ರೇಣುಕಾಸ್ವಾಮಿ ಕೊಲೆ ಪ್ರಕರಣ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಎಡವಟ್ಟು ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವಿನ 2 ನಿಮಿಷದ ಮಾತುಕತೆಯು ಈಗ ಪ್ರಾಸಿಕ್ಯೂಷನ್ಗೆ ಹೊಸ ಅಸ್ತ್ರವಾಗಿ ಸಿಕ್ಕಿದೆ.
ಕೋರ್ಟ್ ಹಾಲ್ನಲ್ಲಿ ತಾಂತ್ರಿಕ ಕಾರಣದಿಂದ ಕನೆಕ್ಷನ್ ಕಟ್ ಆಗಿತ್ತು ಎಂದು ಭಾವಿಸಿ ದರ್ಶನ್ ಹಾಗೂ ಪವಿತ್ರಾ ಪರಸ್ಪರ ಮಾತನಾಡಿಕೊಂಡಿದ್ದರು. ಆದರೆ ಆನ್ಲೈನ್ನಲ್ಲಿದ್ದವರಿಗೆ ಇವರ ಮಾತು ಸ್ಪಷ್ಟವಾಗಿ ಕೇಳಿಸಿತ್ತು.
ಈ 2 ನಿಮಿಷದ ಆಡಿಯೋ ರೆಕಾರ್ಡ್ ಕ್ಲಿಪ್ ಅನ್ನು ಎಸ್ಪಿಪಿ ಅವರು ಸೋಮವಾರ ನ್ಯಾಯಾಧೀಶರ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದರಿಂದ ದರ್ಶನ್ ಹಾಗೂ ಪವಿತ್ರಾ ಗೌಡಗೆ ಮತ್ತೆ ಸಂಕಷ್ಟ ಎದುರಾಗಿದೆ.
ಜೈಲಿನ ಕಷ್ಟ ಹಾಗೂ ಬೇಲ್ ಬಗ್ಗೆ ಚರ್ಚೆ
ವಿಡಿಯೋ ಕಾನ್ಫರೆನ್ಸ್ ವೇಳೆ ಪವಿತ್ರಾ ಗೌಡ ಅವರು ದರ್ಶನ್ ಬಳಿ ಊಟ ಆಯ್ತಾ ಎಂದು ವಿಚಾರಿಸಿದ್ದಾರೆ. ಅದಕ್ಕೆ ದರ್ಶನ್ ಆಯ್ತು ಎಂದು ಉತ್ತರಿಸಿದ್ದಾರೆ. ಬೆನ್ನುನೋವಿನ ಸಮಸ್ಯೆ ಬಗ್ಗೆಯೂ ಪವಿತ್ರಾ ಕೇಳಿದ್ದು, ಒಂದು ಸೆಷನ್ ಫಿಜಿಯೋಥೆರಪಿ ಆಗಿದೆ ಎಂದು ದರ್ಶನ್ ತಿಳಿಸಿದ್ದಾರೆ.
ಜಾಮೀನು ಅರ್ಜಿ ಹಾಕುವ ವಿಚಾರವಾಗಿ ಮಾತನಾಡಿರುವ ದರ್ಶನ್, “ಇಷ್ಟು ದಿನಗಳೇ ಕಳೆದಿದೆ, ಸ್ವಲ್ಪ ದಿನ ವೇಟ್ ಮಾಡು” ಎಂದು ಹೇಳಿದ್ದಾರೆ. “ನಾಲ್ಕು ತಿಂಗಳಲ್ಲಿ ಜಡ್ಜ್ ಚೇಂಜ್ ಆಗ್ತಾರೆ, ಆಮೇಲೆ ಬೇಲ್ ಅರ್ಜಿ ಹಾಕೋಣ” ಎಂದು ಚರ್ಚೆ ನಡೆಸಿದ್ದಾರೆ.
ಇದನ್ನು ಓದಿ: Darshan-Pavitra Gowda: ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದರ್ಶನ್-ಪವಿತ್ರಾ ಗೌಡ ಮಾತುಕತೆ; ಜೈಲಿನ ಕಷ್ಟ ಬಿಚ್ಚಿಟ್ಟ ಜೋಡಿ
ವೈರಲ್ ಆದ ಮಾತುಕತೆಯಿಂದ ದರ್ಶನ್-ಪವಿತ್ರಾಗೆ ಟೆನ್ಶನ್
ವಿಸಿ ಕನೆಕ್ಷನ್ ಮರುಪ್ರಾರಂಭವಾಗುತ್ತಿದ್ದಂತೆ ಇಬ್ಬರೂ ತಕ್ಷಣ ತಮ್ಮ ಮಾತುಕತೆಯನ್ನು ನಿಲ್ಲಿಸಿದ್ದರು. ಆದರೆ ಇವರ ಮಾತುಕತೆ ವೈರಲ್ ಆಗಿರುವ ವಿಚಾರ ಸಿಬ್ಬಂದಿ ಮೂಲಕ ನಂತರ ಇಬ್ಬರಿಗೂ ತಿಳಿದಿದೆ.
ಹೃದಯ ಹಾಗೂ ಮನಸ್ಸು ಗಟ್ಟಿ ಮಾಡಿಕೋ ಎಂದು ಸನ್ನೆ ಮೂಲಕ ತಿಳಿಸಿದ್ದ ದರ್ಶನ್, ತನಗೂ ತುಂಬಾ ಸಮಸ್ಯೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದರು. ತಮ್ಮ ವಕೀಲರ ಮೂಲಕವೂ ಈ ಮಾಹಿತಿ ತಿಳಿದುಬಂದಿದ್ದು, ಈ ಎಲ್ಲ ಬೆಳವಣಿಗೆಯಿಂದ ದರ್ಶನ್ ಹಾಗೂ ಪವಿತ್ರಾ ಗೌಡಗೆ ತೀವ್ರ ಆತಂಕ ಶುರುವಾಗಿದೆ.




