Darshan: ವಿವಾದದ ಬಳಿಕ ದರ್ಶನ್ ಭೇಟಿ ಮಾಡಿದ ಜಮೀರ್ ಪುತ್ರ ಝೈದ್ ಖಾನ್; ಮಾಫಿ ಸಾಕ್ಷಿ ಎಫೆಕ್ಟ್ ಹೇಗಿದೆ?

After misunderstanding Zaid Khan met Darshan in jail with Vijayalakshmi and MLA Darshan Puttannaiah.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್ ಈ ಕೇಸ್‌ಗೆ ಹೊರ ಬರುವುದಕ್ಕೆ ಶತ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದೊಂದು ಹೆಜ್ಜೆ ಮುಂದಿಟ್ಟಾಗಲೂ ದರ್ಶನ್‌ಗೆ ಹೊಸ ಸಂಕಷ್ಟಗಳು ಎದುರಾಗುತ್ತಿದೆ. ಅದರಲ್ಲಿ ಪ್ರದೋಷ್ ಅವರ ಮಾಫಿ ಸಾಕ್ಷಿ ಕೂಡ ಒಂದು.

ದರ್ಶನ್ ವಿರುದ್ಧ ಮಾಫಿ ಸಾಕ್ಷಿ ಹೇಳುವುದಕ್ಕೆ ಪ್ರದೋಷ್ ಸಲ್ಲಿಸಿದ ಅರ್ಜಿಯನ್ನು ಕೆಳ ನ್ಯಾಯಾಲಯ ಸ್ವೀಕರಿಸಿದೆ. ಇತ್ತ ಎಸ್‌ಪಿಪಿ ಪ್ರಸನ್ನ ಪಿ. ಕುಮಾರ್ ಕೂಡ ಒಪ್ಪಿಗೆ ಮೆಮೊ ಸಲ್ಲಿಸಿದ್ದರು. ಪ್ರದೋಷ್ ಕಾನೂನು ನಿಯಮ ಪಾಲಿಸಿ, ಸಂಪೂರ್ಣ ತಪ್ಪೊಪ್ಪಿಗೆ ನೀಡಿದರೆ ಮಾತ್ರ ಕ್ಷಮಾದಾನ ಮಾಡಬಹುದೆಂದು ಹೇಳಿದ್ದಾರೆ. ಹೀಗಾಗಿ ದರ್ಶನ್‌ಗೆ ಈ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಈ ವೇಳೆ ಪ್ರದೋಷ್ ಮಾಫಿ ಸಾಕ್ಷಿಯನ್ನು ತಕ್ಷಣವೇ ವಿಚಾರಣೆ ಮಾಡಬೇಕು ಎಂದು ಮಾಡಿದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿ ಬುಧವಾರಕ್ಕೆ ಮುಂದೂಡಲಾಗಿದೆ. ಈ ವೇಳೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಾಫಿ ಸಾಕ್ಷಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಇನ್ನಿಬ್ಬರು 8ನೇ ಆರೋಪಿ ರವಿಶಂಕರ್ ಹಾಗೂ 10ನೇ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಗೆ ಸಿದ್ಧರಿದ್ದಾರೆಂದು ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ದರ್ಶನ್ ಪರ ವಕೀಲರಾದ ಹಶ್ಮತ್ ಪಾಷಾ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಮೋದ್ ಮಾಫಿ ಸಾಕ್ಷಿಗೆ ಅನುಮತಿ ಸಿಗುತ್ತಿದ್ದಂತೆ ದರ್ಶನ್ ಬಳಗದಲ್ಲಿ ಅಲ್ಲೋಲ ಕಲ್ಲೋಲ ಆದಂತೆ ಕಾಣುತ್ತಿದೆ. ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಝೈದ್ ಖಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದಾರೆಂಬ ವರದಿ ಮಾಡಲಾಗಿದೆ. ಒಂದು ಕಾಲದಲ್ಲಿ ದರ್ಶನ್‌ಗೆ ಇಬ್ಬರೂ ಆತ್ಮೀಯರಾಗಿದ್ದರು. ಇವರೊಂದಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಇದ್ದರು ಎನ್ನಲಾಗಿದೆ.

ದಿಢೀರನೇ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಝೈದ್ ಖಾನ್ ಜೈಲಿಗೆ ಭೇಟಿ ಕೊಟ್ಟಿದ್ದು, ಅವರ ಆಪ್ತ ವಲಯ ಆತಂಕದ ಕಣ್ಣುಗಳಿಂದ ನೋಡುತ್ತಿದೆ. ಇನ್ನು ‘ಕಲ್ಟ್’ ಸಿನಿಮಾ ವೇಳೆ ಝೈದ್ ಖಾನ್ ಕೊಟ್ಟ ಹೇಳಿಕೆಗಳು ದರ್ಶನ್ ಆಪ್ತರ ಕಣ್ಣುಗಳು ಕೆಂಪಾಗುವಂತೆ ಮಾಡಿತ್ತು. ಅಲ್ಲಿಂದ ದರ್ಶನ್ ಆಪ್ತರು ಹಾಗೂ ಝೈದ್ ಖಾನ್ ನಡುವೆ ವೈಮನಸ್ಸು ಮೂಡಿತ್ತು. ಧನ್ವೀರ್ ಹಾಗೂ ಝೈದ್ ಖಾನ್ ನಡುವೆ ಇದೇ ವಿಚಾರಕ್ಕೆ ಪರೋಕ್ಷವಾಗಿ ವಾಗ್ಯುದ್ಧ ನಡೆದಿತ್ತು.

ಇಷ್ಟೆಲ್ಲ ನಡೆದಿದ್ದರೂ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಅಚ್ಚರಿ ಮೂಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ವಿಜಯಲಕ್ಷ್ಮಿ ಅವರೇ ಝೈದ್ ಖಾನ್ ಹಾಗೂ ದರ್ಶನ್ ಅವರನ್ನು ಒಟ್ಟಿಗೆ ಸೇರಿಸಿದ್ದು, ಜೊತೆಗೆ ದರ್ಶನ್ ಪುಟ್ಟಣ್ಣಯ್ಯ ಅವರ ನೆರವು ಕೋರಿರಬಹುದೆಂಬ ಮಾತು ಕೇಳಿ ಬರುತ್ತಿದೆ. ಸದ್ಯ ದರ್ಶನ್ ಪುಟ್ಟಣ್ಣಯ್ಯ ಹಾಗೂ ಝೈದ್ ಖಾನ್ ಅವರ ಭೇಟಿ ದರ್ಶನ್ ಮುಂದಿನ ನಡೆಗೆ ಮುನ್ನುಡಿ ಬರೆದಿರುವ ಸಾಧ್ಯತೆಯಿದೆ.