ಕಿರ್ಗಿಸ್ತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ದೇಶದ ಜನತೆಗೆ ನೇರ ಕರೆ ನೀಡಿದ್ದಾರೆ. ಅನಗತ್ಯ ಚಿನ್ನದ ಖರೀದಿಯನ್ನು ಮುಂದೂಡಿ, ವಿದೇಶ ಪ್ರವಾಸ ಮತ್ತು ವಿದೇಶದಲ್ಲಿ ಮದುವೆ ಸಮಾರಂಭಗಳನ್ನು ಕೈಬಿಡಿ, ಬದಲಿಗೆ ಸ್ವದೇಶಿ ವಸ್ತು ಮತ್ತು ಸೇವೆಗಳಿಗೆ ಆದ್ಯತೆ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ಜಾಗತಿಕ ಆರ್ಥಿಕ ಸಂಕಷ್ಟ ಮತ್ತು ಯುದ್ಧದ ಪರಿಸ್ಥಿತಿಯ ನಡುವೆಯೂ ಭಾರತ ಜೂನ್ ತ್ರೈಮಾಸಿಕದಲ್ಲಿ ಶೇ 7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿರುವುದನ್ನು ಪ್ರಧಾನಿ ಶ್ಲಾಘಿಸಿದ್ದು, ಇದು ದೇಶದ ಜನರ ಶ್ರಮ ಮತ್ತು ದೃಢ ನಿರ್ಧಾರಗಳ ಫಲ ಎಂದು ಅಭಿನಂದಿಸಿದ್ದಾರೆ.
ಕೋವಿಡ್ ನಂತರ ಜಗತ್ತು ಇನ್ನೂ ಸ್ಥಿರತೆ ಕಂಡಿಲ್ಲ, ಪೂರೈಕೆ ವ್ಯವಸ್ಥೆಗಳು ಹದಗೆಟ್ಟಿವೆ, ದೇಶಗಳ ನಡುವೆ ಯುದ್ಧದ ವಾತಾವರಣ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಕಠಿಣ ಹೊತ್ತಿನಲ್ಲೂ ಭಾರತದ ಬೆಳವಣಿಗೆ ಹೆಮ್ಮೆಯ ವಿಷಯ ಎಂದು ಹೇಳಿರುವ ಮೋದಿ, ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ದೇಶೀಯ ಪ್ರವಾಸೋದ್ಯಮವನ್ನು ಬೆಳೆಸಬೇಕು ಎಂದು ಸೂಚಿಸಿದ್ದಾರೆ. ವಿದೇಶಕ್ಕೆ ಪ್ರವಾಸ ಹೋಗುವ ಬದಲು ಭಾರತದೊಳಗಿನ ತಾಣಗಳಿಗೆ ಭೇಟಿ ನೀಡಬೇಕು, ಶ್ರೀಮಂತರು ವಿದೇಶದಲ್ಲಿ ಮದುವೆ ಮಾಡುವ ಪದ್ಧತಿ ಬಿಟ್ಟು ವೆಡ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.
ಹೌದು, ಆಡಂಬರದ ಚಿನ್ನದ ಖರೀದಿಯನ್ನು ನಿಯಂತ್ರಿಸಿದರೆ ವಿದೇಶಿ ವಿನಿಮಯ ಸಂಗ್ರಹದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ಮೋದಿ ಸಲಹೆಯಾಗಿದೆ. ಈ ಹಿಂದೆ ಮೇ ತಿಂಗಳಲ್ಲಿ ಸಾರ್ವಜನಿಕ ಸಾರಿಗೆ ಬಳಕೆ, ಇಂಧನ ಉಳಿತಾಯ ಮತ್ತು ಮನೆಯಿಂದಲೇ ಕೆಲಸಕ್ಕೆ ಆದ್ಯತೆ ನೀಡುವಂತೆ ಮೋದಿ ಕರೆ ನೀಡಿದ್ದರು.
ಈ ಕರೆಯ ಹಿಂದೆ ಆರ್ಥಿಕ ಲೆಕ್ಕಾಚಾರ ಸ್ಪಷ್ಟವಾಗಿದೆ. ಭಾರತ ಪ್ರತಿ ವರ್ಷ ಅಪಾರ ಪ್ರಮಾಣದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ, ಇದು ವ್ಯಾಪಾರ ಕೊರತೆ ಮತ್ತು ಡಾಲರ್ ಮೇಲಿನ ಅವಲಂಬನೆಯನ್ನು ಹೆಚ್ಚಿಸುತ್ತದೆ. ವಿದೇಶ ಪ್ರವಾಸ ಮತ್ತು ಡೆಸ್ಟಿನೇಷನ್ ವೆಡ್ಡಿಂಗ್ ಗಳಿಂದ ಸಾವಿರಾರು ಕೋಟಿ ರೂಪಾಯಿ ದೇಶದಿಂದ ಹೊರಹೋಗುತ್ತದೆ. ಅದೇ ಹಣ ದೇಶದೊಳಗೆ ಉಳಿದರೆ ಹೋಟೆಲ್, ಸಾರಿಗೆ, ಸ್ಥಳೀಯ ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಗಳಿಗೆ ನೇರ ಉದ್ಯೋಗ ಸೃಷ್ಟಿಯಾಗುತ್ತದೆ.
140 ಕೋಟಿ ಜನರ ಒಗ್ಗಟ್ಟೇ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿರುವ ಪ್ರಧಾನಿ, ಸರಿಯಾದ ನೀತಿ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಭಾರತ ಸಾಗುತ್ತಿದೆ ಎಂದಿದ್ದಾರೆ. ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ವಿಕಸಿತ ಭಾರತ ನಿರ್ಮಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಪ್ರತಿಪಾದಿಸಿದ್ದಾರೆ. ಜಾಗತಿಕ ಅಸ್ಥಿರತೆಯ ನಡುವೆ ಆಂತರಿಕ ಬೇಡಿಕೆಯನ್ನು ಬಲಪಡಿಸುವ ಮೂಲಕ ಆರ್ಥಿಕ ರಕ್ಷಣೆ ಪಡೆಯುವ ಕಾರ್ಯತಂತ್ರವಾಗಿ ಈ ಸ್ವದೇಶಿ ಕರೆಯನ್ನು ನೋಡಬೇಕಿದೆ.




