ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ದುನಿಯಾ ವಿಜಯ್ ಪುತ್ರ ಇಷ್ಟೊತ್ತಿಗಾಗಲೇ ಸಿನಿಮಾದ ನಟಿಸಬೇಕಿತ್ತು. ಆದರೆ, ದುನಿಯಾ ವಿಜಯ್ ಅವರೇ ಕೊನೆಯ ಕ್ಷಣದಲ್ಲಿ ಈಗಲೇ ಮಗ ಸಿನಿಮಾ ಮಾಡೋದು ಬೇಡ ಎಂದು ನಿರ್ಧರಿಸಿದ್ದರು. ಶಿಕ್ಷಣ ಮುಗಿಸಿದ ಬಳಿಕ ಸಿನಿಮಾ ಕರೆದುಕೊಂಡು ಬರುವ ಆಲೋಚನೆ ಮಾಡಿದ್ದರು. ಹೀಗಾಗಿ ಮಗನಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ಹರಿಸಿದ್ದರು. ಆದ್ರೀಗ ಪುತ್ರ ಸಾಮ್ರಾಟ್ ವಿಜಯ್ ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗೆ ಹಲ್ಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಆರ್‌ವಿ ಕಾಲೇಜ್‌ನಲ್ಲಿ ಓದುತ್ತಿದ್ದು, ಇದೇ ಕಾಲೇಜಿನ ಸಹಪಾಠಿ ಮನೀಶ್ ಎಂಬುವವರ ಮೇಲೆ ಹಲ್ಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಸಹಪಾಠಿ ಮನೀಶ್ ಮೇಲೆ ಹಲ್ಲೆಯಾಗಿದ್ದು, ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಅವರೇ ಕಾರಣವೆಂದು ಗಂಭೀರ ಆರೋಪ ಮಾಡಿದ್ದಾರೆ. ಮನೀಶ್ ಪರ ವಕೀಲರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಾಮ್ರಾಟ್ ವಿರುದ್ಧ ದೂರು ನೀಡುವುದಕ್ಕೆ ತೀರ್ಮಾನಿಸಿದ್ದಾರೆ.
ಏನಿದು ಘಟನೆ?
ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಹಾಗೂ ಮನೀಶ್ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು. ಮಾಧ್ಯಮಗಳಿಗೆ ಮನೀಶ್ ಪ್ರತಿಕ್ರಿಯೆ ನೀಡಿದಂತೆ ಈ ಹಿಂದೆ ಕೂಡ ಹೀಗೆ ಗಲಾಟೆ ನಡೆದಿತ್ತು. ಬಳಿಕ ಇಬ್ಬರ ನಡುವೆ ಸಂಧಾನ ನಡೆದಿತ್ತು. ಆದರೆ, ನಿನ್ನೆ ರಾತ್ರಿ (ಆಗಸ್ಟ್ 31) ದುನಿಯಾ ವಿಜಯ್ ಪುತ್ರ ಹೋಗುತ್ತಿದ್ದ ಕಾರನ್ನು ಮನೀಶ್ ಮತ್ತು ಅವರ ಗೆಳೆಯರು ಓವರ್ ಟೇಕ್ ಮಾಡಿದ್ದಾರೆ. ಇದರಿಂದ ಸಾಮ್ರಾಟ್ ರೊಚ್ಚಿಗೆದ್ದಿದ್ದರು.
ಮನೀಶ್ ಗೆಳೆಯನಿಗೆ ರಾತ್ರಿಯಿಡಿ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಬೆಳಗ್ಗೆ ಸುಮಾರು 11 ರಿಂದ 11.30ರ ಹೊತ್ತಿಗೆ ಕಾಲೇಜಿಗೆ ಬಂದಿದ್ದ ಮನೀಶ್‌ನನ್ನು ಟಿಂಟ್ ಹಾಕಿದ್ದ ಸಫಾರಿ ಕಾರಿನಲ್ಲಿ ಕೂರಿಸಿಕೊಂಡು ಸಾಮ್ರಾಟ್ ಹಾಗೂ ಅವರ ಗ್ಯಾಂಗ್ ಹಲ್ಲೆ ಮಾಡಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಹೀಗೆ ಮತ್ತೆ ಹಲ್ಲೆ ಮಾಡುವುದಾಗಿ ಹೇಳಿದ್ದರು ಎಂದು ಮನೀಶ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.
“ಓವರ್ ಟೇಕ್ ಮಾಡುತ್ತೀಯಾ ಅಂತ ಹೊಡೆದರು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ಮತ್ತೆ ಹೀಗೆ ಪ್ಯಾಕ್ ಮಾಡಿಕೊಂಡು ಹೊಡೆಯುತ್ತೇನೆ. ಪೋಷಕರಿಗೆ ಹೇಳಿದರೂ ಹೀಗೆ ಹೊಡೀತಿನಿ. ಹೇಗಿದ್ದರೂ ಇದು ನಮ್ಮದೇ ಕಾಲೇಜ್ ನೋಡಿಕೊಳ್ತೀನಿ” ಎಂದು ಸಾಮ್ರಾಟ್ ಬೆದರಿಕೆ ಹಾಕಿದ್ದಾಗಿ ಹಲ್ಲೆಗೆ ಒಳಗಾದ ಸಾಮ್ರಾಟ್ ಸಹಪಾಠಿ ಮನೀಶ್ ಫಸ್ಟ್ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೇ ಮನೀಶ್ ಪರ ವಕೀಲರು ಕೂಡ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ದುನಿಯಾ ವಿಜಯ್ ಅವರ ಮಗ ಹಾಗೂ ಅವರ ಗ್ಯಾಂಗ್ ಸೇರಿಕೊಂಡು ಹೊಡೆದಿದ್ದಾರೆ ಅಂತ ಸುದ್ದಿ ಬಂತು. ಇವರು ಒಂದೇ ಕಾಲೇಜಿನಲ್ಲಿ ಸಹಪಾಠಿಯಾಗಿರುತ್ತಾರೆ. ರಾತ್ರಿ ಮನೀಶ್ ಓವರ್ ಟೇಕ್ ಮಾಡಿದ ಅನ್ನೋ ವಿಷಯವನ್ನು ಇಟ್ಟುಕೊಂಡು ರಾತ್ರಿಯಿಡಿಯೆಲ್ಲ ಮನೀಶ್ ಸ್ನೇಹಿತನಿಗೆ ಫೋನ್ ಮಾಡಿದ್ದಾರಂತೆ. ಬೆಳಗ್ಗೆ ಕಾಲೇಜಿಗೆ ಬಂದಿರುವ ಸಂದರ್ಭದಲ್ಲಿ 11 ರಿಂದ 11.30ರ ಸುಮಾರಿಗೆ ಟಿಂಟ್ ಹಾಕಿರೋ ಸಫಾರಿ ಕಾರಿನಲ್ಲಿ ಬಂದು ಮನೀಶ್ ಅವರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಹೊಡೆದಿದ್ದಾರೆ” ಎಂದು ಮನೀಶ್ ಪರ ವಕೀಲರು ಫಸ್ಟ್ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಹಲ್ಲೆ ಮಾಡಿದವರ ವಿರುದ್ಧ ದೂರನ್ನು ದಾಖಲು ಮಾಡಿಸಿ, ಮನೀಶ್‌ಗೆ ಟ್ರೀಟ್ಮೆಂಟ್ ಕೊಡಿಸುವುದಾಗಿ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.




