MEKEDATU: ಮೇಕೆದಾಟು ಅಣೆಕಟ್ಟೆಗೆ ಒಂದೇ ಒಂದು ಕಲ್ಲಿಡಲು ಬಿಡಲ್ಲವಂತೆ – ತಮಿಳುನಾಡು ಬೃಹನ್ನಾಟಕ

ಕರ್ನಾಟಕ ಸರ್ಕಾರ ಪ್ರತಿಷ್ಠಿತವಾಗಿ ಪರಿಗಣಿಸಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಕಠಿಣ ನಿಲುವು ಪ್ರದರ್ಶಿಸಿದೆ. ವಿಧಾನಸಭೆಯಲ್ಲಿ ಈ ವಿಚಾರವಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ, ತಮಿಳುನಾಡು ಜಲಸಂಪನ್ಮೂಲ ಸಚಿವ ಎನ್. ಆನಂದ್ ಅವರು, ಕರ್ನಾಟಕ ಮೇಕೆದಾಟಿನಲ್ಲಿ ಯಾವುದೇ ಕಾರಣಕ್ಕೂ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ರಾಜ್ಯದ ಜಲ ಹಕ್ಕನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗೆ ಒಂದು ಕಲ್ಲನ್ನೂ ಇಡಲು ಬಿಡುವುದಿಲ್ಲ ಎಂದು ಅವರು ಉದ್ಧಟನ ಮೆರೆದಿದ್ದಾರೆ.

ಕಾವೇರಿ ಜಲ ಹಂಚಿಕೆ ವಿವಾದದಲ್ಲಿ ತಮಿಳುನಾಡು ಸರ್ಕಾರ ಕಾನೂನುಬದ್ಧ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ತನ್ನ ಹೋರಾಟವನ್ನು ಮುಂದುವರಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ, ಮೇಕೆದಾಟು ಯೋಜನೆಯು ಜಾರಿಯಾದರೆ ಕೆಳಭಾಗದ ರಾಜ್ಯವಾದ ತಮಿಳುನಾಡಿಗೆ ದೊರೆಯುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಜೂನ್ ತಿಂಗಳಲ್ಲೇ ವಿಧಾನಸಭೆಯಲ್ಲಿ ಯೋಜನೆಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದ್ದು, ಇದೀಗ ಸಚಿವರ ಆಕ್ರಮಣಕಾರಿ ಹೇಳಿಕೆ ಎರಡೂ ರಾಜ್ಯಗಳ ನಡುವಿನ ಜಲವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಕಾವೇರಿ ನೀರಿನ ಹಂಚಿಕೆ ಕೇವಲ ಒಂದು ತಾಂತ್ರಿಕ ವಿಷಯವಾಗಿ ಉಳಿಯದೆ, ದಶಕಗಳಿಂದಲೂ ರಾಜಕೀಯ ಮತ್ತು ಪ್ರಾದೇಶಿಕ ಅಸ್ಮಿತೆಯ ವಿಷಯವಾಗಿ ಮಾರ್ಪಟ್ಟಿದೆ. ಕರ್ನಾಟಕದ ದೃಷ್ಟಿಯಲ್ಲಿ ಮೇಕೆದಾಟು ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮತ್ತು ವಿದ್ಯುತ್ ಉತ್ಪಾದನೆಗೆ ಅತ್ಯಗತ್ಯವಾಗಿದ್ದರೆ, ತಮಿಳುನಾಡು ಇದನ್ನು ತನ್ನ ಕೃಷಿ ಹಿತಾಸಕ್ತಿಗೆ ಅಪಾಯವೆಂದು ಭಾವಿಸಿದೆ. ಇಂತಹ ಸಂದರ್ಭಗಳಲ್ಲಿ, ತಾಂತ್ರಿಕ ಸಮಿತಿಗಳ ವರದಿಗಳನ್ನು ಆಧರಿಸಿ ಮಾತುಕತೆ ನಡೆಸುವ ಬದಲು, ರಾಜಕೀಯ ವೇದಿಕೆಗಳಲ್ಲಿ ಇಂತಹ ಸವಾಲುಗಳು ಮತ್ತು ಹೇಳಿಕೆಗಳು ಹೆಚ್ಚಾಗುತ್ತಿರುವುದು ವಿವಾದವನ್ನು ಇನ್ನಷ್ಟು ಜಟಿಲಗೊಳಿಸುತ್ತದೆ.