ಬಿಗ್‌ಬಾಸ್ ಕನ್ನಡ ಸೀಸನ್ 13 ಶೀಘ್ರವೇ ಪ್ರಾರಂಭವಾಗಲಿದೆ. ಈ ಬಾರಿ ತುಸು ಮುಂಚಿತವಾಗಿ ಅಂದರೆ ಸೆಪ್ಟೆಂಬರ್ ತಿಂಗಳ 6 ರಂದು ಬಿಗ್‌ಬಾಸ್ ಪ್ರಾರಂಭ ಆಗಲಿದೆ. ಈ ಬಾರಿ ಬಿಗ್‌ಬಾಸ್ ಮನೆಗೆ ಕಲಾವಿದರು, ಯೂಟ್ಯೂಬರ್ ಗಳು, ಸಿನಿಮಾ ಮಂದಿ, ಟಿವಿ ತಾರೆಯರು, ಕನ್ನಡ ಹೋರಾಟಗಾರ, ರಾಜಕಾರಣಿ, ಹಾಡುಗಾರರು ಜೊತೆಗೆ ಸಾಮಾನ್ಯರು ಸಹ ಹೋಗಲಿದ್ದಾರೆ. ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗಲಿರುವ ಕೆಲವರ ಹೆಸರುಗಳು ಈಗಾಗಲೇ ಹರಿದಾಡುತ್ತಿದ್ದು, ಇಲ್ಲಿದೆ ನೋಡಿ ಸಂಭಾವ್ಯರ ಪಟ್ಟಿ…

ಮಜಾಭಾರತ ರಾಘವೇಂದ್ರ
ಮಜಾಭಾರತ ರಾಘವೇಂದ್ರ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಪುಟ್ಮಲ್ಲಿ ಸೇರಿದಂತೆ ಮಹಿಳೆಯರ ಪಾತ್ರಗಳನ್ನು ಅದ್ಭುತವಾಗಿ ನಟಿಸಿ ತೋರಿಸುವ ಅದ್ಭುತ ಕಲಾವಿದ ಮತ್ತು ಒಳ್ಳೆಯ ಹಾಸ್ಯಪ್ರಜ್ಙೆ ಸಹ ಉಳ್ಳ ರಾಘವೇಂದ್ರ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ರಾಘವೇಂದ್ರ ಅವರು ಬಿಗ್‌ಬಾಸ್ ಮನೆಗೆ ಖಂಡಿತ ಒಳ್ಳೆಯ ಮನೊರಂಜನೆ ಒದಗಿಸಬಲ್ಲರು.

ಸೂರಜ್
“ಕಾಮಿಡಿ ಕಿಲಾಡಿಗಳು’, ‘ಕ್ವಾಟ್ಲೆ ಕಿಚನ್’, ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋಗಳ ಮೂಲಕ ಜನಪ್ರಿಯರಾಗಿರುವ ಸೂರಜ್ ಅವರು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಅವರೂ ಸಹ ಒಳ್ಳೆಯ ಎಂಟರ್ಟೈನ್‌ಮೆಂಟ್ ಕೊಡಬಲ್ಲ ಸ್ಪರ್ಧಿ ಆಗಿದ್ದಾರೆ.

ನಿಶಾ ಯೋಗೀಶ್ವರ್
ಹಾಲಿ ಶಾಸಕ ಸಿಪಿ ಯೋಗೀಶ್ವರ್ ಅವರ ಪುತ್ರಿ ಮಾಜಿ ನಟಿ ನಿಶಾ ಯೋಗೀಶ್ವರ್ ಅವರು ಈ ಬಾರಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಂದೆ ಸಿಪಿ ಯೋಗೀಶ್ವರ್ ಜೊತೆಗೆ ಕಿರಿಕ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಂದೆಯ ವಿರುದ್ಧ ಮಾತನಾಡುತ್ತಾ ಬಂದಿರುವ ನಿಶಾ ಈ ಬಾರಿ ಬಿಗ್‌ಬಾಸ್‌ಗೆ ಹೋಗಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ರಿತ್ವಿಕ್ ಕೃಪಾಕರ್
ರಾಮಚಾರಿ ಧಾರಾವಾಹಿಯ ನಾಯಕ ನಟ ರಿತ್ವಿಕ್ ಕೃಪಾಕರ್ ಈ ಬಾರಿ ಬಿಗ್‌ಬಾಸ್ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಜಂಟಲ್ ಮ್ಯಾನ್ ಬಿಹೇವಿಯರ್ ಉಳ್ಳ ರಿತ್ವಿಕ್ ಅವರು ಬಿಗ್‌ಬಾಸ್ ಮನೆಗೆ ಒಳ್ಳೆಯ ಭೂಷಣ ಆಗುವ ಸಾಧ್ಯತೆ ಇದೆ.

