ORACLE: ಐಟಿ ಕ್ಷೇತ್ರದಲ್ಲಿ ಬಿರುಗಾಳಿ; ಅರಾಕಲ್, ಮೈಕ್ರೋಸಾಫ್ಟ್‌ನಿಂದ ಸಾವಿರಾರು ಲೇ ಆಫ್

ಅರಾಕಲ್, ಮೈಕ್ರೋಸಾಫ್ಟ್ನಿಂದ ಸಾವಿರಾರು ಲೇ ಆಫ್

Photo Credits: @aplasticplant (Instagram)

ಜಾಗತಿಕ ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಅರಾಕಲ್ ಮತ್ತು ಮೈಕ್ರೋಸಾಫ್ಟ್ ಕೈಗೊಂಡಿರುವ ಸರಣಿ ಉದ್ಯೋಗ ಕಡಿತ ಕ್ರಮಗಳು ಭಾರತೀಯ ಐಟಿ ವಲಯದಲ್ಲಿ ತೀವ್ರ ಆತಂಕ ಹಾಗೂ ಅಭದ್ರತೆಯನ್ನು ಸೃಷ್ಟಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಏರಿಳಿತ ಹಾಗೂ ಸಂಸ್ಥೆಗಳ ಆಂತರಿಕ ವೆಚ್ಚ ಕಡಿತ ನಿರ್ಧಾರಗಳಿಂದಾಗಿ, ಭಾರತದಲ್ಲಿ ನೆಲೆಸಿರುವ ಸಾವಿರಾರು ಸಾಫ್ಟ್‌ವೇರ್ ಟೆಕ್ಕಿಗಳ ಉದ್ಯೋಗಕ್ಕೆ ಈಗ ನೇರ ಕತ್ತರಿ ಬೀಳುವ ಭೀಕರ ಸಾಧ್ಯತೆ ಎದುರಾಗಿದೆ.

ಅರಾಕಲ್ ನಲ್ಲಿ ಶೇ. 10 ರಷ್ಟು ಸಿಬ್ಬಂದಿ ಲೇ ಆಫ್ ಭೀತಿ

ಅರಾಕಲ್ ಸಂಸ್ಥೆಯು ತನ್ನ ಎರಡನೇ ತ್ರೈಮಾಸಿಕದ ಆರಂಭದ ವೇಳೆಗೆ ವೆಚ್ಚ ನಿರ್ವಹಣೆ ಮಾಡುವ ಸ್ಪಷ್ಟ ಗುರಿಯನ್ನು ಹೊಂದಿತ್ತು. ಇದರ ಭಾಗವಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಒಟ್ಟು 30,000 ಉದ್ಯೋಗಿಗಳ ಪೈಕಿ ಸುಮಾರು 2,000 ದಿಂದ 3,000 ಮಂದಿಯನ್ನು (ಅಂದರೆ ಒಟ್ಟು ಸಿಬ್ಬಂದಿಯ ಶೇ. 10 ರಷ್ಟು ಭಾಗ) ಕೆಲಸದಿಂದ ಸಂಪೂರ್ಣವಾಗಿ ತೆಗೆದುಹಾಕಲು ಸಜ್ಜಾಗಿದೆ ಎನ್ನಲಾಗಿದೆ.

ಈ ಹಿಂದೆ ಕಂಪನಿಯಲ್ಲಿ ನಡೆದ ಲೇ-ಆಫ್‌ಗಳಲ್ಲಿ ಉದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ, ಬೆಳಗಿನ 6 ಗಂಟೆಗೆ ಸೈಲೆಂಟ್ ಆಗಿ ಇಮೇಲ್ ರವಾನಿಸಿ ತಕ್ಷಣವೇ ಸಿಸ್ಟಮ್ ಆಕ್ಸೆಸ್ ರದ್ದುಗೊಳಿಸಲಾಗಿತ್ತು. ಈಗಲೂ ಅದೇ ಮಾದರಿಯ ದಿಢೀರ್ ಪಿಂಕ್ ಸ್ಲಿಪ್ ಇಮೇಲ್ ಬರಬಹುದು ಎಂಬ ಆತಂಕದಲ್ಲಿ ನೌಕರರಿದ್ದಾರೆ.

ಎಐ (AI) ಹಾಗೂ ಕ್ಲೌಡ್ ಹೂಡಿಕೆಗೆ ಒತ್ತು

ಕಳೆದ ಒಂದು ವರ್ಷದಲ್ಲಿ ಅರಾಕಲ್ ಸಂಸ್ಥೆಯು ಜಾಗತಿಕವಾಗಿ 21,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಹಾಗೂ ಕ್ಲೌಡ್ ಡಾಟಾ ಸೆಂಟರ್‌ ಮೂಲಸೌಕರ್ಯ ಅಭಿವೃದ್ಧಿಗೆ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆ ಮಾಡಲು ಕಂಪನಿಯು ಯೋಜಿಸಿದ್ದು, ಈ ಬೃಹತ್ ವೆಚ್ಚ ಸರಿದೂಗಿಸಲು ಉದ್ಯೋಗ ಕಡಿತದ ಹಾದಿ ಹಿಡಿದಿದೆ.

ಮೈಕ್ರೋಸಾಫ್ಟ್‌ನಲ್ಲಿ PIP ನೋಟೀಸ್ ಆತಂಕ

ಮತ್ತೊಂದೆಡೆ, ಮೈಕ್ರೋಸಾಫ್ಟ್ ಸಂಸ್ಥೆಯು ಭಾರತದಲ್ಲಿರುವ ತನ್ನ ಒಟ್ಟು ಸಿಬ್ಬಂದಿ ಪೈಕಿ ಶೇ. 2 ರಷ್ಟು, ಅಂದರೆ ಸುಮಾರು 400 ರಿಂದ 500 ಉದ್ಯೋಗಿಗಳನ್ನು ‘ಪರ್ಫಾರ್ಮೆನ್ಸ್ ಇಂಪ್ರೂವ್‌ಮೆಂಟ್ ಪ್ಲಾನ್’ (PIP) ವ್ಯಾಪ್ತಿಗೆ ತಂದಿದೆ. ಇದು ತಕ್ಷಣದ ಲೇ-ಆಫ್ ಅಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಉದ್ಯೋಗ ಕಳೆದುಕೊಳ್ಳಲು ಕಾರಣವಾಗಬಹುದು ಎಂಬ ಭಯ ಸಿಬ್ಬಂದಿಯನ್ನು ಕಾಡುತ್ತಿದೆ.