Photo Credits: @iam_yashvanth (Instagram)
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ನಂದಗೋಕುಲ’ ಧಾರಾವಾಹಿಯಲ್ಲಿ ‘ಕೇಶವ’ ಎಂಬ ಮುಖ್ಯ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ಯಶ್ವಂತ್ ಕುಮಾರ್ ಎಸ್‌ಎಸ್ ಅವರು ದಿಢೀರನೆ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ.
ಧಾರಾವಾಹಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಕೇಶವ ಪಾತ್ರವೂ ಸಕತ್ ಗಮನ ಸೆಳೆಯುತ್ತಿದ್ದ ಸಂದರ್ಭದಲ್ಲೇ ಯಶ್ವಂತ್ ಸೀರಿಯಲ್‌ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.
ಇದೀಗ ಕೇಶವ ಪಾತ್ರಕ್ಕೆ ಹೊಸದಾಗಿ ಯಾರು ಎಂಟ್ರಿ ನೀಡುತ್ತಿದ್ದಾರೆ, ಅಭಿಮಾನಿಗಳು ಹೊಸ ನಟನನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Photo Credits: @iam_yashvanth (Instagram)
350 ಸಂಚಿಕೆಗಳ ಯಶಸ್ವಿ ಪಯಣಕ್ಕೆ ನಟ ಯಶ್ವಂತ್ ಭಾವುಕ ವಿದಾಯ
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಭಾವುಕ ಪತ್ರವನ್ನು ಹಂಚಿಕೊಂಡಿರುವ ಯಶ್ವಂತ್ ಕುಮಾರ್ ತಮ್ಮ ಮನದ ಮಾತನ್ನು ವ್ಯಕ್ತಪಡಿಸಿದ್ದಾರೆ. ‘ನನ್ನ ಪಯಣದ ಒಂದು ವಿಶೇಷ ಅಧ್ಯಾಯ ಮುಗಿಯುತ್ತಿದೆ. ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ಕೇಶವ ಪಾತ್ರಕ್ಕೆ ವಿದಾಯ ಹೇಳುತ್ತಿದ್ದೇನೆ’ ಎಂದಿದ್ದಾರೆ.
ಸುಮಾರು 350 ಸಂಚಿಕೆಗಳ ಕಾಲ ಪ್ರೇಕ್ಷಕರು ಕೇಶವನನ್ನು ತಮ್ಮ ಮನೆಯ ಮಗನಂತೆ ಸ್ವೀಕರಿಸಿ, ಊಹಿಸಲಾಗದಷ್ಟು ಪ್ರೀತಿ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಅಪಾರ ಪ್ರೀತಿ ಮತ್ತು ಬೆಂಬಲವನ್ನು ತಮ್ಮ ಜೀವನದುದ್ದಕ್ಕೂ ಶಾಶ್ವತವಾಗಿ ಕೊಂಡೊಯ್ಯುವುದಾಗಿ ಅವರು ತಿಳಿಸಿದ್ದಾರೆ.
ನಂದಗೋಕುಲ ಧಾರಾವಾಹಿ ತೊರೆಯಲು ಅಸಲಿ ಕಾರಣವೇನು?
ಧಾರಾವಾಹಿ ಬಿಡುವುದು ಸುಲಭದ ನಿರ್ಧಾರವಾಗಿರಲಿಲ್ಲ ಎಂದು ಯಶ್ವಂತ್ ಬರೆದುಕೊಂಡಿದ್ದಾರೆ. ಪಾತ್ರದ ಬೆಳವಣಿಗೆ ಹಾಗೂ ಕೆಲವು ವೃತ್ತಿಪರ ಅಂಶಗಳನ್ನು ಪರಿಗಣಿಸಿದ ನಂತರವೇ ಮುಂದಿನ ಅಧ್ಯಾಯಕ್ಕೆ ಹೆಜ್ಜೆ ಇಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ತಮ್ಮ ಜೊತೆ ನಿಂತ ಸಹನಟರು, ನಿರ್ದೇಶಕರು ಹಾಗೂ ಇಡೀ ಧಾರಾವಾಹಿ ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಪ್ರೇಕ್ಷಕರು ನೀಡಿದ ಮೆಚ್ಚುಗೆ ಮತ್ತು ಪ್ರತಿಯೊಂದು ಟೀಕೆಯೂ ತಮ್ಮ ನಟನಾ ಪಯಣದ ಬೆಳವಣಿಗೆಗೆ ಮುಖ್ಯ ಕಾರಣ ಎಂದಿದ್ದಾರೆ.

Photo Credits: @iam_yashvanth (Instagram)
‘ಸಮುದ್ರ ಮಂಥನ’ ಸಿನಿಮಾ ಮೂಲಕ ಬೆಳ್ಳಿಪರದೆಗೆ ಯಶ್ವಂತ್ ಎಂಟ್ರಿ
‘ಇದು ನಂದಗೋಕುಲ ಪಯಣದ ಅಂತ್ಯವಿರಬಹುದು, ಆದರೆ ನನ್ನ ಹೊಸ ಪಯಣದ ಶುರು’ ಎಂದು ಯಶ್ವಂತ್ ಬರೆದುಕೊಂಡಿದ್ದಾರೆ. ಮುಂಬರುವ ‘ಸಮುದ್ರ ಮಂಥನ’ ಎಂಬ ಸಿನಿಮಾದ ಮೂಲಕ ತಾವು ಬೆಳ್ಳಿಪರದೆಗೆ ಹೆಜ್ಜೆ ಇಡುತ್ತಿರುವುದಾಗಿ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಭೇಟಿಯಾಗಲು ತುದಿಗಾಲಲ್ಲಿ ನಿಂತಿರುವುದಾಗಿ ಅವರು ಸಂತಸ ಹಂಚಿಕೊಂಡಿದ್ದಾರೆ.
‘ನಿನ್ನೆಯವರೆಗೂ ನಾನು ಕೇಶವನಾಗಿದ್ದೆ, ನಾಳೆ ಪರದೆಯ ಮೇಲೆ ಇನ್ಯಾರೋ, ಆದರೆ ಕೊನೆವರೆಗೂ ನಾನು ನಿಮ್ಮ ಯಶ್ವಂತ್’ ಎಂದು ಭಾವುಕರಾಗಿ ತಮ್ಮ ಪತ್ರವನ್ನು ಮುಗಿಸಿದ್ದಾರೆ.




