☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

ETHANOL : ಎಥೆನಾಲ್ ಪೆಟ್ರೋಲ್ ವಿವಾದದಲ್ಲಿ ರಾಜ್ಯ ಕೇಂದ್ರ ವಾಕ್ಸಮರ, ರಿಜ್ವಾನ್ ಪತ್ರಕ್ಕೆ ಗಡ್ಕರಿ ತಿರುಗೇಟು

Image of Ethanol debate
ಎಥೆನಾಲ್ (ETHANOL) ಮಿಶ್ರಿತ ಪೆಟ್ರೋಲ್ ವಿವಾದ ತಾರಕಕ್ಕೆ ಏರಿದ್ದು, ಹಾನಿ ಆರೋಪ ಮಾಡಿದ ರಿಜ್ವಾನ್ ಅರ್ಷದ್‌ಗೆ ನಿತಿನ್ ಗಡ್ಕರಿ ತಿರುಗೇಟು ನೀಡಿರುವುದು ವಾಕ್ಸಮರಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ರಾಜ್ಯ & ಕೇಂದ್ರದ ನಡುವೆ ಸಮಾರಾ
  • ಎಥನಾಲ್ ಆರೋಪಕ್ಕೆ ಗಡ್ಕರಿ ತಿರುಗೇಟು

ನವದೆಹಲಿ: ಎಥೆನಾಲ್ (ETHANOL) ಮಿಶ್ರಿತ ಪೆಟ್ರೋಲ್ ವಿವಾದ ತಾರಕಕ್ಕೆ ಏರಿದ್ದು, ಹಾನಿ ಆರೋಪ ಮಾಡಿದ ರಿಜ್ವಾನ್ ಅರ್ಷದ್‌ಗೆ ನಿತಿನ್ ಗಡ್ಕರಿ ತಿರುಗೇಟು ನೀಡಿರುವುದು ರಾಜ್ಯ ಮತ್ತು ಕೇಂದ್ರ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚು ಎಥೆನಾಲ್ ಬೆರೆಸಲಾಗುತ್ತಿದ್ದು, ಇದರಿಂದ ವಾಹನಗಳು ಹಾಳಾಗುತ್ತಿವೆ ಎಂದು ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ. ಗ್ರಾಹಕರ ಹಿತ ಕಾಪಾಡುವಂತೆ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧ ಬಂಕ್‌ಗಳಿಂದ ಸಂಗ್ರಹಿಸಿದ ಇಂಧನ ಮಾದರಿಗಳನ್ನು ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಅದರಲ್ಲಿ 14 ಮಾದರಿಗಳ ಪೈಕಿ 11 ಮಾದರಿಗಳಲ್ಲಿ ಶೇ. 20ಕ್ಕಿಂತ ಹೆಚ್ಚು, ಗರಿಷ್ಠ ಶೇ. 31.2ರಷ್ಟು ಎಥೆನಾಲ್ ಇರುವುದು ಕಂಡುಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶೇ. 90ರಷ್ಟು ಬಂಕ್‌ಗಳ ನಳಿಕೆಗಳಲ್ಲಿ ವ್ಯತ್ಯಾಸವಿದ್ದು, ಗ್ರಾಹಕರಿಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನ ಸಿಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.

ಕೇಂದ್ರದ ಮುಂದೆ 5 ಪ್ರಮುಖ ಬೇಡಿಕೆ..!

