SAPTA SAGARADAACHE ELLO: ‘ಹಿಟ್ ಅಂಡ್ ರನ್’ ಘಟನೆಯೇ ‘ಸಪ್ತ ಸಾಗರ’ ಕಥೆಯಾಯ್ತಾ?

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಕಥೆ ಹುಟ್ಟಿದ್ದು ಹೇಗೆ?

Photo Credits: @hemanthrao11 (Instagram)

ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಭಾವುಕ ಕಥೆ ಪ್ರೇಕ್ಷಕರ ಮನ ಮುಟ್ಟಿತ್ತು. ಆದರೆ ಈ ರೋಮಾಂಚಕ ಹಾಗೂ ಹೃದಯಸ್ಪರ್ಶಿ ಕಥೆಯ ಹಿಂದೆ ಒಂದು ನೈಜ, ದುಃಖದ ಘಟನೆ ಅಡಗಿದೆ ಎಂಬುದನ್ನು ನಿರ್ದೇಶಕ ಹೇಮಂತ್ ಎಂ. ರಾವ್ ಬಹಿರಂಗಪಡಿಸಿದ್ದಾರೆ.

ಕಣ್ಣೆದುರೇ ನಡೆದ ಆ ಒಂದು ಭೀಕರ ಅಪಘಾತ…

ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಹೇಮಂತ್ ರಾವ್, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕಥೆ ಹುಟ್ಟಲು ಕಾರಣವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಅವರ ಕಣ್ಣೆದುರೇ ಒಂದು ‘ಹಿಟ್ ಅಂಡ್ ರನ್’ ಅಪಘಾತ ನಡೆದಿತ್ತು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ತಪಾಸಣೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು, ವೇಗವಾಗಿ ಬಂದ ಕಾರನ್ನು ತಡೆಯಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದರು.

ನಿರ್ದೇಶಕರ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳು…

ಬಿದ್ದ ರಭಸಕ್ಕೆ ಆ ಅಧಿಕಾರಿಯ ತಲೆ ರಸ್ತೆ ಬದಿಯ ಪಾದಚಾರಿ ಮಾರ್ಗಕ್ಕೆ (Pavement) ಜೋರಾಗಿ ಬಡಿದು, ಕಿವಿಗಳಿಂದ ರಕ್ತ ಬಂದು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಈ ಭೀಕರ ದೃಶ್ಯ ಹೇಮಂತ್ ರಾವ್ ಅವರ ಮನಸ್ಸಿನಲ್ಲಿ ತೀವ್ರ ಆಘಾತವನ್ನುಂಟು ಮಾಡಿತ್ತು. “ಇಲ್ಲಿ ಮೃತಪಟ್ಟ ವ್ಯಕ್ತಿಯ ಜೀವನ ಹೇಗಿತ್ತು? ಆತನಿಗೆ ಒಬ್ಬ ಪ್ರೇಯಸಿ ಇದ್ದಿದ್ದರೆ? ಅವರಿಬ್ಬರಿಗೂ ಸುಂದರ ಕನಸುಗಳಿದ್ದರೆ ಆ ಜೀವನ ಏನಾಗುತ್ತಿತ್ತು?” ಎಂಬ ಭಾವನಾತ್ಮಕ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡತೊಡಗಿದವು.

10 ವರ್ಷಗಳ ನಂತರ ಬೆಳ್ಳಿಪರೆಗೆ ಬಂದ ಕಾವ್ಯ…

ಅಂದು ಮನಸ್ಸಿನಲ್ಲಿ ಮೂಡಿದ ಆ ಪ್ರಶ್ನೆಗಳೇ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಚಿತ್ರಕಥೆಗೆ ಬುನಾದಿಯಾಯಿತು. 10 ವರ್ಷಗಳ ಹಿಂದಿನ ಆ ಘಟನೆಯನ್ನು ಇಟ್ಟುಕೊಂಡು ಬರೆದ ಕಥೆಯೇ ಇಂದು ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅಭಿನಯದ ಅದ್ಭುತ ಪ್ರೇಮಕಾವ್ಯವಾಗಿ ಬೆಳ್ಳಿಪರದೆಯ ಮೇಲೆ ಮೂಡಿಬಂದಿದೆ.