Photo Credits: @ravichandranfans (Instagram)
ಕನ್ನಡ ಚಿತ್ರರಂಗದಲ್ಲಿ ಹೊಸತನ ಹಾಗೂ ಅದ್ಭುತ ಪ್ರಯೋಗಗಳಿಗೆ ಮುನ್ನುಡಿ ಬರೆದ ಹೆಗ್ಗಳಿಕೆ ‘ಕನಸುಗಾರ’ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಎಲ್ಲೆಡೆ ಜೋರಾಗಿದೆ.
ಯಾವುದೇ ರೀತಿಯ ಡಿಜಿಟಲ್ ತಂತ್ರಜ್ಞಾನ ಹಾಗೂ ಸೋಶಿಯಲ್ ಮೀಡಿಯಾ ಬೆಂಬಲವಿಲ್ಲದ ಕಾಲದಲ್ಲೇ ಭಾರತೀಯ ಸಿನಿಮಾರಂಗವೇ ಬೆರಗಾಗುವಂತೆ ರವಿಚಂದ್ರನ್ ಸಾಹಸ ಮಾಡಿದ್ದರು. ನಾಲ್ಕು ಪ್ರಮುಖ ಭಾಷೆಗಳಲ್ಲಿ ಕೋಟಿ ಕೋಟಿ ವೆಚ್ಚ ಮಾಡಿ ‘ಶಾಂತಿ ಕ್ರಾಂತಿ’ ಎಂಬ ದೃಶ್ಯಕಾವ್ಯ ನಿರ್ಮಿಸಿದ್ದರು.
ಈ ಮಹತ್ವಾಕಾಂಕ್ಷೆಯ ಸಿನಿಮಾ ತೆರೆಕಂಡು ಮೂರು ದಶಕಗಳು ಕಳೆದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಇದರ ಕ್ರೇಜ್ ಕಮ್ಮಿಯಾಗಿಲ್ಲ. ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ರಿಲೀಸ್ ಮಾಡುವಂತೆ ಸ್ಯಾಂಡಲ್ವುಡ್ ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ.
ಮೂರು ದಶಕಗಳ ಬಳಿಕ ಡಿಜಿಟಲ್ ಜಗತ್ತಿನಲ್ಲಿ ‘ಶಾಂತಿ ಕ್ರಾಂತಿ’ ಸೌಂಡ್…
ರವಿಚಂದ್ರನ್ ಅವರ ಬಿಗ್ ಬಜೆಟ್ ಸಿನಿಮಾ ‘ಶಾಂತಿ ಕ್ರಾಂತಿ’ ಬಿಡುಗಡೆಯಾಗಿ ಮೂರು ದಶಕಗಳೇ ಉರುಳಿವೆ. ಅಂದಿನ ಕಾಲಕ್ಕೆ ಚಿತ್ರರಂಗದಲ್ಲಿ ಬೃಹತ್ ಸಂಚಲನ ಮೂಡಿಸಿದ್ದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿ ಹಿನ್ನಡೆ ಅನುಭವಿಸಿತ್ತು. ಈ ಚಿತ್ರದ ಹಿನ್ನಡೆಯಿಂದಾಗಿ ರವಿಚಂದ್ರನ್ ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಮೂರು ದಶಕಗಳ ನಂತರ ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಈ ಚಿತ್ರದ ಮೇಕಿಂಗ್ ಭಾರಿ ಸದ್ದು ಮಾಡುತ್ತಿದೆ. ಅಂದಿನ ಕಾಲದಲ್ಲೇ ಇಷ್ಟೊಂದು ರಿಚ್ ಆಗಿ ಸಿನಿಮಾ ತೆಗೆದಿದ್ದನ್ನು ಕಂಡು ಇಂದಿನ ಸಿನಿಪ್ರೇಮಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈಗಿನ ಟ್ರೆಂಡ್ಗೆ ಈ ಮಾಸ್ಟರ್ಪೀಸ್ ಸಿನಿಮಾ ಸೂಕ್ತವಾಗಿದೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಸಿನಿಮಾ ಬಿಡುಗಡೆ ವೇಳೆ ಎದುರಾಗಿದ್ದ ಸಾಲು ಸಾಲು ಅಡೆತಡೆಗಳು…
