ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಳ್ಳಾರಿ ಭಾಗದ ಬಿಜೆಪಿ ನಾಯಕರಾದ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು ವಿರುದ್ಧ ಅತ್ಯಂತ ಕಟುವಾಗಿ ಹರಿಹಾಯ್ದಿದ್ದಾರೆ.ಒಂದು ವೇಳೆ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಳ್ಳರ ಸಂಘವೇನಾದರೂ ಇದ್ದರೆ, ಅದಕ್ಕೆ ಅಧ್ಯಕ್ಷರೇ ಜನಾರ್ದನ ರೆಡ್ಡಿ ಮತ್ತು ಉಪಾಧ್ಯಕ್ಷರೇ ಶ್ರೀರಾಮುಲು ಆಗಿರುತ್ತಾರೆ ಎಂದು ವ್ಯಂಗ್ಯವಾಗಿ ಟೀಕಿಸಿದ ಅವರು, ರಾಜ್ಯದ ಸಂಪನ್ಮೂಲವನ್ನು ಇವರಿಬ್ಬರೂ ಸೇರಿ ಲೂಟಿ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಸಾಲು ಸಾಲು ಅಕ್ರಮಗಳು ನಡೆದಿವೆ ಎಂದು ಅವರು ಪಟ್ಟಿ ಮಾಡಿದರು. ಕೋವಿಡ್ ನಿರ್ವಹಣೆಯಲ್ಲಿನ ಅವ್ಯವಹಾರ, ಬೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ, ನೀಟ್ ಪರೀಕ್ಷೆಗೆ ಸಂಬಂಧಿಸಿದ ಅಕ್ರಮ, ದೇವರಾಜ್ ಟ್ರಕ್ ಟರ್ಮಿನಲ್ ಯೋಜನೆಯ ಹಗರಣ, ಕಿಯೋನಿಕ್ಸ್ ಸಂಸ್ಥೆಯಲ್ಲಿನ ಭ್ರಷ್ಟಾಚಾರ, ಪಿಎಸ್ಐ ನೇಮಕಾತಿಯ ನೂರಾರು ಕೋಟಿ ರೂಪಾಯಿ ಅಕ್ರಮ, ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲಿನ ಲೋಪ, ಬಿಟ್ ಕಾಯಿನ್ ಪ್ರಕರಣ ಹಾಗೂ ಕೆಕೆಆರ್ ಡಿಬಿ ಯಲ್ಲಿನ ಅಕ್ರಮಗಳು ಆ ಅವಧಿಯಲ್ಲಿ ನಡೆದಿವೆ ಎಂದು ಹೇಳಿದರು.
ಈ ಎಲ್ಲಾ ಪ್ರಕರಣಗಳು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಡಾ. ಸುಧಾಕರ್, ಜನಾರ್ದನ ರೆಡ್ಡಿ, ಆರ್ ಅಶೋಕ್ ಸೇರಿದಂತೆ ಹಲವು ಸಚಿವರು ಮತ್ತು ನಾಯಕರ ಕಾಲದಲ್ಲಿ ನಡೆದಿವೆ. ಮೊದಲು ಇದಕ್ಕೆಲ್ಲ ಉತ್ತರ ಕೊಡಲಿ, ಆಮೇಲೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲಿ. ಇಂತಹ ಲೂಟಿ ಮಾಡಿದವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ತಮ್ಮ ಸರ್ಕಾರದ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡ ಅವರು, ನಮ್ಮ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಒಡತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದೆ ಎಂದರು. ಬರದಂತಹ ಗಂಭೀರ ವಿಷಯದ ಬಗ್ಗೆ ಮಾತನಾಡಲು ಇವರಿಗೆ ಯೋಗ್ಯತೆ ಇಲ್ಲ, ಕೇವಲ ಡೋಲು ಹೊಡೆದು ಕುಣಿಯುವ ಕೆಲಸ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ನಾಯಕ, ಮಾಜಿ ಸಚಿವ ಶ್ರೀರಾಮುಲು ಅವರು ನಿನ್ನೆ ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಏಕವಚನದಲ್ಲಿ ಅಗೌರವವಾಗಿ ನಿಂದಿಸಿದ್ದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್ ಅವರು, ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ.




