ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ವಿಚಾರಣೆಯು ಪ್ರಮುಖ ಘಟ್ಟ ತಲುಪಿದೆ. ಈ ನಡುವೆ ಪ್ರಮುಖ ಬೆಳವಣಿಗೆಯೊಂದರಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪುನೀತ್ ತಮ್ಮ ಹಿಂದಿನ ಹೇಳಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ.
ಪ್ರದೋಶ್ ಅವರು ಈಗಾಗಲೇ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಅಂದು ನಡೆದ ಘಟನೆಯ ಹಲವು ಮಾಹಿತಿಗಳನ್ನು ಪ್ರದೋಶ್ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿದ್ದಾರೆ.
ಆದರೆ ಇದರ ನಡುವೆ ಸಾಕ್ಷಿ ಪುನೀತ್ ಪ್ರತಿಕೂಲ ಸಾಕ್ಷಿಯಾಗಿ ಪರಿಣಮಿಸಿರುವುದು ಸರ್ಕಾರಿ ವಕೀಲರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಕೀಲರ ಪ್ರಶ್ನೆಗೆ ಪುನೀತ್ ‘ಗೊತ್ತಿಲ್ಲ’ ಉತ್ತರ
ಪ್ರತಿಕೂಲ ಸಾಕ್ಷಿಯಾಗಿರುವ ಪುನೀತ್ ಅವರ ಪಾಟಿಸವಾಲನ್ನು ಎಸ್ಪಿಪಿ ಪ್ರಸನ್ನ ಕುಮಾರ್ ನಡೆಸಿದ್ದಾರೆ. ವಕೀಲರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಪುನೀತ್ ತಮಗೆ ಏನೂ ಗೊತ್ತಿಲ್ಲ ಎಂಬ ಉತ್ತರವನ್ನೇ ನೀಡಿದ್ದಾರೆ.
ತಾನು ಈ ಕೊಲೆ ಪ್ರಕರಣದ ಬಗ್ಗೆ ಟಿವಿಯಲ್ಲಿ ಮಾತ್ರವೇ ನೋಡಿದ್ದಾಗಿ ಪುನೀತ್ ಹೇಳಿಕೊಂಡಿದ್ದಾನೆ. ಈ ಹಿಂದೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುವಾಗ ತಾನು ಹೆದರಿದ್ದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾನೆ.
ಅದೇ ಕಾರಣಕ್ಕೆ ಆ ರೀತಿ ಹೇಳಿಕೆ ದಾಖಲಿಸಿದ್ದೆ ಎಂದೂ, ಆ ಹೇಳಿಕೆಗಳು ಟಿವಿಯಲ್ಲಿ ನೋಡಿ ತಿಳಿದ ಮಾಹಿತಿಯನ್ನೇ ಆಧರಿಸಿವೆ ಎಂದೂ ಪುನೀತ್ ಹೇಳಿದ್ದಾನೆ. ಇದರಿಂದ ಸಿಆರ್ಪಿಸಿ 164 ಹೇಳಿಕೆಯನ್ನೂ ಸಹ ಪುನೀತ್ ನಿರಾಕರಿಸಿದಂತಾಗಿದೆ.
ಶೆಡ್ ಮಾಲೀಕ ಹೊರತುಪಡಿಸಿ ಯಾರೂ ಗೊತ್ತಿಲ್ಲ
ಪುನೀತ್ ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆಯನ್ನು ಆತ ನೇರವಾಗಿ ನೋಡಿದ್ದ. ಈ ಹಿಂದೆ ನೀಡಿದ್ದ ಹೇಳಿಕೆಗಳಲ್ಲಿ ಪುನೀತ್ ಈ ಕುರಿತು ಎಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದನು.
ಇದನ್ನು ಓದಿ: Darshan: ಬೆನ್ನುನೋವು ಉಲ್ಬಣ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫ್ಟ್ ಆಗ್ತಾರಾ ನಟ ದರ್ಶನ್? ಇಂದೇ ನಿರ್ಧಾರ
ಆದರೆ ಈಗ ತನ್ನ ಹಿಂದಿನ ಎಲ್ಲಾ ಹೇಳಿಕೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿದ್ದಾನೆ. ಶೆಡ್ನ ಮಾಲೀಕ ವಿನಯ್ ಅನ್ನು ಹೊರತಾಗಿ ಇನ್ಯಾರನ್ನೂ ತಾನು ಗುರುತಿಸುವುದಿಲ್ಲ ಎಂದು ಪುನೀತ್ ಸ್ಪಷ್ಟಪಡಿಸಿದ್ದಾನೆ. ಉಳಿದವರ್ಯಾರೂ ತನಗೆ ಪರಿಚಯವಿಲ್ಲ ಎಂದಿರುವ ಪುನೀತ್ ನಡೆ ಪ್ರಕರಣವನ್ನು ಇನ್ನಷ್ಟು ರೋಚಕಗೊಳಿಸಿದೆ.
Renukaswamy Case: ದರ್ಶನ್ ಬೆನ್ನುನೋವು ಹಾಗೂ ವೈದ್ಯಕೀಯ ವರದಿ
ಇದೇ ವೇಳೆ ನಟ ದರ್ಶನ್ ಮತ್ತೆ ಬೆನ್ನುನೋವಿನಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಜೈಲಿನಲ್ಲೇ ಅಗತ್ಯ ಚಿಕಿತ್ಸೆ ಪಡೆಯಲು ಅನುಮತಿ ನೀಡಿತ್ತು. ಜೊತೆಗೆ ದರ್ಶನ್ ಆರೋಗ್ಯದ ಕುರಿತು ಸಂಪೂರ್ಣ ವರದಿ ನೀಡುವಂತೆ ಸೂಚಿಸಿತ್ತು.
ಅದರಂತೆ ಜೈಲಿನ ವೈದ್ಯಾಧಿಕಾರಿಗಳು ದರ್ಶನ್ ಆರೋಗ್ಯದ ಕುರಿತು ನ್ಯಾಯಾಲಯಕ್ಕೆ ಇಂದು ವೈದ್ಯಕೀಯ ವರದಿ ಸಲ್ಲಿಸಬೇಕಿದೆ.