ಈ ಚಿತ್ರದ ನಿರ್ಮಾಣ ಮತ್ತು ಆ ದಿನಗಳಲ್ಲಿ ಅನುಭವಿಸಿದ ಸವಾಲುಗಳನ್ನು ರವಿಚಂದ್ರನ್ ಹಲವು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಹಾಗೂ ರಿಲೀಸ್ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನಿರೀಕ್ಷಿತವಾಗಿ ಸ್ಟ್ರೈಕ್ ಆರಂಭವಾಗಿತ್ತು. ಅತ್ಯಂತ ಹೆವಿ ಬಜೆಟ್ ಸಿನಿಮಾ ಆಗಿದ್ದರಿಂದ ರವಿಚಂದ್ರನ್ ಎಷ್ಟೇ ಮನವಿ ಮಾಡಿದರೂ ಯಾರಿಂದಲೂ ಬೆಂಬಲ ಸಿಗಲಿಲ್ಲ. ಚಿತ್ರದ ವೆಚ್ಚ ಸರಿದೂಗಿಸಲು ಟಿಕೆಟ್ ದರ ಸ್ವಲ್ಪ ಏರಿಸುವಂತೆ ಕೋರಿದ ಮನವಿಯನ್ನೂ ಸಹ ಯಾರೂ ಸ್ವೀಕರಿಸಲಿಲ್ಲ. ಈ ಎಲ್ಲಾ ಸಾಲು ಸಾಲು ವಿಘ್ನಗಳಿಂದಾಗಿ ಇಷ್ಟೊಂದು ದೊಡ್ಡ ಮಟ್ಟದ ಸಿನಿಮಾ ಅಂದು ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ.
“ಅಂದು ಸೋತ ಚಿತ್ರವನ್ನು ಇಂದು ಗೆಲ್ಲಿಸುತ್ತೇವೆ”: ಫ್ಯಾನ್ಸ್ ಜಾಲತಾಣ ಅಭಿಯಾನ…
ಅಂದು ಸರಿಯಾದ ಪ್ರೋತ್ಸಾಹ ಸಿಗದಿದ್ದರೂ, ಇಂದು ಈ ಸಿನಿಮಾಗೆ ಜಾಲತಾಣಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ನೆಟ್ಟಿಗರು ಹಾಗೂ ಫ್ಯಾನ್ಸ್ ರವಿಚಂದ್ರನ್ ಅವರನ್ನು ಟ್ಯಾಗ್ ಮಾಡಿ ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. “ಅಂದು ಸೋತ ಈ ಸಿನಿಮಾ ಇಂದು ತೆರೆಕಂಡರೆ ನಾವು ಹೊಸ ಇತಿಹಾಸ ಸೃಷ್ಟಿಸಿ ಗೆಲ್ಲಿಸುತ್ತೇವೆ” ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. 1991ರ ಸೆಪ್ಟೆಂಬರ್ 19ರಂದು ಕನ್ನಡ ಹಾಗೂ ತೆಲುಗಿನಲ್ಲಿ ಮತ್ತು ಅಕ್ಟೋಬರ್ 2ರಂದು ತಮಿಳು-ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಅಭಿಮಾನಿಗಳ ಈ ಅಪಾರ ಪ್ರೀತಿಯನ್ನು ಕಂಡು ಕನಸುಗಾರ ‘ಶಾಂತಿ ಕ್ರಾಂತಿ’ಗೆ ಆಧುನಿಕ ಸ್ಪರ್ಶ ನೀಡಿ ಮತ್ತೆ ಥಿಯೇಟರ್ಗೆ ತರುತ್ತಾರಾ ಕಾದು ನೋಡಬೇಕಿದೆ.




