☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

MILK PRICE : ಎಣ್ಣೆಗೆ ಕಾಸು ಕೊಡೋರು ಹಾಲಿಗೆ ಯಾಕೆ ಕೊಡಲ್ಲ..? – ಏನ್ರಿ ಕುಲಕರ್ಣಿ ನಿಮ್ಮ ಉದ್ಧಟತನ..!

Image of Vinay Kulakarni about Milk price
ದೀಪಾವಳಿ ಮುಗಿಯುತ್ತಿದ್ದಂತೆ ಹಾಲು (Milk price), ಮೊಸರು & ಬಸ್ ಪ್ರಯಾಣ ದರ ಏರಿಕೆಯಾಗಿದ್ದು ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಮುಖ್ಯಾಂಶಗಳು

  • ವಿನಯ್ ಕುಲಕರ್ಣಿ ಅಸಂಬದ್ಧ ಹೇಳಿಕೆ
  • ಹಾಲಿನ ಜೊತೆಗೆ ಮದ್ಯದ ಹೋಲಿಕೆ
  • ವಿಪಕ್ಷಗಳ ಆಕ್ರೋಶ

ಧಾರವಾಡ : ದೀಪಾವಳಿ ಮುಗಿಯುತ್ತಿದ್ದಂತೆ ಹಾಲು (Milk price), ಮೊಸರು ಮತ್ತು ಬಸ್ ಪ್ರಯಾಣ ದರ ಏರಿಕೆಯಾಗಿದ್ದು ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ನಿರ್ಧಾರವನ್ನು ವಿರೋಧಿಸಿ ಸಾರ್ವಜನಿಕರು ಮತ್ತು ವಿಪಕ್ಷಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವಾಗಲೇ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹಾಲಿನ ದರ ಹೆಚ್ಚಳದಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ. ತಾವು ರಾಜಕಾರಣಿಯಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಣ್ಣ ಮದ್ಯದ ಬಾಟಲಿಗೆ ನೂರು ರೂಪಾಯಿ ಕೊಟ್ಟು ಕುಡಿಯುವವರು ಒಂದು ಲೀಟರ್ ಹಾಲನ್ನು ಏಕೆ ಕುಡಿಯಬಾರದು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಕಬ್ಬು ಬೆಳೆಗಾರರ ಹೋರಾಟ ಮತ್ತು ರೈತರ ಬಂಧನದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ರೈತರ ಪರಿಸ್ಥಿತಿ ಸರಿಯಿಲ್ಲ, ಡೀಸೆಲ್, ಕೀಟನಾಶಕ, ಕಾರ್ಮಿಕರ ಕೂಲಿ ಸೇರಿದಂತೆ ಎಲ್ಲ ವೆಚ್ಚಗಳು ಏರಿಕೆಯಾಗಿವೆ, ಹಳೆಯ ಬೆಲೆ ರೈತರಿಗೆ ಸಿಗುತ್ತಿಲ್ಲ, ಅವರು ತಮ್ಮ ಒಳಿತಿಗಾಗಿ ಒತ್ತಾಯಿಸುತ್ತಿರುವುದರಲ್ಲಿ ತಪ್ಪಿಲ್ಲ ಮತ್ತು ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

ಸಾರಿಗೆ ಇಲಾಖೆ ದಿವಾಳಿಯಾಗಿದೆ..!

ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಸರ್ಕಾರ ಜನರ ಮೇಲೆ ಬಲವಂತವಾಗಿ ತೆರಿಗೆ ಮತ್ತು ಬೆಲೆ ಏರಿಕೆಯ ಹೊರೆ ಹೇರುತ್ತಿದೆ ಎಂದು ಆರೋಪಿಸಿದ್ದಾರೆ. ಸಾರಿಗೆ ಇಲಾಖೆಯನ್ನು ಕಾಂಗ್ರೆಸ್ ಸಂಪೂರ್ಣ ಹಾಳುಮಾಡಿದೆ, ಬಸ್ ಗಳಿಗೆ ಬ್ಯಾಟರಿ, ಸ್ಟೇರಿಂಗ್ ಗಳೇ ಇಲ್ಲದೆ ತಳ್ಳುವ ಸ್ಥಿತಿಗೆ ತಂದಿದೆ ಎಂದು ಟೀಕಿಸಿದ್ದಾರೆ. ಸರ್ಕಾರ ದಿವಾಳಿಯಾಗಿದೆ, ಈ ನಿರ್ಧಾರದಿಂದ ಕಾಂಗ್ರೆಸ್ ಜನರಿಗೆ ಕರಾಳ ದಿನ ತೋರಿಸಿದೆ ಎಂದು ಹೇಳಿದ ಅವರು, ಏರಿಸಿದ ದರಗಳನ್ನು ಸಂಪೂರ್ಣ ಹಿಂಪಡೆಯುವವರೆಗೆ ಮುಂದಿನ ಒಂದು ವಾರ ಪ್ರತಿಭಟನೆ ಮುಂದುವರಿಸುವುದಾಗಿ ಮತ್ತು ಮುಂಬರುವ ಚಳಿಗಾಲದ ಅಧಿವೇಶನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಪ್ರತಿ ಟನ್ ಕಬ್ಬಿಗೆ 3,600 ರೂ. ನಿಗದಿ, 12 ದಿನಗಳ ಬೆಳಗಾವಿ ರೈತ ಹೋರಾಟಕ್ಕೆ ತೆರೆ

ವಿನಯ್ ಕುಲಕರ್ಣಿ ಅವರ ಹಾಲು – ಮದ್ಯದ ಹೋಲಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಾಲು ಅಗತ್ಯ ವಸ್ತು, ಮದ್ಯ ಐಚ್ಛಿಕ ಚಟ. ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗ, ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬುದು ನಿಜವಾದರೂ ಅದರ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ಹಾಕುವುದೇ ಏಕೈಕ ದಾರಿಯೇ ಎಂಬ ಅನುಮಾನವೂ ಇದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಖಜಾನೆ ಖಾಲಿ ಮಾಡಿಕೊಂಡು ನಂತರ ಹಾಲು, ಬಸ್ ದರ ಏರಿಸುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಸರ್ಕಾರ ಸ್ಪಷ್ಟ ಲೆಕ್ಕ ನೀಡಬೇಕಿದೆ. ಇಲ್ಲದಿದ್ದರೆ ಪ್ರತಿಯೊಂದು ದರ ಏರಿಕೆಯೂ ರಾಜಕೀಯ ಕಿಡಿ ಹೊತ್ತಿಸಿ ಜನರ ಆಕ್ರೋಶ ಹೆಚ್ಚಿಸಲಿದೆ.