ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ, ಎಸ್ .ಐ.ಆರ್ (SIR) ವಿರುದ್ಧ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹಾಗೂ ವಿಪಕ್ಷಗಳು ಬಲವಾದ ಪ್ರತಿರೋಧ ತೋರುತ್ತಿರುವ ಸಮಯದಲ್ಲೇ ಕರ್ನಾಟಕದ ಕಾಂಗ್ರೆಸ್ ಒಳಗಿನಿಂದಲೇ ಬೇರೆಯದ್ದೇ ಧ್ವನಿ ಹೊರಬಿದ್ದಿದೆ. ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಅಂದರೆ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟುಮಾಡಿದ್ದಾರೆ. ಪಕ್ಷವು ಈ ಪ್ರಕ್ರಿಯೆಯನ್ನು ವಿರೋಧಿಸಿ ಹೋರಾಟಕ್ಕೆ ಇಳಿದಿರುವಾಗ, ರಾಜ್ಯದ ಹಿರಿಯ ಸಚಿವರೇ ಅದನ್ನು ಸಮರ್ಥಿಸಿಕೊಂಡಿರುವುದು ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
99.32 ಲಕ್ಷ ಮತದಾರರ ಹೆಸರುಗಳು ಡಿಲೀಟ್..!
ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 99.32 ಲಕ್ಷ ಮತದಾರರ ಹೆಸರುಗಳು ವಿವಿಧ ಕಾರಣಗಳಿಂದ ತೆಗೆದುಹಾಕಲ್ಪಟ್ಟಿದ್ದು, ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.55 ಕೋಟಿಗೆ ಕುಸಿದಿದೆ ಎಂಬ ವಿಚಾರ ಈಗ ದೊಡ್ಡ ಚರ್ಚೆಯಾಗುತ್ತಿದೆ. ಈ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ, ಕರ್ನಾಟಕದಲ್ಲಿ ನಡೆದಿರುವ ಈ ಪರಿಷ್ಕರಣೆಯಲ್ಲಿ ಯಾವುದೇ ಲೋಪವಿಲ್ಲ ಮತ್ತು ಇದಕ್ಕೆ ನಮ್ಮ ವಿರೋಧವೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷದ ಹೋರಾಟವು ಕರ್ನಾಟಕದ ವಿರುದ್ಧವಲ್ಲ, ಬದಲಿಗೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ವಿರುದ್ಧ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರಮಟ್ಟದ ನಾಯಕತ್ವ ಚುನಾವಣಾ ಆಯೋಗದ ನೀತಿಗಳನ್ನು ಖಂಡಿಸುತ್ತಿರುವಾಗಲೇ, ರಾಜ್ಯ ಸಚಿವರೊಬ್ಬರು ಇದಕ್ಕೆ ವ್ಯತಿರಿಕ್ತ ನಿಲುವು ತೆಗೆದುಕೊಂಡಿರುವುದು ಪಕ್ಷಕ್ಕೆ ಮುಜುಗರ ತಂದಿದೆ.
ಇದನ್ನೂ ಓದಿ : 28 ಸ್ಥಾನಗಳಲ್ಲಿ ಒಂದೇ ಒಂದು ಗೆಲುವು ದಕ್ಕಿಸಿಕೊಂಡ ಕಾಂಗ್ರೆಸ್ – ತೀವ್ರ ಮುಖಭಂಗ
ಒಂದೇ ಪಕ್ಷದೊಳಗೆ ರಾಷ್ಟ್ರೀಯ ನಿಲುವು ಮತ್ತು ರಾಜ್ಯ ನಾಯಕರ ಹೇಳಿಕೆ ನಡುವೆ ಇಷ್ಟು ದೊಡ್ಡ ವ್ಯತ್ಯಾಸ ಕಾಣಿಸಿಕೊಳ್ಳುವುದು ಕಾಂಗ್ರೆಸ್‌ನ ಆಂತರಿಕ ಹೊಂದಾಣಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಮತದಾರರ ಪಟ್ಟಿಯಿಂದ ಸುಮಾರು ಒಂದು ಕೋಟಿ ಹೆಸರುಗಳು ಕೈಬಿಟ್ಟಿರುವುದು ಸಾಮಾನ್ಯ ಸಂಗತಿಯಲ್ಲ, ಇದರ ಹಿಂದೆ ನಿಜವಾದ ಕಾರಣಗಳೇನು ಎಂಬುದನ್ನು ಜನರ ಮುಂದೆ ಪಾರದರ್ಶಕವಾಗಿ ಇಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಒಂದು ಕಡೆ ಪಕ್ಷವು ದೇಶಾದ್ಯಂತ ಮತದಾರರ ಹಕ್ಕುಗಳ ರಕ್ಷಣೆಗೆ ಹೋರಾಡುತ್ತೇವೆ ಎನ್ನುತ್ತಿದ್ದರೆ, ಮತ್ತೊಂದು ಕಡೆ ರಾಜ್ಯದಲ್ಲಿ ಅದೇ ಪ್ರಕ್ರಿಯೆ ಸರಿಯಾಗಿದೆ ಎನ್ನುವುದು ಮತದಾರರಲ್ಲಿ ಗೊಂದಲ ಮೂಡಿಸುತ್ತದೆ. ಇದು ವಿಪಕ್ಷಗಳಿಗೆ ಟೀಕೆಗೆ ಅಸ್ತ್ರವಾಗುವುದರ ಜೊತೆಗೆ, ಚುನಾವಣಾ ಪಾರದರ್ಶಕತೆಯ ಕುರಿತಾದ ಕಾಂಗ್ರೆಸ್‌ನ ಹೋರಾಟದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.