ರಿಜ್ವಾನ್ ಅರ್ಷದ್ ಕೇಂದ್ರದ ಮುಂದೆ ಐದು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಪ್ರತಿ ಬಂಕ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು, ಬಿಲ್‌ನಲ್ಲಿ ಅದನ್ನು ನಮೂದಿಸಬೇಕು, ಕಡಿಮೆ ಎಥೆನಾಲ್ ಇರುವ ಇ-10 ಇಂಧನ ಆಯ್ಕೆ ಗ್ರಾಹಕರಿಗೆ ಸಿಗಬೇಕು, ಎನ್‌ಎಬಿಎಲ್ ಪ್ರಯೋಗಾಲಯಗಳ ಮೂಲಕ ಸ್ವತಂತ್ರ ಇಂಧನ ಪರೀಕ್ಷೆ ನಡೆಯಬೇಕು, ಎಥೆನಾಲ್‌ನಿಂದ ವಾಹನಕ್ಕೆ ಹಾನಿಯಾದರೆ ಮಾಲೀಕರಿಗೆ ಪರಿಹಾರ ನೀಡಲು ಪ್ರತ್ಯೇಕ ನಿಧಿ ಸ್ಥಾಪಿಸಬೇಕು ಎಂಬುದು ಆ ಬೇಡಿಕೆಗಳಾಗಿವೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಎಥೆನಾಲ್‌ನಿಂದ ದೇಶದಲ್ಲಿ ಯಾವುದೇ ವಾಹನಕ್ಕೆ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಅಪಪ್ರಚಾರ ಒಂದು ಪೇಯ್ಡ್ ಕ್ಯಾಂಪೇನ್ ಎಂದು ಅವರು ತಿರುಗೇಟು ನೀಡಿದ್ದಾರೆ. 2022ರಿಂದ ಸುಮಾರು 4 ಕೋಟಿ ಕಾರುಗಳು ಮತ್ತು 20 ಕೋಟಿ ದ್ವಿಚಕ್ರ ವಾಹನಗಳು ಇ-20 ಇಂಧನದಲ್ಲೇ ಸುಗಮವಾಗಿ ಓಡುತ್ತಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಮಾದರಿ ಸಂಗ್ರಹದ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಪ್ರಶ್ನೆ ಎತ್ತಿದ್ದು, ತಾವು ಒಟ್ಟು 63 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿರುವುದಾಗಿ ರಿಜ್ವಾನ್ ಹೇಳಿದ್ದಾರೆ. ಇಂಧನದಲ್ಲಿ ಕಲಬೆರಕೆ ಮಾಡಿ ಹಣ ಮಾಡುವವರ ವಿರುದ್ಧ ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ : ತಟ್ಟೆ ಖಾಲಿಯಾಗುತ್ತಿದೆ, ಜೇಬು ಬರಿದಾಗುತ್ತಿದೆ: ಬೆಲೆ ಏರಿಕೆ ವಿರುದ್ಧ ಖರ್ಗೆ ಕಿಡಿ

ಈ ವಿವಾದ ಈಗ ಕೇವಲ ಇಂಧನ ಗುಣಮಟ್ಟದ ಪ್ರಶ್ನೆಯಾಗಿ ಉಳಿದಿಲ್ಲ, ಗ್ರಾಹಕರ ನಂಬಿಕೆ ಮತ್ತು ಪಾರದರ್ಶಕತೆಯ ಪ್ರಶ್ನೆಯಾಗಿದೆ. ಬಂಕ್‌ನಲ್ಲಿ ಎಷ್ಟು ಎಥೆನಾಲ್ ಬೆರೆತಿದೆ ಎಂಬುದು ಗ್ರಾಹಕನಿಗೆ ಗೊತ್ತಾಗದಿದ್ದರೆ, ವಾಹನ ಹಾಳಾದಾಗ ಹೊಣೆ ಯಾರದು ಎಂಬ ಗೊಂದಲ ಸಹಜವಾಗಿ ಮೂಡುತ್ತದೆ. ಸರ್ಕಾರದ ಕಡೆಯಿಂದ ಇ-20 ಸುರಕ್ಷಿತ ಎಂಬ ಭರವಸೆ ಇದ್ದರೂ, ಮಿತಿ ಮೀರಿ ಮಿಶ್ರಣವಾಗುತ್ತಿದೆ ಎಂಬ ಪರೀಕ್ಷಾ ವರದಿಗಳು ಆ ಭರವಸೆಯನ್ನು ದುರ್ಬಲಗೊಳಿಸುತ್ತವೆ. ಆದ್ದರಿಂದ ಸ್ವತಂತ್ರ ಪರೀಕ್ಷೆ, ಬಿಲ್‌ನಲ್ಲಿ ಪ್ರಮಾಣದ ಉಲ್ಲೇಖ ಮತ್ತು ಇ-10 ಆಯ್ಕೆ ಗ್ರಾಹಕನ ಹಕ್ಕನ್ನು ಬಲಪಡಿಸುತ್ತವೆ. ಆದರೆ ಆರೋಪ ಮತ್ತು ಪ್ರತ್ಯಾರೋಪಗಳು ರಾಜಕೀಯ ಸ್ವರೂಪ ಪಡೆದರೆ ಮೂಲ ಸಮಸ್ಯೆ ಮರೆಯಾಗುವ ಅಪಾಯವಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಮಾದರಿ ಪರೀಕ್ಷೆಯ ವಿವರಗಳನ್ನು ಬಹಿರಂಗಪಡಿಸಿ, ಮಿತಿ ಮೀರಿದ ಮಿಶ್ರಣಕ್ಕೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಈ ಗೊಂದಲಕ್ಕೆ ತೆರೆ ಬೀಳಲು ಸಾಧ್ಯ.