ಕೇಂದ್ರ ಸರ್ಕಾರ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ನೀಡಿರುವ ಶಿಫಾರಸನ್ನು ತೀವ್ರವಾಗಿ ಖಂಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಹೇರಬೇಕು ಮತ್ತು ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಮುಂಬರುವ ಅಮೆರಿಕ ಭೇಟಿಯನ್ನು ವಿರೋಧಿಸಬೇಕು ಎಂದು ಯುಎಸ್ಸಿಐಆರ್ಎಫ್ ತನ್ನ ಜಾಲತಾಣದಲ್ಲಿ ಅಮೆರಿಕ ಸರ್ಕಾರಕ್ಕೆ ಸೂಚಿಸಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್, ಯುಎಸ್ಸಿಐಆರ್ಎಫ್ ಪಕ್ಷಪಾತ ಧೋರಣೆಯ ಸಂಸ್ಥೆ, ಅದಕ್ಕೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ಹೇಳಿದ್ದಾರೆ.
ಯುಎಸ್ಸಿಐಆರ್ಎಫ್ ಕಳೆದ ಹಲವು ವರ್ಷಗಳಿಂದ ಭಾರತದ ವಿರುದ್ಧ ಪ್ರಚೋದನಕಾರಿ ಮತ್ತು ಕೆಳಮಟ್ಟದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಜೈಸ್ವಾಲ್ ಚಾಟಿ ಬೀಸಿದ್ದಾರೆ. ಇಂತಹ ಸಂಸ್ಥೆಗಳು ತಮ್ಮದೇ ಆದ ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತವೆ, ಅವುಗಳ ಮಾತಿಗೆ ಯಾವುದೇ ಮಹತ್ವವಿಲ್ಲ, ಅವುಗಳಿಂದ ದೂರವಿರುವುದು ಒಳಿತು ಎಂದು ಅವರು ಹೇಳಿದರು. ಈ ವರ್ಷದ ಆರಂಭದಲ್ಲೂ ಇದೇ ಆಯೋಗ ಭಾರತದ ಗುಪ್ತಚರ ಸಂಸ್ಥೆಗಳು ಮತ್ತು ಆರ್ಎಸ್ಎಸ್ ಮೇಲೆ ನಿರ್ಬಂಧ ವಿಧಿಸಬೇಕು ಹಾಗೂ ಭಾರತವನ್ನು ವಿಶೇಷ ಕಳವಳಕಾರಿ ದೇಶ ಎಂದು ಘೋಷಿಸಬೇಕು ಎಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿತ್ತು.
ಈ ಎಲ್ಲಾ ಆರೋಪಗಳನ್ನು ಭಾರತ ಆಗಲೂ ತಳ್ಳಿಹಾಕಿತ್ತು. ಇದೇ ವೇಳೆ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಹೇಳಿಕೆಗೆ ಪಾಕಿಸ್ತಾನ ಸಮನ್ಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಜೈಸ್ವಾಲ್, ಜಮ್ಮು ಕಾಶ್ಮೀರ ಮತ್ತು ಲಡಾಖ್ ಭಾರತದ ಅಖಂಡ ಭಾಗ, ಎಂದಿಗೂ ಹಾಗೆಯೇ ಇರುತ್ತವೆ, ಪಾಕಿಸ್ತಾನದ ಹತಾಶೆಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಯುಎಸ್ಸಿಐಆರ್ಎಫ್ ಮತ್ತು ಭಾರತದ ನಡುವಿನ ಸಂಘರ್ಷ ಹೊಸದೇನಲ್ಲ. ಈ ಆಯೋಗ ಪ್ರತಿ ವರ್ಷ ತನ್ನ ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ ಎಂದು ಆರೋಪಿಸಿ ವಿಶೇಷ ಕಳವಳಕಾರಿ ದೇಶಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುತ್ತಲೇ ಬಂದಿದೆ. ಆದರೆ ಭಾರತ ಸರ್ಕಾರ ಅದನ್ನು ನಿರಂತರವಾಗಿ ರಾಜಕೀಯ ಪ್ರೇರಿತ ಮತ್ತು ವಾಸ್ತವದಿಂದ ದೂರವಾದ ಮೌಲ್ಯಮಾಪನ ಎಂದು ತಿರಸ್ಕರಿಸುತ್ತಿದೆ. ಆರ್ಎಸ್ಎಸ್ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಕೋಟ್ಯಂತರ ಜನರ ಬೆಂಬಲ ಹೊಂದಿರುವ ಸಂಘಟನೆ. ಅಂತಹ ಸಂಘಟನೆಯ ನಾಯಕರ ಮೇಲೆ ನಿರ್ಬಂಧ ಹೇರಬೇಕು ಎಂದು ವಿದೇಶಿ ಸರ್ಕಾರಕ್ಕೆ ಶಿಫಾರಸು ಮಾಡುವುದು ಭಾರತದ ಆಂತರಿಕ ವಿಚಾರದಲ್ಲಿ ನೇರ ಹಸ್ತಕ್ಷೇಪದಂತಿದೆ ಎಂಬುದು ಕೇಂದ್ರ ಸರ್ಕಾರದ ವಾದ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯುಎಸ್ಸಿಐಆರ್ಎಫ್ ಅಮೆರಿಕ ಸರ್ಕಾರದ ಅಧಿಕೃತ ವಿದೇಶಾಂಗ ನೀತಿ ಸಂಸ್ಥೆಯಲ್ಲ. ಇದು ಅಮೆರಿಕ ಕಾಂಗ್ರೆಸ್ ನೇಮಿಸಿದ ಸ್ವತಂತ್ರ ಸಲಹಾ ಸಮಿತಿ. ಅದರ ಶಿಫಾರಸುಗಳು ಅಮೆರಿಕದ ವಿದೇಶಾಂಗ ಇಲಾಖೆಗೆ ಬದ್ಧವಾಗಿರುವುದಿಲ್ಲ. ಆದರೂ ಅದರ ಹೇಳಿಕೆಗಳು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿ ಭಾರತದ ಇಮೇಜ್ ಮೇಲೆ ಪರಿಣಾಮ ಬೀರುವ ಪ್ರಯತ್ನ ನಡೆಯುತ್ತದೆ. ಅದಕ್ಕಾಗಿಯೇ ಭಾರತ ಪ್ರತಿ ಬಾರಿಯೂ ಖಡಕ್ ಭಾಷೆಯಲ್ಲಿ ತಿರುಗೇಟು ನೀಡುತ್ತದೆ.




