ಮತದಾನದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮತ್ತು ಚುನಾವಣೋತ್ತರ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಇವಿಎಂ ಮತ ಎಣಿಕೆಗೆ ‘ಟೋಟಲೈಜರ್’ ಯಂತ್ರಗಳನ್ನು ಬಳಸುವ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಚುನಾವಣೆ ನಿರ್ವಹಣಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಒಕ್ಕೂಟ ಸರ್ಕಾರಕ್ಕೆ ಸೂಚಿಸಿದೆ.
ಸದ್ಯ ಜಾರಿಯಲ್ಲಿರುವ ವಿಧಾನದ ಪ್ರಕಾರ, ಪ್ರತಿಯೊಂದು ಮತಗಟ್ಟೆಯ (ಬೂತ್) ಇವಿಎಂ ಎಣಿಕೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಇದರಿಂದ ಯಾವ ನಿರ್ದಿಷ್ಟ ಪ್ರದೇಶ ಅಥವಾ ಬೂತ್ನಲ್ಲಿ ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಮತಗಳು ಬಂದಿವೆ ಎಂಬುದು ಸುಲಭವಾಗಿ ಬಹಿರಂಗವಾಗುತ್ತದೆ. ಇದು ಚುನಾವಣೆಯ ನಂತರ ನಿರ್ದಿಷ್ಟ ಮತದಾರರ ಮೇಲಿನ ದ್ವೇಷಸಾಧನೆ, ಬೆದರಿಕೆ ಹಾಗೂ ಹಿಂಸಾಚಾರಕ್ಕೆ ಕಾರಣವಾಗುತ್ತಿದೆ ಎಂಬುದು ಅರ್ಜಿದಾರರ ವಾದವಾಗಿದೆ.
ಈ ಸಮಸ್ಯೆಗೆ ಪರಿಹಾರವಾಗಿ ‘ಟೋಟಲೈಜರ್’ ತಂತ್ರಜ್ಞಾನವನ್ನು ಪ್ರತಿಪಾದಿಸಲಾಗಿದೆ. ಈ ಸಾಧನವು ಸುಮಾರು ೧೪ ಇವಿಎಂಗಳ ಮತಗಳನ್ನು ಒಟ್ಟಾಗಿ ಸೇರಿಸಿ ಎಣಿಕೆ ಮಾಡುತ್ತದೆ. ಇದರಿಂದ ಬೂತ್ವಾರೂ ಮತಗಳ ವಿವರ ಸಿಗದೆ, ಮತದಾರರ ಆಯ್ಕೆ ರಹಸ್ಯವಾಗಿ ಉಳಿಯುತ್ತದೆ.
ಚುನಾವಣಾ ಆಯೋಗ ಈ ವ್ಯವಸ್ಥೆಯ ಉದ್ದೇಶವನ್ನು ಒಪ್ಪಿದರೂ, ಪ್ರಸ್ತುತ ಕಾನೂನಿನ ಚೌಕಟ್ಟು ಇಲ್ಲದಿರುವುದು ಮತ್ತು ಫಾರ್ಮ್ ೧೭ಸಿ ಆಧಾರಿತ ಪರಿಶೀಲನಾ ಪ್ರಕ್ರಿಯೆಗೆ ಅಡಚಣೆಯಾಗಬಹುದು ಎಂಬ ತಾಂತ್ರಿಕ ಸವಾಲುಗಳನ್ನು ಕೋರ್ಟ್ ಗಮನಕ್ಕೆ ತಂದಿದೆ. ನಿಯಮಗಳಿಗೆ ಸೂಕ್ತ ಶಾಸನಬದ್ಧ ತಿದ್ದುಪಡಿ ತರುವ ಮೂಲಕ ಈ ಯಂತ್ರದ ಬಳಕೆಗೆ ಇರುವ ಸಾಧ್ಯತೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತೆ ದೇಶದ ಅತ್ಯುನ್ನತ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.




