ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಅವರ ಆರೋಗ್ಯದ ಬಗ್ಗೆ ಮಹತ್ವದ ಅಪ್‌ಡೇಟ್ ಸಿಕ್ಕಿದೆ. ದರ್ಶನ್ (Darshan) ಅವರ ಬೆನ್ನುನೋವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಇಂದು ನ್ಯಾಯಾಲಯಕ್ಕೆ ವೈದ್ಯಕೀಯ ವರದಿ ಸಲ್ಲಿಕೆಯಾಗಲಿದೆ.
ನಟ ದರ್ಶನ್ ಅವರಿಗೆ ಈಗ ಬೆನ್ನುನೋವು ಹೇಗಿದೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಟ್ರೀಟ್‌ಮೆಂಟ್‌ಗಾಗಿ ದರ್ಶನ್ ಜೈಲಿನಿಂದ ಹೊರಗೆ ಬರಲಿದ್ದಾರಾ ಎಂಬುದು ಇಂದಿನ ವರದಿಯ ಬಳಿಕ ಸ್ಪಷ್ಟವಾಗಲಿದೆ.
ಈ ಹಿಂದೆ ದರ್ಶನ್ ಅವರಿಗೆ ಫಿಸಿಯೋಥೆರಪಿ ನೀಡಿದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ನ್ಯಾಯಾಲಯವು ಸೂಚನೆ ನೀಡಿತ್ತು. ಅದರಂತೆ ಇಂದು ಜೈಲಿನ ವೈದ್ಯಾಧಿಕಾರಿಗಳಿಂದ ಮಹತ್ವದ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.
ವೈದ್ಯಾಧಿಕಾರಿಗಳಿಂದ ಕೋರ್ಟ್‌ಗೆ ವೈದ್ಯಕೀಯ ವರದಿ ಸಲ್ಲಿಕೆ
ಪರಪ್ಪನ ಅಗ್ರಹಾರ ಜೈಲಿನ ಚೀಫ್ ಮೆಡಿಕಲ್ ಆಫೀಸರ್ ಅವರಿಂದ ಇಂದು ನ್ಯಾಯಾಲಯಕ್ಕೆ ಈ ವೈದ್ಯಕೀಯ ವರದಿ ಸಲ್ಲಿಕೆಯಾಗಲಿದೆ ಎನ್ನಲಾಗಿದೆ. ದರ್ಶನ್ ಅವರ ಬೆನ್ನುನೋವು ಪ್ರಸ್ತುತ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇದರಲ್ಲಿ ಇರಲಿದೆ.
ದರ್ಶನ್ ಅವರಿಗೆ ಪ್ರತಿನಿತ್ಯ ಫಿಸಿಯೋಥೆರಪಿ ನೀಡುವ ಅಗತ್ಯವಿದೆಯೇ ಅಥವಾ ಬೇರೆ ರೀತಿಯ ಚಿಕಿತ್ಸೆ ಬೇಕೇ ಎಂಬ ವಿಚಾರಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಈ ಎಲ್ಲಾ ಅಂಶಗಳು ದರ್ಶನ್ ಅವರ ಮುಂದಿನ ಚಿಕಿತ್ಸೆಯ ಹಾದಿಯನ್ನು ನಿರ್ಧರಿಸಲಿವೆ.
ಇದನ್ನು ಓದಿ: Darshan Case: ಚಿಕಿತ್ಸೆಗಾಗಿ ದರ್ಶನ್ಗೆ ಹೊರಬರುವ ಅವಕಾಶವಿಲ್ಲ; ಜೈಲಿನಲ್ಲೇ ಚಿಕಿತ್ಸೆ ಒದಗಿಸಲು ನ್ಯಾಯಾಲಯ ಆದೇಶ
ಈ ಹಿಂದೆ 59ನೇ ಸಿಸಿಹೆಚ್ ಕೋರ್ಟ್ ದರ್ಶನ್ ಅವರಿಗೆ ಫಿಸಿಯೋಥೆರಪಿ ನೀಡುವಂತೆ ಆದೇಶ ಮಾಡಿತ್ತು. ಜೈಲಿನಲ್ಲೇ ಅಗತ್ಯ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಸರ್ಕಾರಿ ಅಥವಾ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸಂಸ್ಥೆಗೆ ರೆಫರ್ ಮಾಡಲು ಕೋರ್ಟ್ ಸೂಚಿಸಿತ್ತು.
Darshan: ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆಯಲಿದೆಯೇ ನ್ಯಾಯಾಲಯ?
ದರ್ಶನ್ ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಮತ್ತು ಜೈಲಿನಲ್ಲಿ ಈವರೆಗೆ ನೀಡಿರುವ ಚಿಕಿತ್ಸೆ ಬಗ್ಗೆ ವರದಿ ಸಲ್ಲಿಸಲು ನ್ಯಾಯಾಲಯ ಸ್ಪಷ್ಟ ಆದೇಶ ನೀಡಿತ್ತು. ಆ ಸೂಚನೆಯ ಮೇರೆಗೆ ಇಂದು ನ್ಯಾಯಾಧೀಶರ ಮುಂದೆ ಸಂಪೂರ್ಣ ವೈದ್ಯಕೀಯ ವರದಿ ಬರಲಿದೆ.
ಜೈಲಿನ ವೈದ್ಯರು ನೀಡುವ ವರದಿಯನ್ನು ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ. ವರದಿಯನ್ನು ಪರಿಶೀಲಿಸಿದ ಬಳಿಕ ಅಗತ್ಯವಿದ್ದಲ್ಲಿ ಸ್ವತಂತ್ರ ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆಯಬೇಕೇ ಅಥವಾ ನೇರವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲು ಅನುಮತಿ ನೀಡಬೇಕೇ ಎಂಬುದನ್ನು ನ್ಯಾಯಾಲಯವೇ ನಿರ್ಧರಿಸಲಿದೆ. ಒಟ್ಟಿನಲ್ಲಿ ಇಂದಿನ ಕೋರ್ಟ್ ಕಲಾಪವು ದರ್ಶನ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.




