ದರ್ಶನ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿಯಾಗಿರುವ ಪುನೀತ್ ಅವರ ಕ್ರಾಸ್ ಎಕ್ಸಾಮಿನೇಷನ್ ಸತತ ಐದನೇ ದಿನವೂ ಮುಂದುವರಿದಿದೆ. ಇದರಿಂದ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಮತ್ತೆ ಢವಢವ ಶುರುವಾಗಿದೆ.
ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಪುನೀತ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನ್ಯಾಯಾಲಯದ ಕಲಾಪದಲ್ಲಿ ದಾಖಲಾಗುತ್ತಿರುವ ಪ್ರತಿಯೊಂದು ಹೇಳಿಕೆಯೂ ಈ ಕೇಸ್‌ನಲ್ಲಿ ಅತ್ಯಂತ ನಿರ್ಣಾಯಕವಾಗುತ್ತಿದೆ.
ಪ್ರತಿಕೂಲ ಸಾಕ್ಷಿಯಾದ ಪುನೀತ್‌ಗೆ ಎಸ್‌ಪಿಪಿ ಪ್ರಶ್ನೆಗಳ ಸುರಿಮಳೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐ ವಿಟ್ನೆಸ್ ಆಗಿದ್ದ ಪುನೀತ್ ಈ ಹಿಂದೆ ಕೋರ್ಟ್ ಮುಂದೆ ತಮ್ಮ ಹೇಳಿಕೆಯನ್ನು ಬದಲಿಸಿದ್ದರು. ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿದ್ದರಿಂದ ಅವರನ್ನು ಪ್ರತಿಕೂಲ ಸಾಕ್ಷಿ (Hostile Witness) ಎಂದು ಪರಿಗಣಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಪುನೀತ್ ಅವರಿಂದ ಅಸಲಿ ಸತ್ಯ ಹೊರತೆಗೆಯಲು ಪಾಟಿಸವಾಲು (Cross Examination) ನಡೆಸುತ್ತಿದ್ದಾರೆ. ಸತತ ಐದು ದಿನಗಳಿಂದ ಒಂದೇ ಸಾಕ್ಷಿಯನ್ನು ವಿಚಾರಣೆ ನಡೆಸುತ್ತಿರುವುದು ಈ ಪ್ರಕರಣದ ಗಂಭೀರತೆ ಮತ್ತು ಮಹತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ನ್ಯಾಯಾಧೀಶರ ಸಮ್ಮುಖದಲ್ಲಿ ಎಸ್‌ಪಿಪಿ ಕೇಳುತ್ತಿರುವ ತೀಕ್ಷ್ಣ ಪ್ರಶ್ನೆಗಳಿಗೆ ಪುನೀತ್ ಉತ್ತರಿಸುತ್ತಿದ್ದಾರೆ. ಈ ಹಿಂದೆ ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ನೀಡಿದ್ದ ಹೇಳಿಕೆಗಳ ಕುರಿತು ಪ್ರಸನ್ನ ಕುಮಾರ್ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಪ್ರಕರಣದ ವಿಚಾರಣೆಯಲ್ಲಿ ಹೆಚ್ಚಿದ ಕುತೂಹಲ
ಈ ಪ್ರಕರಣದಲ್ಲಿ ಈಗಾಗಲೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ದರ್ಶನ್ ಪಡೆಗೆ ದೊಡ್ಡ ಹಿನ್ನಡೆಯಾಗಿದೆ. ಅದರ ಬೆನ್ನಲ್ಲೇ ಪ್ರತ್ಯಕ್ಷ ಸಾಕ್ಷಿ ಪುನೀತ್ ಉಲ್ಟಾ ಹೊಡೆದಿದ್ದರೂ, ಸರ್ಕಾರಿ ಅಭಿಯೋಜಕರು ಪ್ರಕರಣವನ್ನು ಬಿಗಿ ಮಾಡಲು ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ.
ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಈ ಕ್ರಾಸ್ ಎಕ್ಸಾಮಿನೇಷನ್ ಅತ್ಯಂತ ಮಹತ್ವದ್ದಾಗಿದೆ. ಸಾಕ್ಷಿದಾರರ ಹೇಳಿಕೆಗಳಲ್ಲಿನ ಗೊಂದಲಗಳನ್ನು ನ್ಯಾಯಾಲಯದ ಮುಂದೆ ಬಯಲಿಗೆಳೆಯಲು ಎಸ್‌ಪಿಪಿ ಪ್ರಸನ್ನ ಕುಮಾರ್ ಮುಂದಾಗಿದ್ದಾರೆ.
ಸತತ ಐದನೇ ದಿನವೂ ವಿಚಾರಣೆ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಕೋರ್ಟ್‌ನಲ್ಲಿ ಯಾವ ರೀತಿಯ ಸ್ಫೋಟಕ ಮಾಹಿತಿಗಳು ಹೊರಬರುತ್ತವೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ನಟ ದರ್ಶನ್ ಹಾಗೂ ಸಹ ಆರೋಪಿಗಳ ಭವಿಷ್ಯ ಈ ಸಾಕ್ಷ್ಯಗಳ ವಿಚಾರಣೆಯ ಮೇಲೆ ನಿಂತಿದೆ.