ಸುಷ್ಮಾ ಕೆ ರಾವ್
ದಶಕಗಳಿಂದಲೂ ಚಿತ್ರರಂಗ, ಟಿವಿ ಲೋಕದಲ್ಲಿ ಸಕ್ರಿಯರಾಗಿರುವ ಸುಷ್ಮಾ ಕೆ ರಾವ್ ಇದೀಗ ಕೊನೆಗೂ ಬಿಗ್‌ಬಾಸ್ ಬರಲಿದ್ದಾರೆ. ಸುಷ್ಮಾ ಕೆ ರಾವ್ ಅವರು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ. ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದೀಗ ಅವರು ಬಿಗ್‌ಬಾಸ್‌ಗೆ ಬಂದರೆ ಖಂಡಿತ ಒಳ್ಳೆಯ ಸ್ಪರ್ಧಿ ಆಗಬಲ್ಲರು.

ಸಿದ್ದು ಮೂಲಿಮನಿ
ಸಿದ್ದು ಮೂಲಿಮನಿ, ಕಿರುತೆರೆಯ ಜನಪ್ರಿಯ ನಟರಲ್ಲಿ ಒಬ್ಬರು. ಈ ಯುವ ನಟ ಸಾಕಷ್ಟು ಚುರುಕು ವ್ಯಕ್ತಿತ್ವ ಉಳ್ಳವರು, ಹಾಸ್ಯಪ್ರಜ್ಙೆಯೂ ಸಾಕಷ್ಟಿದೆ. ಹಾಗಾಗಿ ಇವರು ಬಿಗ್‌ಬಾಸ್ ಮನೆಗೆ ಬಂದರೆ ಮನೆ ರಂಗೇರುವುದು ಖಾತ್ರಿ.

ಬೈರಪ್ಪ ಹರೀಶ್ ಕುಮಾರ್
ಕನ್ನಡ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ಅವರು ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಬೈರಪ್ಪ ಹರೀಶ್ ಕುಮಾರ್ ಅವರು ಕನ್ನಡಪರ ಹೋರಾಟಗಾರರಾಗಿದ್ದು, ಹೋರಾಟವನ್ನು ಚಿಂತನಶೀಲ ನೆಲೆಯಲ್ಲಿ ಮಾಡುತ್ತಾ ಬಂದಿದ್ದಾರೆ. ಡೈನಮಿಕ್ ವ್ಯಕ್ತಿತ್ವ ಇರುವ ಅವರು ಒಳ್ಳೆಯ ಸ್ಪರ್ಧಿ ಆಗುವ ಸಾಧ್ಯತೆ ಇದೆ.

ಮಿಮಿಕ್ರಿ ಗೋಪಿ
ಮಿಮಿಕ್ರಿ ಗೋಪಿ, ಕನ್ನಡ ಕಿರುತೆರೆ ಲೋಕದಲ್ಲಿ ಚಿರಪರಿಚಿತರು. ಹಲವು ಸುದ್ದಿ ವಾಹಿನಿಗಳಲ್ಲಿ ಸಹ ಮನೊರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವ ಮಿಮಿಕ್ರಿ ಗೋಪಿ, ದೇವೇಗೌಡ, ಕುಮಾರಸ್ವಾಮಿ ಇನ್ನಿತರೆ ರಾಜಕಾರಣಿಗಳ ಮಿಮಿಕ್ರಿ ಬಲು ಜನಪ್ರಿಯ. ಇವರು ಬಿಗ್‌ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಬಾಳು ಬೆಳಗುಂದಿ
ಪ್ರತಿ ಬಾರಿಯೂ ಒಬ್ಬರಾದರೂ ಉತ್ತರ ಕರ್ನಾಟಕದ ಪ್ರತಿಭೆಯನ್ನು ಬಿಗ್‌ಬಾಸ್ ಮನೆಗೆ ಕಳಿಸಲಾಗುತ್ತದೆ. ಕಳೆದ ಬಾರಿ ಮಾಳು ಈ ಬಾರಿ ಬಾಳು. ಉತ್ತರ ಕರ್ನಾಟಕದ ಜನಪ್ರಿಯ ಗಾಯಕ ಬಾಳು ಬೆಳಗುಂದಿ ಅವರು ಈ ಬಾರಿ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಕಾಫಿನಾಡು ಚಂದ್ರು
ಯೂಟ್ಯೂಬರ್, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಲ್ಲಿ ಈ ಬಾರಿ ಸಾಕಷ್ಟು ಜನರ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ. ಕಾಫಿನಾಡು ಚಂದ್ರು, ನಿತ್ಯಾಶ್ರೀ ಇನ್ನೂ ಕೆಲವರ ಹೆಸರುಗಳು ಕೇಳಿ ಬರುತ್ತಿವೆ. ಆದರೆ ಅಂತಿಮ ಆಯ್ಕೆ ಯಾರೆಂಬುದು ಸೆಪ್ಟೆಂಬರ್ 6ರಂದೇ ತಿಳಿದು ಬರಲಿದೆ.




