ಕನ್ನಡ ಚಿತ್ರರಂಗಕ್ಕೆ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳನ್ನು ಕೊಟ್ಟಿರುವ ಹಿರಿಯ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್. ಬಹಳ ದಿನಗಳ ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ ‘ಅಮೆರಿಕಾ ಅಮೆರಿಕಾ–2’ (America America 2) ಇತ್ತೀಚೆಗೆ 50ನೇ ದಿನಗಳನ್ನು ಪೂರೈಸಿದೆ. ಇದೇ ಖುಷಿಯನ್ನು ತನ್ನ ತಂಡದೊಂದಿಗೆ ಹಿರಿಯ ನಿರ್ದೇಶಕ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು, ಕಲಾವಿದರು ಹಾಗೂ ಗಣ್ಯರು ಭಾಗವಹಿಸಿದ್ದರು.
‘ಅಮೆರಿಕಾ ಅಮೆರಿಕಾ–2’ ಬಹುನಿರೀಕ್ಷೆಯೊಂದಿಗೆ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಯುವಕರ ಪ್ರೀತಿ, ಸಂಬಂಧಗಳು, ಭಾವನೆಗಳು ಹಾಗೂ ಬದುಕಿನ ಆಯ್ಕೆಗಳ ಸುತ್ತ ಹೆಣೆದ ಕಥೆ ಪ್ರೇಕ್ಷಕರ ಗಮನ ಸೆಳೆದಿತ್ತು. ಇವರೇ ನಿರ್ದೇಶಿಸಿದ ‘ಅಮೆರಿಕಾ ಅಮೆರಿಕಾ’ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾ ಎನಿಸಿಕೊಂಡಿತ್ತು. ಈಗ 2ನೇ ಅವತರಣಿಕೆ ಕೂಡ 50ನೇ ದಿನಗಳ ಸಂಭ್ರಮಾಚರಣೆ ಮಾಡಿಕೊಂಡಿದೆ.
50 ದಿನಗಳನ್ನು ಪೂರೈಸಿದ ‘ಅಮೆರಿಕಾ ಅಮೆರಿಕಾ 2’
ಇದೇ ಖುಷಿಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದ ನಿರ್ಮಾಣ, ಅದರ ಹಿಂದಿನ ಅನುಭವಗಳು, ಚಿತ್ರೀಕರಣದ ಸಂದರ್ಭಗಳು ಹಾಗೂ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡುವಾಗ ಎದುರಾದ ಸವಾಲುಗಳ ಬಗ್ಗೆ ಮಾತಾಡಿದರು. ಸಿನಿಮಾ ತೆರೆಕಂಡ ಬಳಿಕ ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ದೊರೆಯುತ್ತಿರುವ ಮೆಚ್ಚುಗೆಯ ಕುರಿತು ಸಂತಸ ವ್ಯಕ್ತಪಡಿಸಿದರು. ಅದರೊಂದಿಗೆ ಸಿನಿಮಾದ ಗಳಿಕೆ ಬಗ್ಗೆ ಮಾತಾಡೋದು ತನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: America America 2 Review: ಅಂದಿನ ‘ಭೂಮಿ-ಸೂರ್ಯ-ಶಶಾಂಕ್’ರನ್ನ ನೆನಪಿಸಿದರೇ ‘ನುಡಿ-ನೀಲ್-ನಿನಾದ್’?
ಗಳಿಕೆಯ ಬಗ್ಗೆ ಮಾತನಾಡೋಕೆ ಇಷ್ಟವಿಲ್ಲ
“ಚಿತ್ರದ ಗಳಿಕೆಯ ಬಗ್ಗೆ ಮಾತನಾಡುವುದು ನನಗೆ ಇಷ್ಟವಿಲ್ಲದ ಸಂಗತಿ. ಇಂದಿಗೂ ವಿದೇಶಗಳಿಂದಲೂ ಅನೇಕ ಪ್ರೇಕ್ಷಕರು ಕರೆ ಮಾಡಿ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಹಿರಿಯ ಕಲಾವಿದರು ಹಾಗೂ ಚಿತ್ರರಂಗದ ಗಣ್ಯರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇವೆಲ್ಲವೂ ಕೋಟ್ಯಂತರ ರೂಪಾಯಿಗಳಿಗಿಂತಲೂ ಅಮೂಲ್ಯವಾದದ್ದು” ಎಂದು ಈ ಸಂಭ್ರಮದ ವೇಳೆ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಸಿನಿಮಾ ಕಥೆಯ ಕ್ಲೈಮ್ಯಾಕ್ಸ್ ಕುರಿತು ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಿದ್ದಾರೆ. ಪ್ರೇಕ್ಷಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕಥೆಯನ್ನು ರೂಪಿಸಿದ ಅನುಭವವನ್ನೂ ಹಂಚಿಕೊಂಡರು. ಸಿನಿಮಾದ ಪಾತ್ರಗಳು ಮತ್ತು ಅವುಗಳ ಭಾವನಾತ್ಮಕ ಆಯಾಮಗಳು ಪ್ರೇಕ್ಷಕರೊಂದಿಗೆ ಬೆಸೆದುಕೊಂಡಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ನಟಿಯರಾದ ಶಾನ್ವಿ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬಾರ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಿರಿಯ ನಟ ಮಂಡ್ಯ ರಮೇಶ್ ಅವರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಪಾತ್ರಗಳು ಹಾಗೂ ನಟನೆಯ ಬಗ್ಗೆ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಲೇಖಕಿಯರಾದ ಕುಸುಮಾ ಆಯರಹಳ್ಳಿ, ದೀಪಾ ಹಿರೇಗುತ್ತಿ ಹಾಗೂ ಚಿತ್ರದ ಮೂಲ ಕಾದಂಬರಿಯ ಲೇಖಕಿ ಸಹನಾ ವಿಜಯಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು, ಸಾಹಿತ್ಯ ಕ್ಷೇತ್ರದ ಗಣ್ಯರು ಮತ್ತು ಚಿತ್ರತಂಡದವರು ಉಪಸ್ಥಿತರಿದ್ದರು. ಇತ್ತೀಚೆಗೆ ಸಿನಿಮಾ ರಂಗದಲ್ಲಿ 50 ದಿನಗಳ ಸಂಭ್ರಮ ಮರೆತು ಹೋಗಿದೆ. ಇಂತಹ ಸಂದರ್ಭದಲ್ಲಿ ‘ಅಮೆರಿಕಾ ಅಮೆರಿಕಾ 2’ ತಂಡ 50ನೇ ದಿನದ ಸಂಭ್ರಮವು ಹೊಸ ಹುರುಪು ನೀಡಿದೆ.




