Photo Credits: @indonesia_fangirl (Instagram)
ಹಿರಿಯ ಬಹುಭಾಷಾ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಧ್ಯಾಹ್ನ 1:59ಕ್ಕೆ ಕೊನೆಯುಸಿರೆಳೆದಿದ್ದಾರೆ.
ಸಾಹುಕಾರ್ ಚಿತ್ರದ ಮೂಲಕ ಎಂಟ್ರಿ: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ…
ಎಲ್. ವಿ. ಪ್ರಸಾದ್ ನಿರ್ದೇಶನದ ತೆಲುಗಿನ ‘ಸಾಹುಕಾರ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಮೊದಲ ಚಿತ್ರವೇ ಅವರಿಗೆ ‘ಸಾಹುಕಾರ್ ಜಾನಕಿ’ ಎಂಬ ಐಕಾನಿಕ್ ಖ್ಯಾತಿಯನ್ನು ತಂದುಕೊಟ್ಟಿತ್ತು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಬರೋಬ್ಬರಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದರು.
ಏಳು ದಶಕಗಳ ಚಿತ್ರರಂಗದ ಸೇವೆ: ನಾಟಕ ಹಾಗೂ ಧಾರವಾಹಿಗಳಲ್ಲೂ ಕಮಾಲ್…
1952ರಲ್ಲಿ ‘ವಲಾಯಪತಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿ ಪ್ರಮುಖ ನಟಿಯಾಗಿ ಹೊರಹೊಮ್ಮಿದ್ದರು. ನಾಯಕಿ ಪಾತ್ರಗಳು ಮಾತ್ರವಲ್ಲದೇ ಪ್ರಬಲ ಪೋಷಕ ಪಾತ್ರಗಳ ಮೂಲಕವೂ ಜನಮನ ಗೆದ್ದಿದ್ದರು. ಅವರು 300ಕ್ಕೂ ಹೆಚ್ಚು ರಂಗಭೂಮಿ ನಾಟಕ ಪ್ರದರ್ಶನಗಳು ಹಾಗೂ ಹಲವು ಜನಪ್ರಿಯ ಧಾರವಾಹಿಗಳಲ್ಲೂ ಅಭಿನಯಿಸಿದ್ದರು. 2023ರಲ್ಲಿ ಬಿಡುಗಡೆಯಾದ ತೆಲುಗಿನ ‘ಅನ್ನಿ ಮಂಚಿ ಶಕುನಮುಲೆ’ ಅವರ ಅಭಿನಯದ ಕೊನೆಯ ಚಿತ್ರವಾಗಿತ್ತು.
ಪದ್ಮಶ್ರೀ ಪುರಸ್ಕೃತರಾಗಿದ್ದ ಹಿರಿಯ ಜೀವ: ದಕ್ಷಿಣ ಭಾರತೀಯ ಚಿತ್ರರಂಗ ಶೋಕಸಾಗರದಲ್ಲಿ…
ಏಳು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿದ್ದ ಅವರಿಗೆ ಭಾರತ ಸರ್ಕಾರ ಗೌರವ ಸಲ್ಲಿಸಿತ್ತು. ಕಲಾರಂಗಕ್ಕೆ ನೀಡಿದ ಅನುಪಮ ಕೊಡುಗೆಗಾಗಿ 2022ರಲ್ಲಿ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ತಾರೆಯರು ಹಾಗೂ ಕೋಟ್ಯಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಅವರ ಅಗಲಿಕೆಯಿಂದ ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಕಣ್ಣೊಂಡಿಯೊಂದು ಕಳಚಿದಂತಾಗಿದೆ.




