Photo Credits: @ungavijaytvkofficial (Instagram), @_sago.editzz (Instagram)
ತಮಿಳು ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ವಿಜಯ್ ಹಾಗೂ ಅಜಿತ್ ಕುಮಾರ್ ಅವರ ಬಾಂಧವ್ಯ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಲಂಡನ್‌ನಲ್ಲಿ ನಡೆಯುತ್ತಿರುವ ಅಜಿತ್ ಅವರ ಕಾರು ರೇಸಿಂಗ್ ಅನ್ನು ನಟ ವಿಜಯ್ ವೀಕ್ಷಿಸಿದ್ದಾರೆ.
ವಿಶೇಷ ಎಂದರೆ ವಿಜಯ್ ಅವರ ಜೊತೆಗೆ ಪ್ರಖ್ಯಾತ ನಟಿ ತ್ರಿಶಾ ಕೃಷ್ಣನ್ ಹಾಗೂ ಹಿರಿಯ ನಟಿ ರಾಧಿಕಾ ಕೂಡ ಹಾಜರಿದ್ದು, ರೇಸಿಂಗ್ ಎಂಜಾಯ್ ಮಾಡಿದ್ದಾರೆ. ಇವರೆಲ್ಲರೂ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಹಾಗೂ ವೀಡಿಯೊಗಳು ಈಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಶನಿವಾರ ನಾರ್ಥಾಂಪ್ಟನ್‌ಶೈರ್‌ನ ಮೋಡ ಕವಿದ ವಾತಾವರಣದಲ್ಲಿ ಅಜಿತ್ ಅವರ ರೋಮಾಂಚಕ ರೇಸಿಂಗ್‌ಗೆ ವಿಜಯ್ ಹಾಗೂ ತ್ರಿಶಾ ಸಾಕ್ಷಿಯಾದರು. ಅಭಿಮಾನಿಗಳಿಂದ ‘ತಳಪತಿ’ ಮತ್ತು ‘ತಲಾ’ ಎಂದು ಕರೆಸಿಕೊಳ್ಳುವ ಇಬ್ಬರು ನಾಯಕರ ಈ ಭೇಟಿ ಐಕಾನಿಕ್ ಕ್ಷಣವಾಗಿ ಹೊರಹೊಮ್ಮಿದೆ.
ಐಕಾನಿಕ್ ಸಿಲ್ವರ್‌ಸ್ಟೋನ್ ಸರ್ಕ್ಯೂಟ್: ಮುಖಾಮುಖಿಯಾದ ‘ತಳಪತಿ’ ಮತ್ತು ‘ತಲ’
ಪ್ರಸಿದ್ದ ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನ ಡಾಂಬರು ರಸ್ತೆಯಲ್ಲಿ ವಿಜಯ್ ಮತ್ತು ಅಜಿತ್ ಪರಸ್ಪರ ಎದುರು ಬದುರಾಗಿ ನಡೆದುಕೊಂಡು ಹೋದ ದೃಶ್ಯ ಪ್ರೇಕ್ಷಕರ ಗಮನ ಸೆಳೆಯಿತು. ವಿಜಯ್ ಕಂದು ಬಣ್ಣದ ಸ್ಟೈಲಿಶ್ ಜಾಕೆಟ್ ಧರಿಸಿದ್ದರೆ, ಅಜಿತ್ ಅಗ್ನಿ ನಿರೋಧಕ ರೇಸಿಂಗ್ ಸೂಟ್‌ನಲ್ಲಿದ್ದರು.
ವಿಜಯ್ ಪ್ರಸ್ತುತ ತಮಿಳುನಾಡಿಗೆ ಹೊಸ ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಲಂಡನ್‌ಗೆ 6 ದಿನಗಳ ಅಧಿಕೃತ ಭೇಟಿ ನೀಡಿದ್ದಾರೆ. ಈ ಭೇಟಿಯ ಸಮಯದಲ್ಲಿ ಅವರು ಕ್ರೀಡಾ ಕ್ಷೇತ್ರದ ಬೆಳವಣಿಗೆಯ ಬಗ್ಗೆಯೂ ಗಮನ ಹರಿಸಿದ್ದಾರೆ.
ತಮಿಳುನಾಡಿನಲ್ಲಿ ವಿಶ್ವ ದರ್ಜೆಯ ಮೋಟಾರ್ ಸ್ಪೋರ್ಟ್ಸ್ ಸಿಟಿ ಸ್ಥಾಪಿಸುವುದಾಗಿ ವಿಜಯ್ ಈ ಹಿಂದೆ ಘೋಷಿಸಿದ್ದರು. ಈ ಯೋಜನೆಗಾಗಿ ಕಾರು ರೇಸರ್ ಹಾಗೂ ನಟ ಅಜಿತ್ ಅವರು ವಿಜಯ್ ಅವರಿಗೆ ತಮ್ಮ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸಿದ್ದರು.
ಕ್ರೀಡಾಂಗಣದ ಮಾದರಿ ವೀಕ್ಷಣೆ: ಕ್ರೀಡಾ ಇಲಾಖೆಯ ಅಧಿಕಾರಿಗಳ ಭೇಟಿ
ಲಂಡನ್‌ನ ಸಿಲ್ವರ್‌ಸ್ಟೋನ್ ಮೋಟಾರ್ ರೇಸ್‌ಕೋರ್ಸ್‌ನಲ್ಲಿ ನಡೆದ ಈ ಕಾರು ರೇಸ್ ಅನ್ನು ವಿಜಯ್ ಅವರು ವೀಕ್ಷಿಸಿದ್ದು, ಅಜಿತ್ ಅದರಲ್ಲಿ ಸ್ಪರ್ಧಿಯಾಗಿದ್ದರು. ಈ ಕ್ಷಣವು ಇಬ್ಬರೂ ನಟರ ಅಭಿಮಾನಿಗಳಿಗೆ ಭಾರಿ ಖುಷಿ ನೀಡಿದೆ.
ತಮಿಳುನಾಡಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ನೂತನ ಕಾರು ರೇಸ್ ಕ್ರೀಡಾಂಗಣದ ಮಾದರಿಯನ್ನು ಪರಿಶೀಲಿಸಲು ವಿಜಯ್ ಹಾಗೂ ತಮಿಳುನಾಡು ಕ್ರೀಡಾ ಇಲಾಖೆಯ ಅಧಿಕಾರಿಗಳು ಈ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ದಶಕಗಳಿಂದ ಬೆಳ್ಳಿತೆರೆಯಲ್ಲಿ ಪೈಪೋಟಿ ನೀಡುತ್ತಿದ್ದ ಇಬ್ಬರು ದೊಡ್ಡ ನಟರು ಹಾಗೂ ನಟಿ ತ್ರಿಶಾ ವಿದೇಶಿ ಮಣ್ಣಿನಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಕಾಲಿವುಡ್ ಅಂಗಳದಲ್ಲಿ ಹೊಸ ಸಂಚಲನ ಮೂಡಿಸಿದೆ.




