ದರ್ಶನ್ ಅಕ್ಕನ ಮಗನ ‘ನೆಮ್ಮದಿ ಊಟ’ಕ್ಕೆ ದಚ್ಚು ವೈಫ್ ಎಂಟ್ರಿ

ದರ್ಶನ್ ತಾಯಿ ಮೀನಾ ತೂಗುದೀಪ ಭೇಟಿಯಾದ ವಿಜಯಲಕ್ಷ್ಮಿ

Photo Credits: @dcompanyrofficial (Instagram)

ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಕ್ಕನ ಮಗ ಚಂದು ಮೈಸೂರಿನಲ್ಲಿ ನೂತನವಾಗಿ ‘ನೆಮ್ಮದಿ ಊಟ’ ಎಂಬ ವಿಶಿಷ್ಟ ಹೆಸರಿನ ರೆಸ್ಟೋರೆಂಟ್ ಒಂದನ್ನು ಪ್ರಾರoಭಿಸಿದ್ದಾರೆ. ಈ ಹೆಸರು ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ನೆನಪಿಸುವಂತಿದೆ.

ಹಿಂದೆ ಮೈಸೂರಿನಲ್ಲಿ ನಡೆದ ಫುಡ್ ಫೆಸ್ಟಿವಲ್‌ನಲ್ಲಿಯೂ ಚಂದು ಅವರು ‘ನೆಮ್ಮದಿಯಾಗಿ ಊಟ ಮಾಡಿ’ ಎಂಬ ಶೀರ್ಷಿಕೆಯಲ್ಲಿ ಫುಡ್ ಸ್ಟಾಲ್ ಹಾಕಿ ಜನರ ಗಮನ ಸೆಳೆದಿದ್ದರು. ಇದೀಗ ಮೈಸೂರಿನ ವಿಜಯನಗರ 3ನೇ ಹಂತದ ಸಂಗಮ್ ಸರ್ಕಲ್ ಬಳಿ ಖಾಯಂ ರೆಸ್ಟೋರೆಂಟ್ ತೆರೆದಿದ್ದಾರೆ.

ಈ ನೂತನ ಉದ್ಯಮಕ್ಕೆ ಶುಭ ಹಾರೈಸಲು ಮತ್ತು ತಿಂಡಿ-ತಿನಿಸುಗಳ ರುಚಿ ಸವಿಯಲು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ದರ್ಶನ್ ತಾಯಿ ಮೀನಾ ತೂಗುದೀಪ ಭೇಟಿಯಾದ ವಿಜಯಲಕ್ಷ್ಮಿ

ರೆಸ್ಟೋರೆಂಟ್‌ಗೆ ಕಾರ್‌ನಲ್ಲಿ ಆಗಮಿಸಿದ ವಿಜಯಲಕ್ಷ್ಮಿ ದರ್ಶನ್ ಅವರು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರನ್ನು ಭೇಟಿಯಾಗಿ ಸುದೀರ್ಘ ಸಮಯ ಮಾತುಕತೆ ನಡೆಸಿದ್ದಾರೆ. ಜೊತೆಗೆ ಅಳಿಯ ಚಂದು ಅವರನ್ನು ಭೇಟಿಯಾಗಿ ಉದ್ಯಮಕ್ಕೆ ಪ್ರೀತಿಯ ಶುಭ ಹಾರೈಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ವಿವಿಧ ತಿಂಡಿ ತಿನಿಸುಗಳು ಮತ್ತು ಕಾಫಿ ರುಚಿ ಸವಿದಿರುವ ಅವರು, ರೆಸ್ಟೋರೆಂಟ್‌ನ ಆಹಾರದ ಗುಣಮಟ್ಟದ ಬಗ್ಗೆ ಅಳಿಯನಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಕುಟುಂಬದ ಸಮ್ಮಿಲನದ ಸುಂದರ ಕ್ಷಣಗಳ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ಈ ವೀಡಿಯೋವನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ವೀಡಿಯೋ ವೈರಲ್

ದರ್ಶನ್ ಅಭಿಮಾನಿಗಳ ಪ್ರಮುಖ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಈ ವೀಡಿಯೋ ಶೇರ್ ಆಗಿದ್ದು, ಹಿನ್ನೆಲೆಯಲ್ಲಿ ದರ್ಶನ್ ಅಭಿನಯದ ಹಳೆಯ ಹಿಟ್ ಚಿತ್ರದ ಹಾಡನ್ನು ಬಳಸಲಾಗಿದೆ.

2002ರಲ್ಲಿ ಬಿಡುಗಡೆಯಾಗಿದ್ದ ದರ್ಶನ್ ನಟನೆಯ ‘ಕಿಟ್ಟಿ’ ಚಿತ್ರದ ‘ನಕ್ಷತ್ರಾ ನಗ್ತಾವೆ’ ಎಂಬ ಮಧುರವಾದ ಹಾಡನ್ನು ಈ ವೀಡಿಯೋಗೆ ಜೋಡಿಸಲಾಗಿದ್ದು, ವಿಜಯಲಕ್ಷ್ಮಿ ಅವರ ಆಗಮನದ ಕ್ಷಣಕ್ಕೆ ಈ ಹಾಡು ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗಿದೆ.

ವಿಜಯಲಕ್ಷ್ಮಿ ಅವರು ಮೈಸೂರಿನಲ್ಲಿ ದರ್ಶನ್ ತಾಯಿಯೊಂದಿಗೆ ಅತ್ಯಂತ ಪ್ರೀತಿಯಿಂದ ಸಮಯ ಕಳೆದು ವಾಪಸ್ ತೆರಳಿದ ಈ ಸುಂದರ ಕ್ಷಣಗಳು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ.