Photo Credits: @drhamsalekha (Instagram)
ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಅವರ ಕಾಂಬಿನೇಷನ್ ಸೃಷ್ಟಿಸಿದ ಜಾದೂ ಪ್ರತಿಯೊಬ್ಬ ಸಿನೆಮಾ ಪ್ರಿಯರಿಗೂ ತಿಳಿದಿದೆ. ಇಬ್ಬರ ಜುಗಲ್ಬಂದಿಯಲ್ಲಿ ಮೂಡಿಬಂದ ಪ್ರತಿಯೊಂದು ಹಾಡುಗಳು ಕೂಡ ಸಾರ್ವಕಾಲಿಕ ಹಿಟ್ ಸಾಲಿಗೆ ಸೇರಿವೆ. ಆದರೆ, ಇವರಿಬ್ಬರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾಲಘಟ್ಟದಲ್ಲಿ ‘ಜಾಣ’ ಸಿನಿಮಾದ ಸೂಪರ್ ಹಿಟ್ ಹಾಡೊಂದರ ಕಂಪೋಸಿಂಗ್ ವೇಳೆ ನಡೆದ ಆಸಕ್ತಿಕರ ವಿಷಯವೊಂದು ಬೆಳಕಿಗೆ ಬಂದಿದೆ.
ನಿರ್ದೇಶಕ ಶಿವಮಣಿ ಬೇಡ ಎಂದಿದ್ದ ಟ್ಯೂನ್
‘ಜಾಣ’ ಚಿತ್ರದ ಸಂಗೀತ ಸಂಯೋಜನೆ ಸಮಯದಲ್ಲಿ ಹಂಸಲೇಖ ಅವರು ಮೊದಲಿಗೆ ಒಂದು ವಿಶಿಷ್ಟ ಟ್ಯೂನ್ ಅನ್ನು ಕಂಪೋಸ್ ಮಾಡಿ ತೋರಿಸುತ್ತಾರೆ. ಆದರೆ, ಈ ಚಿತ್ರದ ನಿರ್ದೇಶಕರಾಗಿದ್ದ ಶಿವಮಣಿ ಅವರಿಗೆ ಆ ಟ್ಯೂನ್ ಸರಿ ಎನಿಸುವುದಿಲ್ಲ.
ತಮಿಳು ಹಾಡೊಂದರ ರೆಫರೆನ್ಸ್ ನೀಡಿ, ‘ನನಗೆ ಇದೇ ರೀತಿಯ ಫೀಲ್ ಹಾಗೂ ಮೂಡ್ ನೀಡುವ ಹಾಡು ಬೇಕು’ ಎಂದು ಶಿವಮಣಿ ಪಟ್ಟು ಹಿಡಿಯುತ್ತಾರೆ. ಆದರೆ, ಹಂಸಲೇಖ ಅವರು ತಾವು ಮಾಡಿದ ಟ್ಯೂನ್ ಮೇಲಿದ್ದ ನಂಬಿಕೆಯಿಂದ, “ಇದು ತುಂಬಾ ಚೆನ್ನಾಗಿದೆ, ಎಸ್ಪಿಬಾಲಸುಬ್ರಹ್ಮಣ್ಯಂ ಅವರ ಧ್ವನಿಯಲ್ಲಿ ಬಂದಾಗ ಸಕತ್ ಔಟ್ಪುಟ್ ನೀಡುತ್ತದೆ, ಖಂಡಿತ ಹಿಟ್ ಆಗುತ್ತದೆ” ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೂ ನಿರ್ದೇಶಕ ಶಿವಮಣಿ ತಮ್ಮ ಜಡ್ಜ್ಮೆಂಟ್ನಿಂದ ಹಿಂದೆ ಸರಿಯುವುದಿಲ್ಲ.
ಅಖಾಡಕ್ಕೆ ಇಳಿದ ರವಿಚಂದ್ರನ್
ಈ ಗೊಂದಲದ ನಡುವೆ ರಂಗಪ್ರವೇಶ ಮಾಡುವ ರವಿಚಂದ್ರನ್ ಅವರು, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರ ನಡುವಿನ ವಿಚಾರವನ್ನು ವಿಚಾರಿಸುತ್ತಾರೆ. ಆಗ ಹಂಸಲೇಖ ಅವರು ತಾವು ಸಂಯೋಜಿಸಿದ್ದ ಪಲ್ಲವಿಯನ್ನು ರವಿಚಂದ್ರನ್ ಅವರಿಗೆ ನುಡಿಸಿ ತೋರಿಸುತ್ತಾರೆ.
ಟ್ಯೂನ್ ಕೇಳಿದ ತಕ್ಷಣವೇ ರವಿಚಂದ್ರನ್ ಅವರು, “ಶಿವಮಣಿ ಅವರೇ, ಈ ಟ್ಯೂನ್ ನಿಜಕ್ಕೂ ಅದ್ಭುತವಾಗಿದೆ. ಹಾಡು ಹೊರಬಂದಾಗ ಖಂಡಿತವಾಗಿಯೂ ಸೂಪರ್ ಹಿಟ್ ಆಗುತ್ತದೆ” ಎಂದು ಹಂಸಲೇಖ ಅವರ ಪರವಾಗಿ ನಿಲ್ಲುತ್ತಾರೆ. ರವಿಚಂದ್ರನ್ ಅವರ ಜಡ್ಜ್ಮೆಂಟ್ ಕೂಡ ಹಂಸಲೇಖ ಅವರ ನಿರ್ಧಾರಕ್ಕೆ ಪೂರಕವಾಗಿದ್ದರಿಂದ ಆ ಟ್ಯೂನ್ ಫೈನಲ್ ಆಗುತ್ತದೆ.
ಇಂದಿಗೂ ಎವರ್ಗ್ರೀನ್ ‘ಪ್ರೇಮಲೋಕದ ಪಾರಿಜಾತವೇ’
ಆಗ ನಿರ್ದೇಶಕ ಶಿವಮಣಿ ಬೇಡ ಎಂದಿದ್ದ, ರವಿಚಂದ್ರನ್ ಅವರ ಬೆಂಬಲದಿಂದ ಓಕೆ ಆದ ಅದೇ ಟ್ಯೂನ್, ಮುಂದೆ ‘ಪ್ರೇಮಲೋಕದ ಪಾರಿಜಾತವೇ ಯಾಕೆ ನೀನು ಎದೆಯ ತುಂಬಿದೆ’ ಎಂಬ ಸಾರ್ವಕಾಲಿಕ ಹಿಟ್ ಗೀತೆಯಾಗಿ ಹೊರಹೊಮ್ಮುತ್ತದೆ.
ಅಷ್ಟೇ ಅಲ್ಲದೆ, ಈ ಹಾಡಿನ ಚಿತ್ರೀಕರಣಕ್ಕಾಗಿ ಆ ಕಾಲದಲ್ಲೇ ಟ್ರೆಂಡಿಂಗ್ನಲ್ಲಿದ್ದ ಕಾಸ್ಟ್ಲಿ ಕಾರುಗಳನ್ನು ತರಿಸಿ ಅದ್ಧೂರಿಯಾಗಿ ಶೂಟಿಂಗ್ ಮಾಡಲಾಗಿತ್ತು. ಹಂಸಲೇಖ ಅವರ ಜಡ್ಜ್ಮೆಂಟ್ ಹಾಗೂ ರವಿಚಂದ್ರನ್ ಅವರ ಭರವಸೆ ಸುಳ್ಳಾಗದೇ ಈ ಹಾಡು ಇಂದಿಗೂ ಪ್ರೇಕ್ಷಕರ ನೆಚ್ಚಿನ ಎವರ್ಗ್ರೀನ್ ಸಾಂಗ್ ಆಗಿ ಉಳಿದುಕೊಂಡಿದೆ.




