗಣೇಶನ ಮೂರ್ತಿಗಳನ್ನು ನಿರ್ಮಿಸುತ್ತಾರೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಈ ಮೂರ್ತಿಗಳು ಸದ್ದು ಮಾಡುತ್ತಿದ್ದವು. ಆದರೆ, ಈ ಬಾರಿ ವಿಜಯ್ ಅವರ ಫೇಮಸ್ ಸಿನಿಮಾಗಳ ಲುಕ್ ಅನ್ನು ಇಟ್ಟುಕೊಂಡು ಗಣಪತಿ ವಿಗ್ರಹಗಳನ್ನು ಸೃಷ್ಠಿಸಲಾಗಿದೆ. ಇದು ಚೆನ್ನೈನಲ್ಲಿ ಗಣೇಶ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.
ವಿಜಯ್ ‘ಗಿಲ್ಲಿ’ಯಿಂದ ‘ಮಾಸ್ಟರ್’ವರೆಗೆ ಲುಕ್
ತಮಿಳುನಾಡಿನ ಸಿಎಂ ವಿಜಯ್ ನಟಿಸಿದ ಸೂಪರ್ ಹಿಟ್ ಸಿನಿಮಾಗಳಾದ ‘ಗಿಲ್ಲಿ’,’ಮಾಸ್ಟರ್’,’ಸರ್ಕಾರ್’ ಹಾಗೂ ಇತ್ತೀಚೆಗೆ ತೆರೆಕಂಡಿದ್ದ ‘ದಿ ಗೋಟ್’ ಸಿನಿಮಾಗಳ ವಿಶಿಷ್ಟ ಗೆಟಪ್‌ಗಳನ್ನು ಹೋಲುವ ಗಣೇಶನ ವಿಗ್ರಹಗಳು ಚೆನ್ನೈನಲ್ಲಿ ರಾರಾಜಿಸುತ್ತಿವೆ. ಅದರಲ್ಲೂ ‘ಗಿಲ್ಲಿ’ಯ ಜನಪ್ರಿಯ ಕಬಡ್ಡಿ ದೃಶ್ಯ, ವಿಜಯ್ ವಾಕಿಂಗ್ ಸ್ಟೈಲ್, ಅವರ ಭಂಗಿಯನ್ನು ಆಧರಿಸಿ ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿತ್ತು. ಈ ಕ್ರಿಯಾತ್ಮಕ ಗಣಪತಿಯ ದರ್ಶನ ಪಡೆಯಲು ನೂರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ವಿಜಯ್ ಸಿನಿಮಾಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಹೀಗಾಗಿದ್ದರೂ ಅವರ ಜನಪ್ರಿಯತೆ ಕಿಂಚಿತ್ತೂ ಕಮ್ಮಿಯಾಗಿಲ್ಲ ಅನ್ನೋದನ್ನು ಗಣೇಶ ಮೂರ್ತಿಗಳು ಸಾಬೀತು ಮಾಡಿವೆ. ಚೆನ್ನೈನಲ್ಲಿ ಈ ಮೂರ್ತಿಗಳು ಭಾರೀ ಸದ್ದು ಮಾಡುತ್ತಿವೆ. ವಿಜಯ್ ಹೋಲುವ ಈ ಗಣೇಶ ಮೂರ್ತಿಗಳ ವಿಡಿಯೋಗಳು ಮತ್ತು ಫೋಟೋಗಳು ಎಕ್ಸ್ (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.




